ಗುರುವಾರ , ಫೆಬ್ರವರಿ 20, 2020
22 °C

ಯಾದಗಿರಿ: ಸವಿತಾ ಮಹರ್ಷಿ ಜಯಂತಿ ಅದ್ಧೂರಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಶರಣರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸವಿತಾ ಮಹರ್ಷಿ ಜಯಂತ್ಯುತ್ಸವ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸವಿತಾ ಮರ್ಹಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿಯೊಬ್ಬ ವ್ಯಕ್ತಿಯು ಸುಂದರವಾಗಿ ಕಾಣಲು ಸವಿತಾ ಸಮಾಜದ ಬಂಧುಗಳು ನಿರ್ವಹಿಸುವ ಕಾಯಕ ಅತಿ ಶ್ರೇಷ್ಠ. ಸವಿತಾ ಸಮಾಜವು ಕ್ಷೌರಿಕ ವೃತ್ತಿ ಮಾಡುವಲ್ಲಿ ಯಾವುದೇ ಮೇಲು-ಕೀಳು ಎಂಬ ಭಾವನೆ ತಾಳದೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತದೆ. ಸಮಾಜದಲ್ಲಿ ವ್ಯಕ್ತಿಯ ನಡೆ-ನುಡಿ, ವ್ಯಕ್ತಿತ್ವದ ಆಧಾರದ ಮೇಲೆ ಆತನನ್ನು ಗುರುತಿಸಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಕುಟುಂಬದಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವ ಮೂಲಕ ಒಳ್ಳೆಯ ನಾಗರಿಕರನ್ನಾಗಿ ಮಾಡಬೇಕು. ಮಹಿಳೆಯರು ಕೂಡ ಸಮಾಜದಲ್ಲಿ ನಡೆಯುವ ಪ್ರತಿಯೊಂದು ಆಗು-ಹೋಗುಗಳ ಕುರಿತು ತಿಳಿದುಕೊಳ್ಳುವುದು ಅಗತ್ಯವಾಗಿದೆ’ ಎಂದರು.

ಹುಣಸಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಭಾರಿ ಪ್ರಾಂಶುಪಾಲ ಅಶೋಕ ಉಪನ್ಯಾಸ ನೀಡಿ, ‘ಹಿಂದೂ ಧರ್ಮದ ಉಳಿವಿಗೆ ಅನೇಕ ಋಷಿ ಮುನಿಗಳು ಕಾರಣವಾಗಿದ್ದು, ಅಂತಹ ಋಷಿಗಳಲ್ಲಿ ಸವಿತಾ ಮಹರ್ಷಿಗಳು ಒಬ್ಬರು. ಬ್ರಹ್ಮ, ವಿಷ್ಣು, ಮಹೇಶ್ವರರು ಯಜ್ಞ-ಯಾಗ ಮಾಡುತ್ತಿರುವ ಸಂದರ್ಭದಲ್ಲಿ ಬೆಂಕಿಯ ಕಿಡಿ ಶಿವನ ಮುಖಕ್ಕೆ ತಗುಲಿದಾಗ, ಪಾರ್ವತಿಯು ಮುಖ ವಿಕಾರವಾಗಿ ಕಾಣುತ್ತಿದೆ ಎಂದು ತಿಳಿಸುತ್ತಾಳೆ. ಆಗ ಶಿವನು ತನ್ನ ಮುಖವನ್ನು ಸುಂದರವನ್ನಾಗಿಸಲು ಬಲಗಣ್ಣಿನಿಂದ ಸೃಷ್ಟಿಸಿದ ವ್ಯಕ್ತಿಯೇ ಸವಿತಾ ಮಹರ್ಷಿ ಎಂದು ಪುರಾಣ ಪುಣ್ಯ ಕಥೆಗಳಿಂದ ತಿಳಿದುಬರುತ್ತದೆ’ ಎಂದು ಹೇಳಿದರು.

ಸವಿತಾ ಸಮಾಜದ ಜಿಲ್ಲಾ ಪ್ರತಿನಿಧಿ ಮಲ್ಲಣ್ಣ ವಡಿಗೇರಿ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಗೋಪಾಲ ಕಿಲ್ಲದ, ನಾಗಪ್ಪ ಹತ್ತಿಕುಣಿ, ಸವಿತಾ ಸಮಾಜದ ರಾಜ್ಯ ಮಾಜಿ ಉಪಾಧ್ಯಕ್ಷ ರಮೇಶ್ ಪಿ.ಚಿನ್ನಾಕರ, ರಾಜ್ಯ ಸಮಿತಿ ಸದಸ್ಯರಾದ ಸೂರ್ಯಕಾಂತ ಚಿನ್ನಾಕರ ಹಾಗೂ ಸಮಾಜದ ಮುಖಂಡರು, ಮಹಿಳೆಯರು ಇದ್ದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಹಾಗೂ ಕಲಾ ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೆಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಸುಬಮ ಪದವಿ ಕಾಲೇಜಿನ ಉಪನ್ಯಾಸಕ ಗುರುಪ್ರಸಾದ ವೈದ್ಯ ನಿರೂಪಿಸಿದರು.

ಮೆರವಣಿಗೆ: ನಗರದಲ್ಲಿ ಕಲಾತಂಡಗಳೊಂದಿಗೆ ಸವಿತಾ ಮಹರ್ಷಿಗಳ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.‌

‌***

ಸವಿತಾ ಸಮಾಜ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಮುಂದೆ ಬರಬೇಕಾದರೆ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು
-ಅಪ್ಪಣ್ಣ ಚಿನ್ನಾಕಾರ, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು