ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ಬೇಡ ಜಂಗಮರಿಗೆ ‘ಎಸ್ಸಿ’ ಪ್ರಮಾಣ ಪತ್ರ!

ಹಿಂದಿನ ತಹಶೀಲ್ದಾರ್ ಶ್ರೀಧರ್ ಜಗನಾಥಚಾರ್ಯರಿಂದ ದೃಢೀಕರಣ
Last Updated 18 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಶಹಾಪುರ: ‘ತಾಲ್ಲೂಕಿನ ಗೋಗಿ (ಪಿ) ಗ್ರಾಮದ ಅನನ್ಯ ರೇವಣಸಿದ್ದಯ್ಯ ಎನ್ನುವವರಿಗೆ ಅನಸೂಚಿತ ಜಾತಿ ಎಂದು ಮಾನ್ಯ ಮಾಡಲಾಗಿರುವ ಪರಿಶಿಷ್ಟ ಜಾತಿಗೆ (ಬೇಡ ಜಂಗಮ) ಸೇರಿರುತ್ತಾರೆ’ ಎಂದು ಪ್ರಮಾಣ ಪತ್ರ ನೀಡಿದ ಅಂಶ ಗೊತ್ತಾಗಿದೆ .

2018ರ ಸೆಪ್ಟೆಂಬರ್‌ 1ರಂದು ಅಂದಿನ ತಹಶೀಲ್ದಾರ್ ಶ್ರೀಧರ್ ಜಗನಾಥಚಾರ್ಯ ದೃಢೀಕರಣ ನೀಡಿದ್ದು, ಪತ್ರ ಜೀವಿತಾವಧಿಗೆ ಅಸ್ವಿತ್ವದಲ್ಲಿರುತ್ತದೆ ಎಂದೂ ದಾಖಲೆಯಲ್ಲಿ ನಮೂದಿಸಲಾಗಿದೆ. ಇದೇ ಅಂಶವನ್ನಿಟ್ಟುಕೊಂಡು ಕಾನೂನು ಹೋರಾಟಕ್ಕೆ ಕೆಲ ವ್ಯಕ್ತಿಗಳು ಮುಂದಾಗಿದ್ದಾರೆ.

ಗೋಗಿ (ಪಿ)ಯ ಅಂದಿನ ಅಂದಿನ ಗ್ರಾಮ ಲೆಕ್ಕಿಗ ಮುಬಾರಕ್ ಹಾಗೂ ಕಂದಾಯ ನಿರೀಕ್ಷಕ ರಾಜು ಪೂಜಾರಿ ಅವರ ವರದಿ ಆಧಾರದ ಮೇಲೆ ಪ್ರಮಾಣ ಪತ್ರ ವಿತರಿಸಿದ್ದಾರೆ. ಆದರೆ, ಲಭ್ಯವಾದ ದಾಖಲೆಗಳ ಪ್ರಕಾರ ಇಬ್ಬರ ವರದಿ ಕಡತದಲ್ಲಿ ನಾಪತ್ತೆಯಾಗಿವೆ. ಮಧ್ಯವರ್ತಿಗಳ ಕೈಚಳಕದಿಂದ ಆಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಇದೇ ಅಧಿಕೃತ ಜಾತಿ ಪ್ರಮಾಣ ಪತ್ರವನ್ನು ಹಿಡಿದುಕೊಂಡು ತಾಲ್ಲೂಕಿನಲ್ಲಿ ನಮಗೂ ಬೇಡ ಜಂಗಮ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡಬೇಕು ಎಂದು ಸ್ಥಳೀಯ ಪ್ರಭಾವಿ ನಾಯಕರು, ಪತ್ರಕರ್ತರ ಪುತ್ರರು, ಮಠಾಧೀಶರು, ರಾಜಕೀಯ ಮುಖಂಡರು 2018ರಿಂದ ತಹಶೀಲ್ದಾರ್ ಅವರಿಗೆ 417 ಮನವಿ ಸಲ್ಲಿಕೆಯಾಗಿವೆ‘ ಎಂದು ತಹಶೀಲ್ದಾರ್ ಕಚೇರಿ ಮೂಲಗಳು ತಿಳಿಸಿವೆ.

‘ರಾಜಕೀಯ ಪ್ರಭಾವ ಬಳಸಿಕೊಂಡು ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ನಕಲಿ ಜಾತಿ ಪ್ರಮಾಣ ಪತ್ರವನ್ನು ನೀಡಿದ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ವಂಚನೆಯ ದೂರು ದಾಖಲಿಸಬೇಕು‘ ಎಂದು ಪರಿಶಿಷ್ಟ ಜಾತಿಯ ಸರ್ವ ಸಮಾಜಗಳ ಸಮನ್ವಯ ಸಮಿತಿ ಅಧ್ಯಕ್ಷ ನೀಲಕಂಠ ಬಡಿಗೇರ ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.

****

ಬೇಡ ಜಂಗಮ; 417 ಅರ್ಜಿ ತಿರಸ್ಕೃತ

‘2020ರಿಂದ 2022ರವರೆಗೆ ಶಹಾಪುರ ತಾಲ್ಲೂಕಿನ ಮೂರು ನಾಡಕಚೇರಿಗಳಲ್ಲಿ ಪರಿಶಿಷ್ಟ ಜಾತಿಯ ಹೆಸರಿನಲ್ಲಿ 417 ಬೇಡ ಜಂಗಮ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ಸಲ್ಲಿಸಿದ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಲಾಗಿದೆ‘ ಎಂದು ಗ್ರೇಡ್-2 ತಹಶೀಲ್ದಾರ್ ಸೇತು ಮಾಧವ ಕುಲಕರ್ಣಿ ಮಾಹಿತಿ ನೀಡಿದ್ದಾರೆ.

ಶಹಾಪುರ ನಾಡ ಕಚೇರಿಯಲ್ಲಿ ಬರುವ ದರಿಯಾಪುರ 15, ಗಂಗನಾಳ 7, ಇಟಗಿ 18, ಮಡ್ನಾಳ 4, ನಾಗನಟಗಿ 2, ರಸ್ತಾಪುರ 17, ಹತ್ತಿಗೂಡೂರ 2, ಸಗರ 8, ಸಲಾದಪುರ 21, ಶಹಾಪುರ 140, ಶಿರವಾಳ 48, ಶಖಾಪುರ 1, ಶಾರದಳ್ಳಿ 2 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಅದರಂತೆ ಗೋಗಿ ನಾಡಕಚೇರಿಯ ವ್ಯಾಪ್ತಿಯ ಗೋಗಿ (ಕೆ)6, ಗೋಗಿ (ಪಿ) 53, ಭೀಮರಾಯನಗುಡಿ 12, ದಿಗ್ಗಿ 6, ಹೊತಪೇಟ 10, ಕೊಡಮನಳ್ಳಿ10, ಮೂಡಬೂಳ 6, ಸಿಂಗನಳ್ಳಿ 16, ರಾಜಾಪುರ (ಬಿ) 2, ಉಕ್ಕಿನಾಳ 6 ಹೀಗೆ ತಾಲ್ಲೂಕಿನ ವಿವಿಧ ಹಳ್ಳಿಯಿಂದ ಬೇಡ ಜಂಗಮ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಎಲ್ಲಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ವಿವರ ನೀಡಿದ್ದಾರೆ.

ಇದರ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ತಹಶೀಲ್ದಾರ್ ಮಧುರಾಜ ಕೂಡ್ಲಗಿ ಅವರನ್ನು ಸಂಪರ್ಕಿಸಿದರೆ ಸಂಪರ್ಕಕ್ಕೆ ಸಿಗಲಿಲ್ಲ.

***

ತಾಲ್ಲೂಕಿನ ಗೋಗಿ( ಪಿ) ಗ್ರಾಮದ ಅನನ್ಯ ಎನ್ನುವರಿಗೆ ಬೇಡ ಜಂಗಮ ಪರಿಶಿಷ್ಟ ಜಾತಿಯ ಹೆಸರಿನಲ್ಲಿ ನೀಡಿದ ಪ್ರಮಾಣ ಪತ್ರವನ್ನು ರದ್ದುಗೊಳಿಸುವಂತೆ ಉಪವಿಭಾಗಾಧಿಕಾರಿಗೆ ಪತ್ರ ಬರೆಯಲಾಗಿದೆ.
-ಸೇತು ಮಾಧವ ಕುಲಕರ್ಣಿ, ಗ್ರೇಡ್-2 ತಹಶೀಲ್ದಾರ್, ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT