ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಗಳ ತ್ರಿವಿಧ ದಾಸೋಹ ರಾಷ್ಟ್ರಕ್ಕೆ ಮಾದರಿ

ಶರಣ ಉದ್ಯಾನದಲ್ಲಿ ಶಿವಕುಮಾರ ಸ್ವಾಮೀಜಿ 111ನೇ ಜನ್ಮದಿನ ಆಚರಣೆ
Last Updated 2 ಏಪ್ರಿಲ್ 2018, 6:55 IST
ಅಕ್ಷರ ಗಾತ್ರ

ಬೀದರ್: ‘ತುಮಕೂರು ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಅವರು ನಡೆಸುತ್ತಿರುವ ತ್ರಿವಿಧ ದಾಸೋಹ ಸೇವೆ ರಾಷ್ಟ್ರಕ್ಕೆ ಮಾದರಿ’ ಎಂದು ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ತುಮಕೂರು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಶಿಗಳ ಸಂಘದ ಜಿಲ್ಲಾ ಘಟಕ ವತಿಯಿಂದ ನಗರದ ಶರಣ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ ಶಿವಕುಮಾರ ಸ್ವಾಮೀಜಿ ಅವರ 111ನೇ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಶಿವಕುಮಾರ ಸ್ವಾಮೀಜಿ ಅವರು ಜಾತಿ, ಮತ, ಪಂಥಗಳ ಭೇದವಿಲ್ಲದೆ ಸಮಾನತೆಯಿಂದ ತ್ರಿವಿಧ ದಾಸೋಹ ಸೇವೆಗೆ ಸಮರ್ಪಣ ಭಾವದಿಂದ ದುಡಿಯುತ್ತಿರುವ ನಮ್ಮ ರಾಷ್ಟ್ರದ ಏಕೈಕ ಸಂತ’ ಎಂದು ಬಣ್ಣಿಸಿದರು.ಸಾನ್ನಿಧ್ಯ ವಹಿಸಿದ ಕೌಠಾದ ಬಸವ ಯೋಗಾಶ್ರಮದ ಸಿದ್ಧರಾಮ ಬೆಲ್ದಾಳ ಶರಣರು ಮಾತನಾಡಿ, ‘ಸಿದ್ಧಗಂಗಾ ಮಠದಲ್ಲಿ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಫಲವಾಗಿ ಅಲ್ಲಿ ವ್ಯಾಸಂಗ ಮಾಡಿರುವ ಅಸಂಖ್ಯಾತ ವಿದ್ಯಾರ್ಥಿಗಳು ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ’ ಎಂದು ನುಡಿದರು.

ಬಸವ ಸೇವಾ ಪ್ರತಿಷ್ಠಾನದ ಪ್ರಭುದೇವರು ಮಾತನಾಡಿ, ‘ಸರ್ಕಾರದ ಯಾವುದೇ ರೀತಿಯ ನೆರವು ಪಡೆಯದೆ ಮಠವನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿದ ಕೀರ್ತಿ ಶಿವಕುಮಾರ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ಅವರು ತಮ್ಮ ಪರಿಶ್ರಮದ ಮೂಲಕ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಅವರಿಗೆ ನೆರವಾಗಿದ್ದಾರೆ’ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ‘ಶಿವಕುಮಾರ ಸ್ವಾಮೀಜಿ ಅವರು ಕೈಗೊಂಡಿರುವ ಸಮಾಜ ಸೇವೆಯನ್ನು ಈ ಭಾಗದ ಎಲ್ಲ ಮಠಾಧೀಶರು ಕೈಗೊಳ್ಳಬೇಕು’ ಎಂದು ಹೇಳಿದರು.

‘ಸರ್ಕಾರ ಮಾಡದ ಕೆಲಸವನ್ನು ಶಿವಕುಮಾರ ಸ್ವಾಮೀಜಿ ಅವರು ಮಾಡುತ್ತಿದ್ದಾರೆ. ಅವರು 89 ವರ್ಷಗಳಿಂದ ಮಠದ ಪೀಠಾಧಿಪತಿಗಳಾಗಿ ಸಮಾಜ ಸೇವೆ ನಡೆಸುತ್ತಿದ್ದಾರೆ’ ಎಂದು ಉಪನ್ಯಾಸ ನೀಡಿದ ಬಸವಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿದರು.ಇದೇ ಸಂದರ್ಭದಲ್ಲಿ ‘ಸಿದ್ಧಗಂಗಾ ಕಾಯಕ ದಾಸೋಹ’ ಪ್ರಶಸ್ತಿಯನ್ನು ಹಾಸ್ಯ ನಟ ವೈಜನಾಥ ಬಿರಾದಾರ, ನಟ, ನಿದೇರ್ಶಕ ಬಿ.ಜೆ ವಿಷ್ಣುಕಾಂತ, ಮೈಸೂರಿನ ಸಮಾಜ ಸೇವಕಿ ಅಕ್ಕಮಹಾದೇವಿ ಎಚ್.ಎಂ ಅವರಿಗೆ ಪ್ರದಾನ ಮಾಡಲಾಯಿತು.

ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪೂರ ಅಧ್ಯಕ್ಷತೆ ವಹಿಸಿದ್ದರು.ಸಂಘದ ಉಪಾಧ್ಯಕ್ಷ ರಮೇಶ ಪಾಟೀಲ ಪಾಶಾಪುರ, ಪ್ರಮುಖರಾದ ಡಾ. ಬಸವರಾಜ ಬಲ್ಲೂರು, ಸಿದ್ದರಡ್ಡಿ ನಾಗೂರ, ಧನರಾಜ ಕಡ್ಯಾಳ, ನರೇಂದ್ರ ಹಂಗರಗಿ, ಸುಭಾಸ ಗಡವಂತೆ, ಸಾಗರ ಕಿರಣಗಿ, ಪ್ರವೀಣ ಬಿರಾದರ ಉಪಸ್ಥಿತರಿದ್ದರು. ದೇವೇಂದ್ರ ಕರಂಜೆ ನಿರೂಪಿಸಿದರು. ನಾಗಭೂಷಣ ಹುಗ್ಗೆ ವಂದಿಸಿದರು.

ಬೈಕ್‌ ರ‍್ಯಾಲಿ: ಇದಕ್ಕೂ ಮುಂಚೆ ಮಠದ ಹಳೆಯ ವಿದ್ಯಾರ್ಥಿಗಳಿಂದ ನಗರದ ಪ್ರಮುಖ ರಸ್ತೆಯಲ್ಲಿ ಬೈಕ್‌ ರ‍್ಯಾಲಿ ನಡೆಸಿದರು. ಪಾಪನಾಶ ಗೇಟ್‌ ಬಳಿ ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕಾ ಅಕ್ಕ ಚಾಲನೆ ನೀಡಿದರು.

**

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಸಾಮಾಜಿಕ ಸೇವೆ ಮಾಡುವುದರ ಜತೆಗೆ ಕಲಾ ಸೇವೆಯನ್ನು ಪೋಷಿಸುತ್ತಿದ್ದಾರೆ – 
ವೈಜನಾಥ ಬಿರಾದಾರ, ಹಾಸ್ಯ ಕಲಾವಿದ

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT