ಐಟಿ ದಾಳಿ ರಾಜಕೀಯ ಪ್ರೇರಿತ : ಸಚಿವ ಸತೀಶ್ ಜಾರಕಿಹೊಳಿ ಆರೋಪ

ಬುಧವಾರ, ಏಪ್ರಿಲ್ 24, 2019
31 °C

ಐಟಿ ದಾಳಿ ರಾಜಕೀಯ ಪ್ರೇರಿತ : ಸಚಿವ ಸತೀಶ್ ಜಾರಕಿಹೊಳಿ ಆರೋಪ

Published:
Updated:
Prajavani

ಯಾದಗಿರಿ: ‘ರಾಜ್ಯದಲ್ಲಿ ನಡೆದಿರುವ ಐಟಿ ದಾಳಿ ರಾಜಕೀಯ ಪ್ರೇರೇರಿತವಾಗಿದೆ’ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದರು.

ನಗರದಲ್ಲಿ ರಾಯಚೂರು ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ.ನಾಯಕ ಅವರ ಪರವಾಗಿ ಪ್ರಚಾರ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಮೈತ್ರಿ ಸರ್ಕಾರದ ಸಚಿವರ, ಅವರ ಆಪ್ತರ ಮತ್ತು ಮೈತ್ರಿ ಸರ್ಕಾರದ ಪರವಾಗಿದ್ದಾರೆ ಎನಿಸುವಂತಹ ಅಧಿಕಾರಿಗಳ ಮೇಲೂ ಕೇಂದ್ರದಲ್ಲಿನ ಬಿಜೆಪಿ ಐಟಿ ದಾಳಿಗೆ ಪ್ರಚೋದಿಸಿದೆ. ಒಂದು ಸ್ವಾಯತ್ತ ಸಂಸ್ಥೆಯಾಗಿರುವ ಐಟಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದನ್ನು ಗಮನಿಸುತ್ತಿರುವ ಮತದಾರರು ಬಿಜೆಪಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ’ ಎಂದರು.

‘ಬಿಜೆಪಿ ಕೇವಲ ಹಿಂದೂತ್ವ ಅಜೆಂಡಾವನ್ನು ಹಿಡಿದುಕೊಂಡು ಚುನಾವಣೆ ಎದುರಿಸುತ್ತಿದೆ. ಆದರೆ, ಕಾಂಗ್ರೆಸ್‌ ಸರ್ಕಾರದ್ದು ಅಭಿವೃದ್ಧಿಯೇ ಅಜೆಂಡವಾಗಿದೆ. ಶಾಶ್ವತ ನೀರಾವರಿ, ಕುಡಿಯುವ ನೀರು, ಉತ್ತಮ ರಸ್ತೆ, ಉದ್ಯೋಗ ಸೃಷ್ಟಿ ಹೀಗೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿ ದೇಶವನ್ನು ಮುಂಚೂಣಿಗೆ ತರಲು ಚಿಂತಿಸುತ್ತಿದೆ. ಹಾಗಾಗಿ, ಜನರ ಬಳಿ ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡರು ಮತ ಕೇಳಲಿದ್ದೇವೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇರುವುದರಿಂದ ಕಳೆದ ಲೋಕಸಭೆಗಿಂತಲೂ ನಾವು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದ್ದೇವೆ. ಮಂಡ್ಯದಲ್ಲಿ ಮೈತ್ರಿ ಸರ್ಕಾರದ ಅಭ್ಯರ್ಥಿ ಗೆಲ್ಲಲಿದ್ದಾರೆ. ಆದರೂ, ಕೆಲ ಗೊಂದಲಗಳು ಸೃಷ್ಟಿಯಾಗಿವೆ. ಗೊಂದಲಗಳು ಎಲ್ಲಾ ಕಡೆ ಇರುತ್ತವೆ. ಗೊಂದಲ ಬಗೆಹರಿಸುವ ನಿಟ್ಟಿನಲ್ಲಿ ಮೈತ್ರಿ ಸರ್ಕಾರದ ವರಿಷ್ಠರು ನಿರತರಾಗಿದ್ದಾರೆ’ ಎಂದರು.

ರಾಯಚೂರು ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ.ನಾಯಕ, ಜಿಲ್ಲಾ ಕಾಂಗ್ರೆಸ್‌ ಘಟಕ ಅಧ್ಯಕ್ಷ ಮರಿಗೌಡ ಹುಲ್‌ಕಲ್‌, ಚನ್ನಾರೆಡ್ಡಿ ಪಾಟೀಲ ತುನ್ನೂರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಪಾಟೀಲ ವಜ್ಜಲ್‌, ಶ್ರೀನಿವಾಸ ಕಂದಕೂರು, ಯುವ ಮುಖಂಡ ರಾಘವೇಂದ್ರ ಮಾನಸಗಲ್‌ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !