ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗರ ನಾಡಿನದು ಶ್ರೇಷ್ಠ ಸಂಸ್ಕೃತಿ: ಪದ್ಮಶ್ರೀ ಪುರಸ್ಕೃತ ಸಂಶೋಧಕ ಡಾ. ಕೆ.ಪದ್ದಯ್ಯ

ಹುಣಸಗಿಯಲ್ಲಿ ಪದ್ಮಶ್ರೀ ಪುರಸ್ಕೃತ ಸಂಶೋಧಕ ಡಾ.ಕೆ.ಪದ್ದಯ್ಯಗೆ ಸನ್ಮಾನ
Last Updated 17 ನವೆಂಬರ್ 2021, 4:30 IST
ಅಕ್ಷರ ಗಾತ್ರ

ಹುಣಸಗಿ: ‘ಸಗರ ನಾಡು ಅತ್ಯಂತ ಶ್ರೇಷ್ಠ ಸಂಸ್ಕೃತಿಯನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ವಿಶ್ವವೇ ಗುರುತಿಸಿ ಹುಬ್ಬೇರಿಸುವಂತೆ ಮಾಡಿದ ತಾಣವಾಗಿದೆ’ ಎಂದು ಪದ್ಮಶ್ರೀ ಪುರಸ್ಕೃತ ಸಂಶೋಧಕ ಡಾ. ಕೆ.ಪದ್ದಯ್ಯ ಅಭಿಪ್ರಾಯಪಟ್ಟರು.

ಹುಣಸಗಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗರಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ’ವಿಶ್ವದಲ್ಲಿ ಅನೇಕ ದೇಶಗಳು ಉದಯಿಸದೇ ಇರುವ ಕಾಲದಲ್ಲಿಯೇ ಇಲ್ಲಿ ಆದಿವಾಸಿಗಳು ವಾಸಿಸುತ್ತಿದ್ದರು. ಇಲ್ಲಿ ದೊರೆತಿರುವ ಪಳೆಯುಳಿಕೆಗಳು, ಶಿಲಾ ಆಯುಧಗಳೇ ಇದನ್ನು ಸಾಕ್ಷಿಕರಿಸುತ್ತವೆ‘ ಎಂದರು.

’ಸುಮಾರು ನಾಲ್ಕು ದಶಕಗಳ ಹಿಂದೆ ಈ ಇತಿಹಾಸ ಹೆಕ್ಕಿ ತೆಗೆಯುವಾಗ ಇಲ್ಲಿನ ಜನರು ನೀಡಿದ ಸಹಕಾರ ಮತ್ತು ಪ್ರೀತಿ ಎಂದಿಗೂ ನನ್ನ ಜೀವನದಲ್ಲಿ ಮರೆಯದ ಕ್ಷಣವಾಗಿದೆ’ ಎಂದರು. ಅಂದು ಕ್ಷೇತ್ರ ಕಾರ್ಯದಲ್ಲಿ ನೆರವಾದ ಮಹಾಂತಸ್ವಾಮಿ ಹಿರೇಮಠ, ಬಸಪ್ಪ ಅಮರಣ್ಣನವರ, ಬಸಪ್ಪ ಕಡೇಮನಿ, ಭೀಮಣ್ಣ ಡಂಗಿ, ಡಾ. ಬಿರಾದಾರ ಸೇರಿದಂತೆ ಇತರರನ್ನು ಸ್ಮರಿಸಿ ಕೆಲ ಹೊತ್ತು ಗದ್ಗದಿತರಾದರು.

’ಹುಣಸಗಿ ಪಟ್ಟಣ ಪಂಚಾಯಿತಿಯಲ್ಲಿ ಅಂದು ನಿರ್ಮಿಸಿದ ಶಿಲಾಯುಧಗಳು ಹಾಗೂ ಪಳೆಯುಳಿಕೆಯ ಸಂಗ್ರಹಾಲಯ ದೇಶದಲ್ಲಿಯೇ ಅತ್ಯುತ್ತಮ ಗ್ರಾಮೀಣ ಮ್ಯೂಜಿಯಂ ಆಗಿದೆ. ನನಗೆ ದೊರೆತ ಪದ್ಮಶ್ರೀ ಪ್ರಶಸ್ತಿ ಇಲ್ಲಿನ ಎಲ್ಲ ಹಳ್ಳಿಗಳ ಜನರಿಗೆ ಸಲ್ಲುತ್ತದೆ‘ ಎಂದರು.

ಅಂದು ಕ್ಷೇತ್ರ ಕಾರ್ಯದಲ್ಲಿ ನೆರವಾದವರ ಕುಟುಂಬಗಳನ್ನು ಭೇಟಿ ಮಾಡಿ, ಅವರ ಮಕ್ಕಳನ್ನು ತಬ್ಬಿಕೊಂಡ ಕ್ಷಣ ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿ ಮಾಡಿತು.

ನಿವೃತ್ತ ಇಂಧನ ಅಧಿಕಾರಿ ನಾಗಪ್ಪ ಅಡಿಕ್ಯಾಳ ಮಾತನಾಡಿ, ‘ಡಾ.ಕೆ.ಪದ್ದಯ್ಯ ಅವರ ಶ್ರಮ ಹಾಗೂ ಹತ್ತಾರು ವರ್ಷಗಳ ಕಾಲ ಕೈಗೊಂಡಿದ್ದ ಕ್ಷೇತ್ರ ಕಾರ್ಯದಿಂದ ನಮ್ಮ ಭಾಗದ ಮಹತ್ವ ಹಾಗೂ ಇತಿಹಾಸ ತಿಳಿದುಕೊಳ್ಳಲು ಸಹಾಯಕವಾಯಿತು. ಈ ಭಾಗದಲ್ಲಿ ಇನ್ನೂ ಹೆಚ್ಚು ಸಂಶೋಧನೆಗಳು ನಡೆಯಲಿ’ ಎಂದರು.

ಡಾ. ಎಸ್.ಕೆ ಅರುಣಿ, ಹಿರಿಯ ಸಾಹಿತಿ ವಿರೇಶ ಹಳ್ಳೂರ, ಷಣ್ಮುಖಪ್ಪಗೌಡ ಪೊಲೀಸ್ ಪಾಟೀಲ, ಬಸವರಾಜಸ್ವಾಮಿ ಸ್ಥಾವರಮಠ ಮಾತನಾಡಿದರು.ಬಳಿಕ ಹುಣಸಗಿ ಪಟ್ಟಣ ಪಂಚಾಯಿತಿ ಹಾಗೂ ನಾಗರಿಕರು ಸನ್ಮಾನಿಸಿದರು.ಪಂಚಾಯಿತಿ ಅಧಿಕಾರಿ, ತಿಪ್ಪೇಸ್ವಾಮಿ, ಬಸವರಾಜ ಮಲಗಲದಿನ್ನಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ, ಬಿ.ಎಲ್. ಹಿರೇಮಠ, ಮಲ್ಲಿಕಾರ್ಜುನ ಸ್ಥಾವರಮಠ, ಆರ್.ಎ.ಸುಣಗಾರ, ಮಶಾಕ ಯಾಳಗಿ, ಡಾ.ವೀರಭದ್ರಗೌಡ ಹೊಸಮನಿ, ಬಸವರಾಜ ಮೇಲಿನಮನಿ ಇದ್ದರು. ನಾಗನಗೌಡ ಪಾಟೀಲ ಸ್ವಾಗತಿಸಿದರು. ಪಾಟೀಲ ಬಸನಗೌಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT