ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಅಕ್ರಮ ಸಾಗಣೆ ನಡೆದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಚ್ಚರಿಕೆ

ಜಿಲ್ಲಾಮಟ್ಟದ ಮರಳು ನಿಯಂತ್ರಣ ಸಮಿತಿ ಸಭೆ
Last Updated 29 ಜನವರಿ 2019, 13:56 IST
ಅಕ್ಷರ ಗಾತ್ರ

ಯಾದಗಿರಿ: ಸುರಪುರದ ಕೃಷ್ಣಾ ನದಿ ತಟದಲ್ಲಿ ಈಚೆಗೆ ದಾಳಿ ನಡೆಸಿ ಜಿಲ್ಲಾಡಳಿತ ವಶಪಡಿಸಿಕೊಂಡಿದ್ದ ಅಕ್ರಮ ಮರಳು ಏನಾಯಿತು?. ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪಡೆದಿರುವ ಗುತ್ತಿಗೆದಾರರಿಗೆ ಮರಳು ಏಕೆ ನೀಡುತ್ತಿಲ್ಲ?. ಅಕ್ರಮ ಮರಳು ಸಾಗಣೆ ನಿಯಂತ್ರಿಸುವಲ್ಲಿ ನಿಮ್ಮ ಪಾತ್ರವೇನು?. ವಶಪಡಿಸಿಕೊಂಡ ಅಕ್ರಮ ಮರಳನ್ನು ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಬೇಕು ಎಂಬ ಅರಿವಿದ್ದರೂ ಅದ್ಹೇಗೆ ಕಳುವಾಯಿತು?.

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಮಟ್ಟದ ಮರಳು ನಿಯಂತ್ರಣ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಸುರಪುರ ತಾಲ್ಲೂಕು ಲೋಕೋಪಯೋಗಿ ಇಲಾಖೆ ಎಇಇ ಜಾವೀದ್‌ ಅವರಿಗೆ ಎಸೆದ ಪ್ರಶ್ನೆಗಳಿವು.

ಜಿಲ್ಲಾಧಿಕಾರಿ ಅವರ ಪ್ರಶ್ನೆಗಳಿಗೆ ಜಾವೀದ್ ಸಮರ್ಪಕ ಉತ್ತರ ನೀಡದೆ ಅನಗತ್ಯ ಉತ್ತರ ನೀಡಲು ಮುಂದಾಗುತ್ತಿದ್ದಂತೆ ಜಿಲ್ಲಾಧಿಕಾರಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

‘ನಿಮ್ಮ ಬೇಜವಾಬ್ದಾರಿಯಿಂದಾಗಿ ಜನರು ಜಿಲ್ಲಾಡಳಿತದತ್ತ ಬೊಟ್ಟು ಮಾಡುತ್ತಿದ್ದಾರೆ. ನಿಮ್ಮ ಕರ್ತವ್ಯ ಭ್ರಷ್ಟತೆಯಿಂದ ನಡೆದುದಕ್ಕೆಲ್ಲಾ ನಾವು ಸರ್ಕಾರಕ್ಕೆ ಉತ್ತರ ನೀಡಬೇಕಾಗಿದೆ. ಅಕ್ರಮ ಮರಳು ಪ್ರಕರಣಗಳಲ್ಲಿ ಎಷ್ಟು ಮರಳು ವಶವಾಗಿತ್ತು? ಎಷ್ಟು ಮರಳು ಸಾಗಣೆ ಮಾಡಿದ್ದೀರಿ? ಲೆಕ್ಕಪತ್ರ ನೀಡಿ’ ಎಂದು ಜಿಲ್ಲಾಧಿಕಾರಿ ಜಾವೀದ್‌ ಅವರನ್ನು ಜಾಲಾಡಿದರು.

‘ಲೆಕ್ಕಪತ್ರ ಇದೆ. ಟೆಂಡರ್‌ ದಾರರಿಗೆ ಸರ್ಕಾರಿ ದರದಲ್ಲಿ ಮರಳು ವಿತರಿಸಲಾಗಿದೆ. ಸಾರಿಗೆ ಸಮಸ್ಯೆಗಳಿಂದ ಕೆಲವು ಟೆಂಡರ್‌ ದಾರರು ಬಂದಿಲ್ಲ.. ಎಂದು ವಿವರ ನೀಡುತ್ತಿದ್ದಂತೆ ಜಿಲ್ಲಾಧಿಕಾರಿ ಜಮದಗ್ನಿಯ ಸ್ವರೂಪ ತಳೆದರು. ‘ಲೆಕ್ಕಪತ್ರ ಇಲ್ಲದೇ ಸಭೆಗೆ ಬಂದಿದ್ದು ಏಕೆ? ಗುತ್ತಿಗೆದಾರರು ಮರಳು ಸಾಗಣೆ ಮಾಡಿಸಲು ನಾವು ಬರಬೇಕೆ? ಇದು ಯಾರ ಜವಾಬ್ದಾರಿ? ಇಂಥವರ ಬಗ್ಗೆ ನೀವೇಕೆ ವರದಿ ನೀಡುವುದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಆಸಿಫ್‌ವುಲ್ಲಾ ಅವರನ್ನೂ ಕೂರ್ಮಾರಾವ್ ತರಾಟೆಗೆ ತೆಗೆದುಕೊಂಡರು.

‘ಅಕ್ರಮ ಮರಳು ಗಣಿಗಾರಿಕೆ ಅಥವಾ ಸಾಗಣೆ ಕಂಡುಬಂದಲ್ಲಿ ನಿಯಮಾನುಸಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ನದಿಪಾತ್ರದಲ್ಲಿ ರಸ್ತೆ ನಿರ್ಮಿಸದಂತೆ ನಿಗಾವಹಿಸಬೇಕು. ತಂಡದ ಸದಸ್ಯರು ಭೇಟಿ ನೀಡದೆ ಗೈರಾದಲ್ಲಿ, ಅವರ ವಿರುದ್ಧ ಕ್ರಮಕ್ಕಾಗಿ ಆಯಾ ಇಲಾಖೆಗಳ ಮೇಲಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ವರದಿ ನೀಡಬೇಕು’ ಎಂದು ಸೂಚಿಸಿದರು.

‘ಮರಳು ಅಕ್ರಮ ಸಾಗಣೆ ಕುರಿತಂತೆ ನಿಗಾವಹಿಸಲು ರಚಿಸಿರುವ 9 ತಂಡಗಳ ಕಾರ್ಯನಿರ್ವಹಣೆ ಕುರಿತಂತೆ ರ‍್ಯಾಂಡಂ ಆಗಿ ಪರೀಕ್ಷಿಸಲು ಸಂಚಾರಿ ತಂಡ ರಚಿಸಬೇಕು. ಸಹಾಯಕ ಆಯುಕ್ತರು 15 ದಿನಕ್ಕೊಮ್ಮೆ ತಾಲ್ಲೂಕು ಮಟ್ಟದ ಸಮಿತಿ ಸಭೆ ನಡೆಸಬೇಕು. ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ತಡೆಗೆ 24X7 ಸಹಾಯವಾಣಿ ಆರಂಭಿಸಿ, ಸಿಬ್ಬಂದಿಯನ್ನು ನೇಮಿಸಬೇಕು’ ಎಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಮರಳು ಬ್ಲಾಕ್‌ನಲ್ಲಿ ಸಿ.ಸಿ ಟಿವಿ ಕ್ಯಾಮೆರಾ, ವಾಹನ ತೂಕ ಮಾಡುವ ವೇಬ್ರಿಡ್ಜ್ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸುತ್ತಿರಬೇಕು. ಅಕ್ರಮ ಮರಳು ಸಾಗಣೆಗೆ ನದಿಗೆ ಹೋಗಲು ದಾರಿ ಮಾಡಿಕೊಟ್ಟ ಮತ್ತು ಅನಧಿಕೃತ ಮರಳು ಸಂಗ್ರಹಣೆಗೆ ಅವಕಾಶ ನೀಡಿದ ಜಮೀನು ಅನ್ನು ಕರ್ನಾಟಕ ಭೂಕಂದಾಯ ಅಧಿನಿಯಮದ ಅಡಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳಬಹುದಾಗಿದೆ. ಆದ್ದರಿಂದ ಜಮೀನು ಮಾಲೀಕರು ಇದಕ್ಕೆ ಅವಕಾಶ ಕೊಡಬಾರದು. ಒಂದು ವೇಳೆ ಅಕ್ರಮ ಮರಳುಗಾರಿಕೆಗೆ ಜಮೀನು ಮಾಲೀಕರು ಸಹಕರಿಸಿದರೆ ಅವರ ವಿರುದ್ಧ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ರವಿಶಂಕರ, ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ತಹಶೀ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಆಸಿಫ್‌ವುಲ್ಲಾಗೆ ನೋಟಿಸ್ ಜಾರಿ

ಕರ್ತವ್ಯ ನಿರ್ಲಕ್ಷ್ಯ ಮತ್ತು ಹಿಂದಿನ ಸಮಿತಿ ಸಭೆಯಲ್ಲಿ ಸೂಚಿಸಿದಂತೆ ಜಲಾಲ್‌ಪುರ ಕ್ರಾಸ್‌ನಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲು ಕ್ರಮ ಕೈಗೊಳ್ಳದ ಕಾರಣ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಆಸಿಫ್‌ವುಲ್ಲಾ ಅವರ ವಿರುದ್ಧ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಉಪ ವಿಭಾಗಾಧಿಕಾರಿಗೆ ಸೂಚಿಸಿದರು.

ಜಿಲ್ಲಾಮಟ್ಟದ ಮರಳು ನಿಯಂತ್ರಣ ಸಮಿತಿ ವ್ಯಾಪ್ತಿಗೆ ಬರುವ ಅಧಿಕಾರಿಗಳನ್ನು ಎಚ್ಚರಿಸಿ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ, ಮರಳು ಸಾಗಣೆ ನಿಯಂತ್ರಿಸುವಲ್ಲಿ ಆಸಿಫ್‌ವುಲ್ಲಾ ಕರ್ತವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.

ಮರಳು ಅಕ್ರಮ ಸಾಗಣೆ ನಿಯಂತ್ರಣಕ್ಕೆ ತಂಡ ರಚನೆ

ಸುರಪುರ ತಾಲ್ಲೂಕಿನಲ್ಲಿ ತಹಶೀಲ್ದಾರ್ ಸುರೇಶ ಅಂಕಲಗಿ ನೇತೃತ್ವದ ತಂಡ ಹೇಮನೂರು, ಕರ್ನಾಳ, ಅಡ್ವಡ್ಗಿ, ಹೆಮ್ಮಡಗಿ ಗ್ರಾಮಗಳಲ್ಲಿ ಮರಳು ಅಕ್ರಮ ಸಾಗಣೆ ಮತ್ತು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಎಎಸ್‌ಐ ಸೋಮಲಿಂಗಪ್ಪ ವಡಿಯಾರ್ ಅವರ ತಂಡಕ್ಕೆ ಚೌಡೇಶ್ವರಹಾಳ, ಸೂಗೂರು, ಶೆಳ್ಳಗಿ ಗ್ರಾಮಗಳನ್ನು ವಹಿಸಲಾಗಿದೆ.

ಶಹಾಪುರ ತಾಲ್ಲೂಕಿನಲ್ಲಿ ತಹಶೀಲ್ದಾರ್ ಸಂಗಮೇಶ ಅವರ ತಂಡ ಟೊಣ್ಣೂರು, ಕೊಳ್ಳೂರು, ಮರಕಲ್ ಗ್ರಾಮಗಳಲ್ಲಿ ನಿಗಾವಹಿಸಬೇಕು. ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಬಕ್ಕಪ್ಪ ಅವರ ತಂಡ ಹಯ್ಯಾಳ, ಯಕ್ಷಿಂತಿ ಹಾಗೂ ವಡಗೇರಾ ತಹಶೀಲ್ದಾರ್ ಪ್ರಕಾಶ ಹೊಸಮನಿ ಅವರ ತಂಡ ಚೆನ್ನೂರು, ಬೆಂಡೆಗುಂಬಳಿ ಗ್ರಾಮಗಳಲ್ಲಿ ನಿಗಾವಹಿಸಲು ನಿರ್ದೇಶಿಸಲಾಯಿತು.

ಯಾದಗಿರಿ ತಾಲ್ಲೂಕಿನಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಅವರ ತಂಡ ಹತ್ತಿಕುಣಿ, ಹೊರುಂಚಾ, ಯಡ್ಡಳ್ಳಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾಗಪ್ಪ ಅವರ ತಂಡ ಕೂಡ್ಲೂರು, ರಾಂಪುರ, ಗೂಡೂರ, ಭೂವಿಜ್ಞಾನಿ ಕಿರಣ್ ಅವರ ತಂಡ ಕೊಂಡಾಪುರ, ಶೆಟ್ಟಳ್ಳಿ ಹಾಗೂ ಸಾರಿಗೆ ಇನ್‌ಸ್ಪೆಕ್ಟರ್ ವೆಂಕಟಪ್ಪ ಅವರ ತಂಡ ಕೊಂಕಲ್, ಯಲ್ಹೇರಿ ಗ್ರಾಮಗಳಲ್ಲಿ ನಿಗಾವಹಿಸಬೇಕು.

ತಂಡದ ಸದಸ್ಯರು ಪ್ರತಿದಿನ ಈ ಗ್ರಾಮಗಳ ನದಿಪಾತ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಬೇಕು. ಮುಖ್ಯಸ್ಥರು ವಾರದಲ್ಲಿ ಎರಡು ಬಾರಿ ಭೇಟಿ ನೀಡಬೇಕು ಎಂದು ಆದೇಶಿಸಿದ ಜಿಲ್ಲಾಧಿಕಾರಿ, ಒಂದು ವೇಳೆ ತಮಗೆ ವಹಿಸಿದ ಹಳ್ಳಿಗಳ ವ್ಯಾಪ್ತಿಯಲ್ಲಿ ಮರಳನ್ನು ಅಕ್ರಮವಾಗಿ ಸಂಗ್ರಹ ಅಥವಾ ಸಾಗಾಣಿಕೆ ಕಂಡುಬಂದರೆ ತಂಡದ ಮುಖ್ಯಸ್ಥರನ್ನು ಹೊಣೆ ಮಾಡಿ, ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT