ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: 6 ಕಂಪ್ಯೂಟರ್‌ಗೆ ₹4.35 ಲಕ್ಷ ವೆಚ್ಚ!

ಕೋವಿಡ್ ಸಂಕಷ್ಟ ಸಂದರ್ಭದಲ್ಲೂ ಶಹಾಪುರ ನಗರಸಭೆ ದುಂದು ವೆಚ್ಚ; ಆರೋಪ
Last Updated 3 ನವೆಂಬರ್ 2021, 3:41 IST
ಅಕ್ಷರ ಗಾತ್ರ

ಶಹಾಪುರ: ಕೋವಿಡ್ ಇಳಿಮುಖವಾಗಿ, ಏಳು ತಿಂಗಳ ಬಳಿಕ ನಗರಸಭೆಯ ಸಾಮಾನ್ಯ ಸಭೆಯು ಈಚೆಗೆ ನಡೆಯಿತು. ಕಡಿಮೆ ಮೊತ್ತದಲ್ಲಿ ಮಾಡಬಹುದಾದ ವಸ್ತುಗಳ ಖರೀದಿ, ಕಾಮಗಾರಿ ಹಾಗೂ ಕಾರ್ಯಕ್ರಮಗಳಿಗೆ ಭಾರಿ ವೆಚ್ಚ ಮಾಡಿರುವ ಕುರಿತು ಜನರಿಂದ ಆಕ್ಷೇಪ ವ್ಯಕ್ತವಾಗಿವೆ. ಕೋವಿಡ್‌ನಿಂದ ಜನರು ಸಂಕಷ್ಟಕ್ಕೀಡಾದರೆ, ಕೋವಿಡ್ ತಂದ ಪರಿಸ್ಥಿತಿ ಇಲ್ಲಿನ ನಗರಸಭೆ ಸಿಬ್ಬಂದಿಗೆ ವರವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

‘ನಗರಸಭೆ ಸಿಬ್ಬಂದಿ ಸ್ವತಃ ಬೀದಿಗಿಳಿದು ಕೋವಿಡ್ ನಿಯಮ ಉಲ್ಲಂಘಿಸಿದ ಜನರು ಹಾಗೂ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ಮಾಡಿ ದಂಡ ವಸೂಲಿ ಮಾಡಿದ್ದಾರೆ. ಎಷ್ಟು ದಂಡ ವಸೂಲಿಯಾಗಿದೆ ಎಂಬುವುದನ್ನು ಲೆಕ್ಕಪತ್ರದಲ್ಲಿ ನಮೂದಿಸದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ಬಿಜೆಪಿ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ದೂರಿದ್ದಾರೆ.

ಮೇ 5, 2021ರಂದು ಜಿಲ್ಲಾಧಿಕಾರಿ ನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟಾಗ ಕೋವಿಡ್ ಎರಡನೇ ಅಲೆ ಇರುವ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ನಿರ್ವಹಿಸಲು ತಿಳಿಸಿದ್ದರು. ಕಾಮಗಾರಿ ನಿರ್ವಹಿಸಿದ ಬಿಲ್ ₹3,79,917 ಆಗಿದೆ. ಆದರೆ, ವಾಸ್ತವಾಗಿ ಕೇವಲ ಕಟ್ಟಡ ಹಾಗೂ ಒಂದಿಷ್ಟು ಸಾಮಾಗ್ರಿ ಅಳವಡಿಸಿ ಬೀಗ ಹಾಕಿದ್ದಾರೆ. ಅಲ್ಲಿ ಹನಿ ನೀರು ಸರಬರಾಜು ಆಗಿಲ್ಲ ಎಂಬುವುದು ಸ್ಥಳಕ್ಕೆ ಭೇಟಿ ನೀಡಿದಾಗ ಕಂಡು ಬಂತು.

ಅಲ್ಲದೆ ಮಾರ್ಚ್ 13,2021ರಂದು ಜಿಲ್ಲಾಧಿಕಾರಿ ಆದೇಶದಂತೆ 40 ವರ್ಷ ಮೇಲ್ಪಟ್ಟ ಇರುವ ಸಾರ್ವಜನಿಕರು ನಗರದ ಸಾರ್ವಜನಿಕ ಆಸ್ಪತ್ರೆಗೆ ಕೋವಿಡ್ ಲಸಿಕೆ ಹಾಕಿಸಲು ಉಚಿತ 10 ಆಟೊ ವ್ಯವಸ್ಥೆ ಮಾಡಿಸಿದ ಬಿಲ್ ₹1,08,000 ಆಗಿದೆ. ನಗರದ ಅಲ್ಲಮಪ್ರಭು ಜನರಲ್ ಸ್ಟೋರ್‌ನಲ್ಲಿ ಖರೀದಿಸಿದ ಕೋವಿಡ್ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿಗೆ ಸರ್ವ ಸದಸ್ಯರಿಗೆ ಮಾಸ್ಕ್, ಸ್ಯಾನಿಟೈಜರ್ ಬಿಲ್ ₹37,345 ಆಗಿದೆ. ಅಲ್ಲದೆ ಪೌರ ಕಾರ್ಮಿಕರಿಗೆ ಸುರಕ್ಷಾ ಕವಚ ಖರೀದಿಸಿದ ಬಿಲ್ ₹1,66,080 ಪಾವತಿಸಿದ್ದಾರೆ. ಅಲ್ಲದೆ ನಗರಸಭೆಯ ಸಿಬ್ಬಂದಿಗೆ ರಕ್ಷಾ ಕವಚ ಬಿಲ್ ₹1,31,471 ವೆಚ್ಚ ಮಾಡಿದ್ದಾರೆ. ‘ಜನರಲ್ ಸ್ಟೋರ್‌ನಲ್ಲಿ ಎಲ್ಲಾ ಸಾಮಗ್ರಿಗಳನ್ನು ಖರೀದಿಸಿದ್ದು, ಸಂಶಯಕ್ಕೆ ಎಡೆಮಾಡಿಕೊಟ್ಟಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ.

ನಗರಸಭೆಯ ಸಹಾಯಕ ಎಂಜಿನಿಯರ್ ಹಾಗೂ ವ್ಯವಸ್ಥಾಪಕರು ಕೊಠಡಿಗೆ ಕಾಲಿಂಗ್ ಬೆಲ್ ಅಳವಡಿಸಲು ₹8,850 ವೆಚ್ಚ ಮಾಡಿದ್ದಾರೆ. ಭ್ರಷ್ಟಾಚಾರ ನಿಗ್ರಹ ಜಾಗೃತ ದಳದವರ ಜಾಗೃತಿ ಕಾರ್ಯಕ್ರಮಕ್ಕೆ ಮೈಕ್, ಜನರೇಟರ್, ಕುರ್ಚಿಗಾಗಿ ₹5 ಸಾವಿರ ಬಿಲ್ ಮಾಡಿದ್ದಾರೆ. ನಗರಸಭೆ ಸಿಬ್ಬಂದಿಗಾಗಿ ಖರೀದಿಸಿದ್ದ ಆರು ಹೊಸ ಕಂಪ್ಯೂಟರ್‌ಗಳ ಬಿಲ್ ₹4,35,529! ಅಬ್ಬಬ್ಬಾ ಅಂದರೆ ಒಂದು ಕಂಪ್ಯೂಟರ್ ಬೆಲೆ ಸಾಮಾನ್ಯವಾಗಿ ₹40 ಸಾವಿರ ಇದೆ. ಆದರೆ, ಇಷ್ಟೊಂದು ದುಬಾರಿ ಕಂಪ್ಯೂಟರ್ ಬೆಲೆ ನೀಡಿ ಕಂಪ್ಯೂಟರ್ ಖರೀದಿಸಿದ್ದು, ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದರ ಬಗ್ಗೆ ಸಮಗ್ರವಾದ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖಂಡರು ಜಿಲ್ಲಾಧಿಕಾರಿಗೆಮನವಿ ಮಾಡಿದ್ದಾರೆ.

****

ಜಯಂತಿ ನೆಪದಲ್ಲಿ ದುಬಾರಿ ವೆಚ್ಚ

ಶಹಾಪುರ: ನಗರದ ವಾರ್ಡ್ ನಂ. 2 ಹಾಗೂ ವಾರ್ಡ್ ನಂ.29ರಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಅಲಂಕಾರ ಹಾಗೂ ಇತರ ಖರ್ಚಿಗಾಗಿ ₹74,452 ಬಿಲ್ ಮಾಡಲಾಗಿದೆ. ಅಲ್ಲದೆ ಅಂಬೇಡ್ಕರ್ ಹಾಗೂ ಬಸವೇಶ್ವರ ಜಯಂತಿಗೆ ₹26,000 ವೆಚ್ಚವಾಗಿದೆ. ಕೋವಿಡ್ ಎರಡನೇಯ ಅಲೆ ಇರುವಾಗ ಜಯಂತಿಗಳನ್ನು ಸರಳವಾಗಿ ಆಚರಿಸಲು ಜಿಲ್ಲಾಧಿಕಾರಿಯ ನಿರ್ದೇಶನವಿದ್ದರೂ ಜಯಂತಿ ಹೆಸರಿನಲ್ಲಿ ಇಷ್ಟೊಂದು ಹಣ ವೆಚ್ಚ ಮಾಡಿದ್ದು, ಅನುಮಾನಕ್ಕೆ ಕಾರಣವಾಗಿದೆ.

ಇಷ್ಟು ಸಾಲದು ಎನ್ನುವಂತೆ ಸ್ವಾತಂತ್ರ್ಯ ದಿನಾರಚಣೆ ಅಂಗವಾಗಿ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ತಬ್ದ ಚಿತ್ರ, 10 ಗಾಲಿಯ ಟ್ರಾಲಿಗಾಗಿ ₹1,41,670 ವೆಚ್ಚ ಮಾಡಿದ ಬಗ್ಗೆ ದಾಖಲೆ ಸಲ್ಲಿಸಲಾಗಿದೆ.

***

ನಾನು ಅಧಿಕಾರವಹಿಸಿಕೊಂಡು ಒಂದು ತಿಂಗಳಾಗಿದೆ. ಸಾಮಾನ್ಯ ಸಭೆಯಲ್ಲಿ ಮಂಡಿಸಿದ ಏಳು ತಿಂಗಳದ ಎಲ್ಲಾ ಖರ್ಚು ವೆಚ್ಚವು ಸರಿಯಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪಿಸಿದ ನೀರಿನ ಘಟಕದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ

- ಓಂಕಾರ ಪೂಜಾರಿ, ಪೌರಾಯುಕ್ತ

***

ಸರ್ಕಾರಿ ಆಸ್ಪತ್ರೆಯಲ್ಲಿ ನಗರಸಭೆ ವತಿಯಿಂದ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾಗಿಲ್ಲ. ಅರೆ ಬರೆ ಕೆಲಸ ಮಾಡಿ ಬೀಗ ಹಾಕಿದ್ದಾರೆ

- ಡಾ.ಮಲ್ಲಪ್ಪ ಕಣಜಿಗಿಕರ್, ತಾಲ್ಲೂಕು ಆಸ್ಪತ್ರೆ ಆಡಳಿತಾಧಿಕಾರಿ

***

ಆಡಳಿತ ಪಕ್ಷದ ಜೊತೆ ವಿರೋಧ ಪಕ್ಷದ ಸದಸ್ಯರು ಶಾಮೀಲಾಗಿ ಹಣ ದುರ್ಬಳಕೆಗೆ ಅವಕಾಶ ನೀಡಿದ್ದಾರೆ. ಜಿಲ್ಲಾಧಿಕಾರಿ ತನಿಖೆಗೆ ಆದೇಶ ನೀಡಬೇಕು

- ಯಲ್ಲಯ್ಯ ನಾಯಕ ವನದುರ್ಗ ಬಿಜೆಪಿ ಮುಖಂಡ, ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT