ಶಹಾಪುರ: ಕಲ್ಯಾಣ ಚಾಳುಕ್ಯರ ಆಳ್ವಿಕೆಗೆ ಒಳಪಟ್ಟಿದ್ದ ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಕ್ರಿ.ಶ 1ನೇ ಶತಮಾನಕ್ಕೆ ಸೇರಿದ ಶಾತವಾಹನರ ಕಾಲದ ಶಾಸನಗಳು ಲಭ್ಯವಾಗಿವೆ. ಪ್ರಮುಖ ವ್ಯಾಪಾರಿ ಕೇಂದ್ರವೂ ಆಗಿತ್ತು. ರಾಷ್ಟ್ರಕೂಟರ ಕಾಲದಲ್ಲಿಯೂ ಮುಖ್ಯ ಪಟ್ಟಣವಾಗಿತ್ತು. ಇಂತಹ ಮಹತ್ವ ಸಾರುವ ಗ್ರಾಮದ ದೇವಾಲಯಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ ಕಾಮಗಾರಿಗೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆ ₹75ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದೆ.
‘ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳ ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಮೊದಲ ಹಂತದಲ್ಲಿ ₹15 ಕೋಟಿಗೆ ಅನುಮೋದನೆ ನೀಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ದಕ್ಷಿಣದ ವಾರಣಾಸಿ ಎಂದು ಕರೆಯಲ್ಪಡುವ ಪವಿತ್ರ ಕ್ಷೇತ್ರ ಶಿರವಾಳವನ್ನು ಶಾಸನಗಳಲ್ಲಿ ‘ಸಿರಿಹೊಳಲು’ ಎಂದು ಕರೆಯಲಾಗಿದೆ. ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಾಚೀನ ಸ್ಮಾರಕಗಳು ಇಂದಿಗೂ ಉಳಿದುಕೊಂಡಿವೆ. ಅವುಗಳಲ್ಲಿ 34 ದೇವಾಲಯಗಳು, ಐದಕ್ಕೂ ಹೆಚ್ಚು ಬಾವಿಗಳಿವೆ. ಒಳಭಾಗದಲ್ಲಿ ರಾಮಾಯಣ, ಮಹಾಭಾರತ, ಭಾಗವತ ಮತ್ತು ಪಂಚತಂತ್ರ ಕಥನ ಶಿಲ್ಪಗಳು ಒಳಗೊಂಡಿದೆ. ಅಲ್ಲದೆ ಶಿರವಾಳದ ಏಳು ದೇವಾಲಯಗಳು ರಾಷ್ಟ್ರಕೂಟರ ಕಾಲದಲ್ಲಿ ರಚನೆಯಾಗಿವೆ’ ಎಂದು ಶಿಲಾ ಶಾಸನಗಳ ತಜ್ಞ ಡಾ.ಮೋನಪ್ಪ ಶಿರವಾಳ ಹೇಳುತ್ತಾರೆ.
ರಾಜ್ಯದ ಕಲೆ, ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ ಅಲ್ಲದೆ ಮುಂದಿನ ಯುವ ಪೀಳಿಗೆಗೆ ಸಂರಕ್ಷಿಸಿದಂತೆ ಆಗುತ್ತದೆ. ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವುದರಿಂದ ಅಧಿಕ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ದೊರಕಲಿವೆ. ನಿರುದ್ಯೋಗ ಸಮಸ್ಯೆ ಬಗೆಹರಿಸಿದಂತೆ ಆಗುತ್ತದೆ ಎಂದು ವರ್ಷದ ಹಿಂದೆ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಶಿರವಾಳ ಗ್ರಾಮಕ್ಕೆ ಭೇಟಿ ನೀಡಿದಾಗ ಮಾಜಿ ಶಾಸಕ ಗುರು ಪಾಟೀಲ ನೇತೃತ್ವದಲ್ಲಿ ಹಾಗೂ ಗ್ರಾಮಸ್ಥರು ಕೂಡಿ ಮನವಿ ಸಲ್ಲಿಸಲಾಗಿತ್ತು ಎನ್ನುತ್ತಾರೆ ಗ್ರಾಮದ ಮುಖಂಡ ಮರೆಪ್ಪ ಪ್ಯಾಟಿ.
ಪ್ರವಾಸಿ ತಾಣ ಅನುದಾನದಲ್ಲಿ ತಾರತಮ್ಯ: ತಾಲ್ಲೂಕಿನಲ್ಲಿ ಹಲವಾರು ಇತಿಹಾಸ ವೈಭವ ಸಾರುವ ಪ್ರವಾಸಿತಾಣಗಳನ್ನು ಅಭಿವೃದ್ಧಿಪಡಿಸಲು ವಿಫಲ ಅವಕಾಶವಿದೆ. ಶಿರವಾಳ ಅಭಿವೃದ್ಧಿ ಪಡಿಸಿದಂತೆ ಉಳಿದ ಪ್ರವಾಸಿ ತಾಣಗಳಿಗೆ ಅನುದಾನ ಒದಗಿಸುವಲ್ಲಿ ಸಚಿವರು ತಾರತಮ್ಯ ನೀತಿ ಅನುಸರಿದ್ದಾರೆ ಇತಿಹಾಸ ತಜ್ಞ ಭಾಸ್ಕರರಾವ ಮುಡಬೂಳ ಬೇಸರ ವ್ಯಕ್ತಪಡಿಸಿದ್ದಾರೆ.
ಅದರಲ್ಲಿ ಮುಖ್ಯವಾಗಿ ಬುದ್ದ ಮಲಗಿದ ದೃಶ್ಯ(ಸ್ಲಿಪಿಂಗ್ ಬುದ್ದ), ದಿಗ್ಗಿ ಅಗಸಿ ಕೋಟೆ, ವಿಭೂತಿಹಳ್ಳಿಯ ಕಾಲ ನಿರ್ಣಯ ಕಲ್ಲುಗಳು, ವಜ್ರ ನಿಕ್ಷೇಪ ದೊರೆತ ಬಗ್ಗೆ ಕುರುಹು ಇರುವ ತಾಲ್ಲೂಕಿನ ಕೊಳ್ಳುರ ಗ್ರಾಮದ ಕೃಷ್ಣಾ ನದಿ ತಟದ ವೃಂದಾವನ ಗಡ್ಡೆ ಹೀಗೆ ಇನ್ನೂ ಹೆಚ್ಚಿನ ಇತಿಹಾಸ ಸಾರುವ ಸ್ಮಾರಕಗಳ ಅಭಿವೃದ್ಧಿಗೆ ಅನುದಾನ ಒದಗಿಸಬೇಕಾಗಿತ್ತು ಎಂದು ಅವರು ಸಲಹೆ ನೀಡಿದ್ದಾರೆ.
ಶಿರವಾಳ ಗ್ರಾಮದ ಎಲ್ಲಾ ದೇವಾಲಯಗಳ ಸಮಗ್ರ ಅಭಿವೃದ್ಧಿ ಸಂರಕ್ಷಣೆ ಕಾಮಗಾರಿಗೆ ₹75ಕೋಟಿ ಅನುದಾನ ಒದಗಿಸಲು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ದೊರಕಿದೆ. ಪ್ರವಾಸಿ ತಾಣವನ್ನಾಗಿ ಅಭಿವೃದ್ದಿ ಪಡಿಸಲಾಗುವುದುಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.