ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ಜಿಲ್ಲಾಸ್ಪತ್ರೆಯಲ್ಲೂ ಮಾದರಿ ಸಂಗ್ರಹ

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರಿಂದ ಸಿದ್ಧತೆ ಪರಿಶೀಲನೆ
Last Updated 16 ಜೂನ್ 2020, 17:29 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಹಳೆ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಟ್ರೂನ್ಯಾಟ್ ಲ್ಯಾಬ್ ಕಟ್ಟಡದ ಪಕ್ಕದಲ್ಲಿ ಕೋವಿಡ್-19 ಸಂಬಂಧ ಹೊಸದಾಗಿ ಸ್ಥಾಪಿಸುತ್ತಿರುವ ಗಂಟಲು ದ್ರವ ಮಾದರಿ ಸಂಗ್ರಹ ಮತ್ತು ಜ್ವರ ತಪಾಸಣೆ ಕೇಂದ್ರಗಳನ್ನು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಂಗಳವಾರ ಪರಿಶೀಲಿಸಿದರು.

ಜಿಲ್ಲಾಸ್ಪತ್ರೆಗೆ ಭೇಟಿ ನೀಡುವ ರೋಗಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ರೋಗಿಗಳು ಸೇರಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಮತ್ತು ಅಂತರ ಪಾಲನೆ ಮಾಡುವುದು ಕಡ್ಡಾಯ. ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಉಸಿರಾಟದ ತೊಂದರೆ, ಕೆಮ್ಮು, ಜ್ವರ, ನೆಗಡಿಯಂತಹ ಲಕ್ಷಣ ಕಂಡುಬಂದರೆ ಜ್ವರ ತಪಾಸಣೆ ಕೇಂದ್ರದಲ್ಲಿ ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯ ಕಂಟೇನ್ಮೆಂಟ್ ಝೋನ್‍ಗಳಿಂದ ಬರುವ ರೋಗಿಗಳಲ್ಲಿ ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಐಎಲ್‍ಐ, ಸ್ಯಾರಿ ಲಕ್ಷಣಗಳು ಕಂಡುಬಂದಲ್ಲಿ ಅವರ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ, ಟ್ರೂನ್ಯಾಟ್ ಲ್ಯಾಬ್‍ನಲ್ಲಿ ಪರೀಕ್ಷೆ ನಡೆಸಬೇಕು. ಅಲ್ಲದೇ, ಗರ್ಭಿಣಿಯರ ಹೆರಿಗೆ ದಿನಾಂಕದ 14 ದಿನಗಳ ಮೊದಲು ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಬೇಕು ಎಂದು ನಿರ್ದೇಶನ ನೀಡಿದರು.

ಗಂಟಲು ದ್ರವ ಮಾದರಿ ಸಂಗ್ರಹ ಮತ್ತು ಜ್ವರ ತಪಾಸಣೆ ಕೇಂದ್ರಗಳಿಗೆ ಒಬ್ಬರು ವೈದ್ಯರು, ಒಬ್ಬರು ಪ್ರಯೋಗಾಲಯ ತಜ್ಞರು, ಒಬ್ಬರು ಶುಶ್ರೂಷಕರು ಹಾಗೂ ಒಬ್ಬರು ಗ್ರೂಪ್ ‘ಡಿ’ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಪ್ರಭಾರಿ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ನೀಲಮ್ಮ ಎಂ.ರೆಡ್ಡಿ ಮಾಹಿತಿ ನೀಡಿದರು.

ಜಿಲ್ಲಾಸ್ಪತ್ರೆ ಕಾಂಪೌಂಡ್ ಹೊರಗಡೆಯ ಬಲಭಾಗದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳ ಪ್ರತ್ಯೇಕವಾಗಿ ನಿಲುಗಡೆ ಮಾಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವೇಳೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ ಇದ್ದರು.

ಟ್ರೂನ್ಯಾಟ್ ಲ್ಯಾಬ್‍ನಲ್ಲಿ ನೆಗೆಟಿವ್ ವರದಿ ಬಂದರೆ ನೆಗೆಟಿವ್ ಎಂದರ್ಥ. ಒಂದು ವೇಳೆ ಪಾಸಿಟಿವ್ ಬಂದರೆ ಅದನ್ನು ಆರ್‌ಟಿಪಿಸಿಆರ್‌ ಲ್ಯಾಬ್‍ಗೆ ಕಳುಹಿಸಿದ ನಂತರ ಬರುವ ವರದಿ ಪರಿಗಣಿಸಬೇಕು ಎಂದು ಜಿಲ್ಲಾಧಿಕಾರಿಎಂ.ಕೂರ್ಮಾರಾವ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT