ಬುಧವಾರ, ಮೇ 25, 2022
31 °C

ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: '‍ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರಗಳಾಗಿದ್ದು, ಅಂಥವುಗಳನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ಸದಸ್ಯರು ಹೊಂದಿದ್ದಾರೆ. ಐದು ದಿನಗಳ ತರಬೇತಿ ನಿಮ್ಮ ಐದು ವರ್ಷಗಳ ಅಧಿಕಾರವಧಿ ಯಶಸ್ವಿಯಾಗಿ ನಿರ್ವಹಿಸಲು ಸಹಕಾರಿ ಆಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಸಲಹೆ ನೀಡಿದರು.

ಯಾದಗಿರಿ, ಶಹಾಪುರ, ಸುರಪುರ ತಾಲ್ಲೂಕಿನ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಂಸ್ಥೆಯ ಮೂಲಕ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಐದು ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯತಿ ಸದಸ್ಯರು ಗ್ರಾಮೀಣಾಭಿವೃದ್ಧಿಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾರೆ. ಸದಸ್ಯರಿಗೆ ಪಂಚಾಯತ್‌ ರಾಜ್ ವ್ಯವಸ್ಥೆ ಮತ್ತು ಕಾರ್ಯವಿಧಾನದ ಬಗ್ಗೆ ಅರಿವು ಇರಬೇಕಾಗುತ್ತದೆ. ಅದನ್ನು ಮನಗಂಡ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮೈಸೂರಿನ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಮೂಲಕ ರಾಜ್ಯದ 91,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಇರುವ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿ ಆಯೋಜಿಸಿದೆ’ ಎಂದರು.

ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಸುನಿಲ್ ಬಿಸ್ವಾಸ್ ಮಾತನಾಡಿ, ‘ಈ ತರಬೇತಿ ಗ್ರಾಮ ಪಂಚಾಯಿತಿ ಕ್ರಿಯಾ ಯೋಜನೆಗಳ ತಯಾರಿಕೆಯಲ್ಲಿ ಸಹಕಾರಿ ಆಗುತ್ತದೆ. ವಾರ್ಡ್ ಸಭೆ, ಗ್ರಾಮಸಭೆಗಳು, ಗ್ರಾಮ ಪಂಚಾಯಿತಿ ಸಭೆಗಳ ಬಗ್ಗೆಯೂ ತರಬೇತಿಯಲ್ಲಿ ಮಾಹಿತಿ ನೀಡುತ್ತಾರೆ. ಆ ಮಾಹಿತಿ ಪಡೆದು ಗ್ರಾಮ ಪಂಚಾಯಿತಿ ಯೋಜನೆಗಳನ್ನು ಉತ್ತಮವಾಗಿ ತಯಾರಿಸಿ' ಎಂದರು.

ಯೋಜನಾ ನಿರ್ದೇಶಕ ಗುರುನಾಥ ಗೌಡಪ್ಪನವರ ಮಾತನಾಡಿ, ‘ಗ್ರಾಮ ಪಂಚಾಯಿತಿ ಸದಸ್ಯರು ಮೊದಲು ಶೌಚಾಲಯ ಕಟ್ಟಿಸಿಕೊಂಡು ಇತರರಿಗೆ ಮಾದರಿ ಆಗಬೇಕು. ಸ್ವಚ್ಛ ಭಾರತ ಮಿಷನ್‌ನಡಿ ಜಿಲ್ಲೆಯಲ್ಲಿ ಪ್ರಾರಂಭಿಸಿರುವ ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ಅಭಿಯಾನದಲ್ಲಿ ಪಾಲ್ಗೊಂಡು ನೀವೆಲ್ಲರೂ ನಿಮ್ಮ ಗ್ರಾಮಗಳನ್ನು ತ್ಯಾಜ್ಯ ಮುಕ್ತಗೊಳಿಸಿ' ಎಂದರು.

ಯಾದಗಿರಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ, ಶಹಾಪುರ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಜಗನ್ನಾಥ ಮೂರ್ತಿ, ಸುರಪುರ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ತರಬೇತಿ ಕಾರ್ಯಕ್ರಮದ ಉದ್ದೇಶ, ರೂಪುರೇಷೆಗಳನ್ನು ವಿವರಿಸಿದರು.

ಶಹಾಪುರ ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ರಾಘವೇಂದ್ರ, ಭೀಮರಾಯ ಬಿರಾದರ, ಆದರ್ಶ ವಿದ್ಯಾಲಯದ ಪ್ರಾಂಶುಪಾಲ ಸೋಮಶೇಖರ ಆರ್ ಸೋಮಪುರ, ಶಹಾಪುರ ಎಡಿ ಶಾರದಾ, ಮೌಲಾಲಿ, ಶಿವರಾಯ, ಸಾಯಿಕುಮಾರ ಇದ್ದರು.

ಯಾದಗಿರಿ ತಾಲ್ಲೂಕಿನ ಹೊನಗೇರಾ ಮತ್ತು ಮಲ್ಹಾರ ಗ್ರಾಮ ಪಂಚಾಯಿತಿಗಳ ನೂತನ ಗ್ರಾಮ ಪಂಚಾಯಿತಿ ಸದಸ್ಯರು, ಸುರಪುರ ತಾಲ್ಲೂಕಿನ ದೇವಿಕೇರಾ ಮತ್ತು ಹೆಬ್ಬಾಳ ಬಿ ಗ್ರಾಮ ಪಂಚಾಯಿತಿ ನೂತನ ಸದಸ್ಯರು, ಶಹಾಪುರ ತಾಲ್ಲೂಕಿನ ವನದುರ್ಗ, ಕಕ್ಕಸಗೇರಾ, ಚಾಮನಾಳ ಮತ್ತು ಮದ್ರಿಕಿ ಗ್ರಾಮ ಪಂಚಾಯಿತಿಗಳ ನೂತನ ಪಂಚಾಯಿತಿ ಸದಸ್ಯರು, ಎಸ್‌ಐಆರ್‌ಡಿಯ ಸಂಪನ್ಮೂಲ ವ್ಯಕ್ತಿಗಳು, ಎಸ್‌ಬಿಎಂ ಜಿಲ್ಲಾ ಸಂಯೋಜಕ ವೆಂಕಟೇಶ ಮತ್ತು ಪಿಡಿಒಗಳು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಇದ್ದರು. 

***

ಗ್ರಾಮ ಪಂಚಾಯಿತಿ ಸದಸ್ಯರಿಗೆ ವಾರ್ಡ್‌, ಗ್ರಾಮದ ಜನರಿಗೆ ಚುನಾವಣೆ ವೇಳೆ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಲು ಐದು ದಿನಗಳ ತರಬೇತಿ ಉಪಯುಕ್ತವಾಗಿದೆ
- ಮುಕ್ಕಣ್ಣ ಕರಿಗಾರ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು