ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಜಾತ್ರೆಗೆ ಭರದ ಸಿದ್ಧತೆ: ಹೊಟ್ಟಿ

ಸಮ್ಮೇಳನದಲ್ಲಿ ಒಟ್ಟು 12 ಪುಸ್ತಕಗಳ ಬಿಡುಗಡೆ
Last Updated 21 ಡಿಸೆಂಬರ್ 2018, 14:19 IST
ಅಕ್ಷರ ಗಾತ್ರ

ಯಾದಗಿರಿ: ‘ನಗರದಲ್ಲಿ ಡಿ.24 ಮತ್ತು ಡಿ.25 ನಡೆಯಲಿರುವ ನಾಲ್ಕನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಬೃಹತ್ ಡಿಜಿಟಲ್ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ವೇದಿಕೆಯ ಮಹಾಮಂಟಪಕಕ್ಕೆ ವಿಶ್ವರಾಧ್ಯರ ಹೆಸರಿಡಲಾಗಿದೆ. ಅದರಂತೆ ಪ್ರಧಾನ ವೇದಿಕೆಗೆ ಜಿ.ಎಂ. ಗುರುಸಿದ್ದ ಶಾಸ್ತ್ರಿ, ಮಹಾದ್ವಾರಕ್ಕೆ ಚಿಂತನಳ್ಳಿಯ ಗವಿ ಸಿದ್ದಲಿಂಗೇಶ್ವರ ಎಂದು ನಾಮಕರಣ ಮಾಡಲಾಗಿದೆ. ಐದು ಮಹಾದ್ವಾರಗಳನ್ನು ಮಹನೀಯರ ಹೆಸರಿನಲ್ಲಿ ನಿರ್ಮಾಣ ಮಾಡಲಾಗಿದೆ’ ಎಂದು ತಿಳಿಸಿದರು.

‘ಸಮ್ಮೇಳನದಲ್ಲಿ ಒಟ್ಟು 12 ಪುಸ್ತಕಗಳು ಹಾಗೂ ಸ್ಮರಣ ಸಂಚಿಕೆ ಬಿಡುಗಡೆಯಾಗಲಿವೆ. ಜಿಲ್ಲೆಯ ಯುವ ಸಾಹಿತಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡಲಾಗಿದೆ. ಮೆರವಣಿಗೆ ಮೈಲಾಪುರ ಅಗಸಿಯಿಂದ ವಿವಿಧ ಸಂಗೀತ ವಾದ್ಯಗಳು, ಕಲಾ ತಂಡಗಳೊಂದಿಗೆ ಪ್ರಧಾನ ವೇದಿಕೆಯವರೆಗೆ ಸಮ್ಮೇಳನಾ ಅಧ್ಯಕ್ಷರ ಮೆರವಣಿಗೆ ನಡೆಯಲಿದೆ’ ಎಂದರು.

‘ಹಣಕಾಸು, ಮೆರವಣಿಗೆ, ಆಹಾರ, ಪ್ರಚಾರ ಮತ್ತು ವೇದಿಕೆ ಒಳಗೊಂಡಂತೆ ಹಲವು ಸಮಿತಿಗಳನ್ನು ರಚಿಸಲಾಗಿದೆ. ಎಲ್ಲಾ ಪದಾಧಿಕಾರಿಗಳು ಕ್ರಿಯಾಶೀಲವಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಜಿಲ್ಲಾ ಕಾರ್ಯಕಾರಣಿ ಸಮಸ್ತ ಸದಸ್ಯರು ಕೂಡ ಸಮ್ಮೇಳನದ ಯಶಸ್ವಿಗೆ ಕೈಜೋಡಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಸಾಹಿತಿ ಅಯ್ಯಣ್ಣ ಹುಂಡೇಕಾರ ಮಾತನಾಡಿ,‘ಗಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಜಿಲ್ಲೆಯ ಮೆರುಗು ಹೆಚ್ಚಲಿದೆ. ಸಮಸ್ತ ಕನ್ನಡಿಗರು ಪಾಲ್ಗೊಂಡು ಸಮ್ಮೇಳನದ ಯಶಸ್ವಿಗೊಳಿಸಬೇಕು’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ.ಸುಭಾಶ್ಚಂದ್ರ ಕೌಲಗಿ ಮಾತನಾಡಿ,‘ಜಿಲ್ಲೆ ಮತ್ತು ಹೈದರಾಬಾದ್ ಕರ್ನಾಟಕದ ಪ್ರಸಕ್ತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ದೃಷ್ಟಿಯಿಂದ ಎರಡು ಕವಿಗೋಷ್ಠಿ ಸಮ್ಮೇಳನದಲ್ಲಿ ಆಯೋಜಿಸಲಾಗಿದೆ. ಸಮ್ಮೇಳನಕ್ಕೆ ಜಿಲ್ಲೆ ಮತ್ತು ನಾಡಿನ ಹೆಸರಾಂತ ಸಾಹಿತಿಗಳನ್ನು ಆಹ್ವಾನಿಸಲಾಗಿದೆ’ ಎಂದು ತಿಳಿಸಿದರು.

ಪ್ರಕಾಶ ಅಂಗಡಿ, ಸುಭಾಶ ಆಯೇರಕರ್, ಡಾ.ಭೀಮರಾಯ ಲಿಂಗೇರಿ, ಡಾ.ಎಸ್.ಎಸ್. ನಾಯಕ್, ನಾಗೇಂದ್ರಪ್ಪ ಜಾಜಿ, ಆರ್.ಮಹಾದೇವಪ್ಪಗೌಡ ಅಬ್ಬೆತುಮಕೂರ, ಸಿದ್ದಲಿಂಗಪ್ಪ ಮುನಗಲ್, ಶ್ರೀನಿವಾಸ ಜಾಲವಾದಿ, ಬಸರೆಡ್ಡಿ ಸಾವುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT