ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: 3ನೇ ಅಂಗನವಾಡಿಗೆ ಪ್ರಧಾನಿ ಮೋದಿ ಶಹಬ್ಬಾಸ್‌

ಸೋಲಾರ್‌ ಟಿವಿ, ಮಕ್ಕಳಿಗೆ ಸಮವಸ್ತ್ರ
Last Updated 24 ಸೆಪ್ಟೆಂಬರ್ 2019, 19:46 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಕಡೇಚೂರು ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಏರಿಯಾ, ಮೌಲಾಲಿ ಮಸೀದಿ ಬಳಿ, ಬಂಗ್ಲ ಗಟ್ಟಿ, ಪ್ರೌಢಶಾಲೆ ಬಳಿ– ಹೀಗೆ 4 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ 3ನೇ ಅಂಗನವಾಡಿ ಕೇಂದ್ರವು ಸಕಲ ಸೌಲಭ್ಯಗಳಿಂದ ಗಮನ ಸೆಳೆಯುತ್ತಿದೆ.

ಅಡುಗೆ ಸಹಾಯಕಿಯಾಗಿ ಸಾಬಮ್ಮ ಕೆಲಸ ನಿರ್ವಹಿಸುತ್ತಿದ್ದು, ಮಕ್ಕಳಂತೆ ತಾವೂ ಆಟ ಪಾಠಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದರಿಂದ ಮಕ್ಕಳು ಕುಣಿದು ಕುಪ್ಪಳಿಸುತ್ತವೆ.

ಈ ಅಂಗನವಾಡಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು 2018ರ ಅಕ್ಟೋಬರ್‌ನಲ್ಲಿ ವಿಡಿಯೊ ಕಾನ್ಫ್‌ರೆನ್ಸ್‌ನಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಮಾತೃವಂದನಾಯೋಜನೆ ಜಾರಿಗೆ ತರುವಲ್ಲಿ ಹೆಚ್ಚಿನ ಶ್ರಮ ವಹಿಸಿದೆ ಎಂದು ಶ್ಲಾಘಿಸಿದ್ದರು. ಅಂಗನವಾಡಿಯಲ್ಲಿ ಸೋಲಾರ್‌ ಟಿವಿ ಇದ್ದು, ಈ ಮೂಲಕ ಮಕ್ಕಳಿಗೆ ಪದ್ಯ, ಚಿತ್ರಗಳ ಮೂಲಕ ಬೋಧನೆ ಮಾಡಲಾಗುತ್ತಿದೆ.

ಸದ್ಯ 37 ಮಕ್ಕಳ ಹಾಜರಾತಿ ಇದ್ದು, ಬೆಳಿಗ್ಗೆ 9.30ರಿಂದ ಸಂಜೆ 4 ಗಂಟೆವರೆಗೆ ನಡೆಯುತ್ತದೆ. ವಿವಿಧ ವಸ್ತುಗಳ ಮೂಲಕ ಮಕ್ಕಳಿಗೆ ದೈನಂದಿನ ಚಟುವಟಿಕೆ ಮಾಡುತ್ತಿದ್ದಾರೆ. ಸೋಮವಾರರಿಂದ ಶನಿವಾರದ ವರೆಗೆ ಪ್ರತಿದಿನ ತಿಂಡಿ, ಊಟ ಬಡಿಸಲಾಗುತ್ತದೆ. ಮಕ್ಕಳಿಗೆ ಶೆಂಗಾ ಚಿಕ್ಕಿ, ಹಾಲು ಕೊಡುತ್ತಾರೆ.

ಸೋಲಾರ್‌ ಟಿವಿ, ಸಮವಸ್ತ್ರ:
ಈ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಸಮವಸ್ತ್ರ ಇದೆ. ಇದರಿಂದ ಎಲ್ಲ ಮಕ್ಕಳು ಒಂದೇ ಎಂಬ ಭಾವನೆ ಬರುವಂತೆ ಅಲ್ಲದೆ ಶಿಸ್ತು ಮೂಡಿಸಲು ಸಮವಸ್ತ್ರ ಧರಿಸಿ ಕೇಂದ್ರಕ್ಕೆ ಬರುವಂತೆ ಮಾಡಲಾಗಿದೆ. ಅಲ್ಲದೆ ಪಾಠ ಬೋಧನೆಗೆ ಸೋಲಾರ್‌ ಟಿವಿ ಅಳವಡಿಸಲಾಗಿದೆ. ಇದರಿಂದಲೂ ಮಕ್ಕಳು ಚಿತ್ರಗಳನ್ನು ನೋಡಿಕೊಂಡು ಕಲಿಯುವ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗೆ ಗುರುತಿನ ಚೀಟಿ ಕೂಡ ಇಲ್ಲಿ ಇದೆ. ಬೆಳಿಗ್ಗೆ ಬಂದ ತಕ್ಷಣ ಮಕ್ಕಳು ತಮ್ಮ ಹೆಸರನ್ನು ಗುರುತು ಹಿಡಿದುಕೊಂಡು ಚೀಟಿ ತೆಗೆದುಕೊಂಡು ಹೋಗುತ್ತಾರೆ.

‘ಮೂರು ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಮಕ್ಕಳು ಹೊಸದಾಗಿ ಬಂದಾಗ ಮಾತ್ರ ಆಳುತ್ತವೆ. ನಂತರ ಆಟ, ಪಾಠದಲ್ಲಿ ತಲ್ಲೀನರಾಗುತ್ತವೆ. ಬಹು ಬೇಗನೆ ಗ್ರಹಿಸುವ ಶಕ್ತಿ ಇದ್ದು, ಮಕ್ಕಳು ಚುರುಕಾಗಿ ತೊಡಗಿಸಿಕೊಳ್ಳುತ್ತಾರೆ. ಆಗಾಗ ಪಾಲಕರು ಬಂದು ತಮ್ಮ ಮಕ್ಕಳ ಬಗ್ಗೆ ಗಮನಹರಿಸಿ ಹೋಗುತ್ತಾರೆ. ಪ್ರತಿದಿನ ಈ ಕೇಂದ್ರಕ್ಕೆ 5 ಜನ ಗರ್ಭಿಣಿಯರು, 5 ಜನ ಬಾಣಂತಿಯರು ಪೌಷ್ಟಿಕ ಆಹಾರ ಸೇವೆನೆಗೆ ಬರುತ್ತಾರೆ. ಮೊದಲು ಇಲ್ಲಿಯೇ ಊಟ ಸೇವಿಸುತ್ತಿದ್ದರು. ಈಗ ಮನೆಗಳಿಗೆ ಒಯ್ಯುತ್ತಿದ್ದಾರೆ’ ಎಂದು ಅಂಗನವಾಡಿ ಕಾರ್ಯಕರ್ತೆ ವನಜಾಕ್ಷಿ ಶಿವಶರಣಪ್ಪ ಜಾಕಾ ಹೇಳುತ್ತಾರೆ.

‘3ರಿಂದ ಐದೂವರೆ ವರ್ಷದ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ತಿಂಗಳು, ಹವಾಮಾನ, ವಿಷಯ ಚರ್ಚೆ ಮಾಡಲಾಗುತ್ತದೆ. ಸೋಮವಾರ–ಶನಿವಾರ ಸಜ್ಜಿಗೆ, ಮಂಗಳವಾರ–ಗುರುವಾರ ಹೆಸರುಬೇಳೆ, ಬುಧವಾರ–ಶನಿವಾರ ಹೆಸರುಕಾಳು ಪಾಯಸ, ಪ್ರತಿದಿನ ಮಧ್ಯಾಹ್ನ ಅನ್ನ ಸಂಬಾರ್, ಪಲಾವ್, ಲಘು ಉಪಾಹಾರ, ವಾರಕ್ಕೆ ಎರಡು ಬಾರಿ ಮೊಟ್ಟೆ ವಿತರಿಸಲಾಗುತ್ತದೆ’ ಎನ್ನುತ್ತಾರೆ ಅವರು.

‘ಮಕ್ಕಳನ್ನು ಅಂಗನವಾಡಿಗೆ ಹೋಗಿ ಎಂದು ಬಲವಂತ ಮಾಡುವುದೇ ಬೇಕಾಗಿ‍ಲ್ಲ. ಮಕ್ಕಳು ತಮ್ಮಷ್ಟಕ್ಕೆ ತಾವೇ ಅಂಗನವಾಡಿಗೆ ಹೋಗುತ್ತೇವೆ ಎಂದು ತಯಾರಾಗುತ್ತವೆ. ಇದು ನಮಗೆ ಬಹಳ ಖುಷಿಕೊಟ್ಟಿದೆ’ ಎಂದು ಪಾಲಕರು ಹೇಳುವ ಮಾತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT