ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ವಿಶೇಷಾಧಿಕಾರಿ ನೇಮಕಕ್ಕೆ ಒತ್ತಾಯ

ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕ್ ಹಣ ದುರ್ಬಳಕೆ
Last Updated 17 ಮೇ 2022, 3:49 IST
ಅಕ್ಷರ ಗಾತ್ರ

ಶಹಾಪುರ: ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗೆ ವಿಶೇಷಾ ಧಿಕಾರಿ ನೇಮಕಕ್ಕೆ ಪರಿಶೀಲನೆ ನಡೆದಿದೆ.

‘ಬ್ಯಾಂಕ್‌ನಲ್ಲಿ ನಡೆದ ಅಕ್ರಮಗಳಿಗೆ ಕಾರಣರಾದ ಆಡಳಿತ ಮಂಡಳಿಯ ಸದಸ್ಯರನ್ನು ಪ್ರಕರಣದ 29-ಸಿ ಅಡಿ ಅನರ್ಹಗೊಳಿಸಲು ಆರೋಪ ಪಟ್ಟಿ ಮತ್ತು ಪ್ರಕರಣ 64ರ ವಿಚಾರಣೆಗೆ ಆದೇಶಿಸಲು ವಿಚಾರಣಾಂಶಗಳನ್ನು ಸಿದ್ಧಪಡಿಸಿ ಮೂರು ದಿನಗಳೊಳಗೆ ಸಲ್ಲಿಸಲು ಸಹಕಾರ ಸಂಘಗಳ ಜಂಟಿ ನಿಬಂಧಕ ಸಿ.ಪ್ರಸಾದರಡ್ಡಿ ಅವರು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಿಗೆ ನಿರ್ದೇಶನ ನೀಡಿದ್ದಾರೆ.

ಏಪ್ರಿಲ್ 29ರಂದು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಬೆಂಗಳೂರಿನ ಸಹಕಾರ ಸಂಘಗಳ ಜಂಟಿ ನಿಬಂಧರಿಗೆ ಬ್ಯಾಂಕ್‌ನ ಆಡಳಿತ ಮಂಡಳಿ ಸ್ಥಾನದಲ್ಲಿ ವಿಶೇಷಾಧಿಕಾರಿ ನೇಮಿಸುವಂತೆ ವರದಿ ಸಲ್ಲಿಸಿದ್ದರು.

ಬ್ಯಾಂಕ್‌ಗೆ ಎರಡು ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಬಸವರಾಜ ಹಿರೇಮಠ, ಚೆನ್ನಣ್ಣಗೌಡ ಶಿರವಾಳ, ಘೇವರಚಂದ ಜೈನ್, ಮಾಂಗಿಲಾಲ್ ಜೈನ್, ಬಸವರಾಜ ಹೇರುಂಡಿ, ಬಸವರಾಜ ಆನೇಗುಂದಿ, ಮಲ್ಲಿಕಾರ್ಜುನ ಮುಡಬೂಳ, ಗೂಳಪ್ಪ ಎಸ್.ಬಾಳಿ, ಮಲ್ಲಿಕಾರ್ಜುನ ಬುಕಿಷ್ಟಗಾರ,ಶರಣಗೌಡ ಕಟ್ಟಿಮನಿ, ಎಂ.ಡಿ. ಹಸನ, ಮನೋಹರ ಅಲಬನೂರ, ಮಲ್ಲಿಕಾರ್ಜುನ ಯಕ್ಷಿಂತಿ, ವಿಮಲಾ ಕಲಬುರ್ಗಿ,ಕಲಾವತಿ ಕೊನೆರ, ಎಂ.ಆರ್.ಬಿರೆದಾರ ನಿರ್ದೇಶಕರಾಗಿ ಆಯ್ಕೆ ಆಗಿದ್ದರು. ಇದರಲ್ಲಿ ಹೆಚ್ಚಿನ ನಿರ್ದೇಶಕರು ಸ್ವಜನಪಕ್ಷಪಾತ ಹಾಗೂ ಹಣ ದುರ್ಬಳಕೆ ಆರೋಪ ಎದುರಿಸುತ್ತಿದ್ದಾರೆ’ ಎಂದು ಸಾಮಾಜಿಕ ಹೋರಾಟಗಾರ ಮಾನಪ್ಪ ಹಡಪದ ಆರೋಪಿಸಿದ್ದಾರೆ.

‘ಬ್ಯಾಂಕ್‌ನ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯ ನಿರ್ದೇಶಕರು ಬ್ಯಾಂಕ್‌ನಲ್ಲಿ ನಡೆದಿರುವ ಅಕ್ರಮವನ್ನು ಮುಚ್ಚಿ ಹಾಕಲು ತೆರೆಮರೆಯ ಕಸರತ್ತು ನಡೆಸಿದ್ದಾರೆ. ಕಾನೂನು ತಜ್ಞರನ್ನು ಭೇಟಿಯಾಗಲು ನಿರ್ದೇಶಕರು ಹುಬ್ಬಳ್ಳಿ, ಬೆಂಗಳೂರು ಮುಂತಾದ ಕಡೆ ಬ್ಯಾಂಕ್‌ನ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿಕೊಂಡು ಅಲೆದಾಡುತ್ತಿದ್ದಾರೆ. ಸಾರ್ವಜನಿಕರ ಹಣ ಪೋಲಾಗದಂತೆ ತಡೆಯುವುದು ಸೇರಿ ಎಲ್ಲಾ ಅಕ್ರಮವನ್ನು ತಡೆಗಟ್ಟಲು ಕೂಡಲೇ ವಿಶೇಷಾಧಿಕಾರಿ ನೇಮಿಸಬೇಕು’ ಎಂದು ಬಸವರಾಜ ಅರುಣಿ ಒತ್ತಾಯಿಸಿದ್ದಾರೆ.

*
ಬ್ಯಾಂಕಿನ ಆಡಳಿತ ಮಂಡಳಿಯ 12 ನಿರ್ದೇಶಕರು ಜಿಲ್ಲಾ ಉಪ ನಿಬಂಧಕರಿಗೆ ಪ್ರತ್ಯೇಕವಾಗಿ ಹೇಳಿಕೆ ನೀಡಿದ್ದೇವೆ. ಹಣ ವಸೂಲಾತಿ ಚುರುಕುಗೊಳಿಸಿದೆ. ಹಣ ದುರ್ಬಳಕೆ ಮಾಡಿಕೊಂಡ ಸಿಬ್ಬಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಚಿಂತನೆ ನಡೆದಿದೆ
- ಬಸವರಾಜ ಹೇರುಂಡಿ, ಬ್ಯಾಂಕ್‌ನ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT