ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: 2,265 ವಿದ್ಯಾರ್ಥಿನಿಯರಿಗೆ ಒಂದೇ ಕಟ್ಟಡ

Last Updated 23 ನವೆಂಬರ್ 2021, 5:24 IST
ಅಕ್ಷರ ಗಾತ್ರ

ಶಹಾಪುರ: ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ 2,265 ವಿದ್ಯಾರ್ಥಿನಿಯರು ಒಂದೇ ಕಟ್ಟಡದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಕೋಣೆಗಳ ಸಮಸ್ಯೆಯಿಂದ ಹಿಡಿದು ಕನಿಷ್ಠ ಸೌಲಭ್ಯಗಳವರೆಗೆ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಪರದಾಡುತ್ತಿದ್ದಾರೆ. ಪ್ರೌಢಶಾಲೆ ಹಾಗೂ ಕಾಲೇಜು ಪ್ರತ್ಯೇಕ ವಿಭಾಗ ಮಾಡುವುದರ ಜತೆಯಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಿಸಬೇಕು ಎಂಬುದು ಪಾಲಕರ ಹಕ್ಕೊತ್ತಾಯವಾಗಿದೆ.

ಪ್ರೌಢಶಾಲೆಯಲ್ಲಿ 22 ಕೋಣೆ ಗಳಿದ್ದು, ಹೆಚ್ಚುವರಿಯಾಗಿ ಇನ್ನೂ 5 ಕೋಣೆಗಳು ಬೇಕು. ಆದರೂ ಶಾಲೆಗೆ ಪ್ರತ್ಯೇಕ ಕಟ್ಟಡ ಅವಶ್ಯವಿದೆ.

ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿನಿಯರು ಗ್ರಾಮೀಣ ಪ್ರದೇಶದಿಂದಲೇ ಬರುವ ಇಲ್ಲಿನ ಪ್ರೌಢಶಾಲೆಯಲ್ಲಿ 8 ರಿಂದ 10ನೇ ತರಗತಿಗಳು ನಡೆಯುತ್ತವೆ. 876 ವಿದ್ಯಾರ್ಥಿನಿಯರು ಇದ್ದಾರೆ. ಪಿಯುಸಿಯಲ್ಲಿ 1,389 ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. ಒಂದೇ ಕೋಣೆಯಲ್ಲಿ 290ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕುಳಿತುಕೊಳ್ಳುವ ಸ್ಥಿತಿಯಿದೆ. ಮೊದಲು ಕೋಣೆಗಳ ಸಮಸ್ಯೆ ನೀಗಿಸಬೇಕಾಗಿದೆ. ನೀರಿನ ಸಮಸ್ಯೆಯೂ ಎದ್ದು ಕಾಣುತ್ತಿದೆ. ಏಕೈಕ ಶುದ್ಧ ಕುಡಿಯುವ ನೀರಿನ ಘಟಕವಿದೆ.

‘ಇಷ್ಟೊಂದು ವಿದ್ಯಾರ್ಥಿಗಳಿಗೆ ನೀರು ಸಾಕಾಗುವುದಿಲ್ಲ. ಟ್ಯಾಂಕರ್ ನೀರೆ ಗತಿಯಾಗಿದೆ. ಶೌಚಾಲಯಗಳಿವೆ. ಆದರೆ, ಸಮರ್ಪಕವಾದ ನಿರ್ವಹಣೆ ಇಲ್ಲ. ವಾರಕ್ಕೊಮ್ಮೆ ಸ್ವಚ್ಛಗೊಳಿಸುತ್ತಾರೆ. ಕೆಲ ಕೋಣೆಗಳು ಹಾಳಾಗಿವೆ. ನೀರಿನ ಸರಬರಾಜು ಸಮರ್ಪಕವಾಗಿಲ್ಲ. ಇನ್ನೊಂದು ಹಾಳು ಬಿದ್ದಿದೆ. ಬಯಲಿನಲ್ಲಿಯೇ ನಿಸರ್ಗ ಕರೆ ಪೂರೈಸಿಕೊಳ್ಳಬೇಕು. ಹೊಟ್ಟೆನೋವು ಹಾಗೂ ಇನ್ನಿತರ ಸಮಸ್ಯೆ ಉಂಟಾದರೆ ಶಾಲೆ ಬಿಟ್ಟು ಮನೆಯಲ್ಲಿ ಉಳಿಯುವ ದುಸ್ಥಿತಿ ಬಂದಿದೆ. ಶಾಲೆಯಲ್ಲಿ ಅಗತ್ಯ ಸೌಲಭ್ಯವಿಲ್ಲ ಎಂದು ಪಾಲಕರಿಗೆ ತಿಳಿಸಿದರೆ ಶಾಲೆಗೆ ಹೋಗುವುದು ಬೇಡ ಅಂತ ಹೇಳುತ್ತಾರೆ. ಹೀಗಾಗಿ ನಾವು ಏನನ್ನೂ ಹೇಳದ ಸ್ಥಿತಿಯಲ್ಲಿ ಇದ್ದೇವೆ’ ಎಂದು ಕೆಲ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.

‘ವಿದ್ಯಾರ್ಥಿನಿಯರಿಗೆ ಆಟವಾಡಲು ಪ್ರತ್ಯೇಕವಾದ ಆಟದ ಮೈದಾನವಿಲ್ಲ. ಪಡ್ಡೆ ಹುಡುಗರ ಹಾವಳಿಯು ಹೆಚ್ಚಾಗಿದೆ. ಕಟ್ಟಡದ ಸುತ್ತಲೂ ಆವರಣ ಗೋಡೆ ಎತ್ತರಿಸಬೇಕು. ಪ್ರತ್ಯೇಕವಾದ ಗ್ರಂಥಾಲಯದ ಅವಶ್ಯಕತೆ ಇದೆ’ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಪ್ರೌಢಶಾಲೆಯ ವಿಭಾಗದಲ್ಲಿ ಒಟ್ಟು 19 ಸಿಬ್ಬಂದಿ ಇದ್ದಾರೆ. ಇನ್ನೂ 10 ಹುದ್ದೆಗಳು ಖಾಲಿ ಇವೆ. ಅದರಲ್ಲಿ ವಿಜ್ಞಾನ ಶಿಕ್ಷಕರು ಇಲ್ಲ. ವಿಜ್ಞಾನ ಪ್ರಯೋಗಾಲಯವಿಲ್ಲ. ಅತಿಥಿ ಶಿಕ್ಷಕರ ಪಾಠ ಮಾಡುತ್ತಿದ್ದಾರೆ’ ಎಂದು ಅವರು ತಿಳಿಸಿದರು.

ಪಿಯುಸಿ ವಿಭಾಗ: ಪ್ರೌಢಶಾಲೆ ವಿಭಾಗಕ್ಕಿಂತ ಹೆಚ್ಚಿನ ಸಮಸ್ಯೆಯನ್ನು ಪಿಯುಸಿ ವಿಭಾಗದ ವಿದ್ಯಾರ್ಥಿನಿಯರು ಎದುರಿಸುತ್ತಿದ್ದಾರೆ. ಸ್ವತಃ ಕಾಲೇಜಿನ ಸಿಬ್ಬಂದಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆಯಿಲ್ಲ. ಒಟ್ಟು 15 ಸಿಬ್ಬಂದಿ ಇದ್ದಾರೆ. 5 ಉಪನ್ಯಾಸಕರ ಹುದ್ದೆ ಖಾಲಿ ಇವೆ. ಪ್ರಾಚಾರ್ಯ ಹುದ್ದೆ ಯೂ ಖಾಲಿ ಇದೆ. ಕಾಲೇಜಿಗೆ ಸೌಲಭ್ಯ ಒದಗಿಸಬೇಕು ಎಂದು ವಿದ್ಯಾರ್ಥಿನಿ ಯರ ಪಾಲಕರು ಮನವಿ ಮಾಡಿದ್ದಾರೆ.

ತಾಲ್ಲೂಕಿನಲ್ಲಿ ಬಹುತೇಕ ಸರ್ಕಾರಿ ಶಾಲೆಗಳೂ ಇದೇ ಬಗೆಯಲ್ಲಿ ಅಗತ್ಯ ಸೌಲಭ್ಯಗಳಿಂದ ವಂಚಿತವಾಗಿವೆ. ದಾಖಲೆಯಲ್ಲಿ ಮಾತ್ರ ಎಲ್ಲವೂ ಸುಸಜ್ಜಿತವಾಗಿ ಇವೆ. ಖುದ್ದಾಗಿ ಭೇಟಿ ನೀಡಿದಾಗ ಅಲ್ಲಿನ ಕರಾಳ ಚಿತ್ರಣ ನಿಮಗೆ ಸಿಗುತ್ತದೆ ಎಂದೂ ವಿದ್ಯಾರ್ಥಿಗಳ ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

*ಶಾಲೆಯ ಶೌಚಾಲಯಗಳನ್ನು ವಾರದಲ್ಲಿ ಒಂದು ಬಾರಿ ಸ್ವಚ್ಛಗೊಳಿಸಲಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಇಲ್ಲ. ಕೋಣೆಗಳ ಸಮಸ್ಯೆ ಇದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ

- ವೆಂಕೋಬಾ ಎಲ್, ಮುಖ್ಯಶಿಕ್ಷಕ, ಪ್ರೌಢಶಾಲೆ

*ಈ ಬಾರಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಳದಿಂದ ತುಸು ಸಮಸ್ಯೆಯಾಗಿದೆ ನಿಜ. ಶಿಥಿಲಗೊಂಡ ಶೌಚಾಲಯದ ಕಟ್ಟಡ ದುರಸ್ತಿ ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ

- ಎಂ.ಎಂ.ಹುಂಡೆಕಾರ, ಪ್ರಭಾರಿ ಪ್ರಾಚಾರ್ಯ, ಸರ್ಕಾರಿ ಬಾಲಕಿಯರ ಪಿಯು ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT