ಶನಿವಾರ, ಜೂನ್ 6, 2020
27 °C
ಹಾಸ್ಟೆಲ್, ವಸತಿ ಶಾಲೆ, ಕಚೇರಿಗಳ ನೌಕರರ ಪ್ರತಿಭಟನೆ

‘ಹೊರಗುತ್ತಿಗೆ ನೌಕರರ ಸಮಸ್ಯೆ ಪರಿಹರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಸಮಾಜ ಕಲ್ಯಾಣ, ಬಿಸಿಎಂ, ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೆಲ್, ವಸತಿ ಶಾಲೆ ಮತ್ತು ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ (ಎಐಯುಟಿಯುಸಿ ಸಂಯೋಜಿತ)ದ ನೇತೃತ್ವದಲ್ಲಿ ಶುಕ್ರವಾರ ಜಿಪಂ ಎದುರು ಪ್ರತಿಭಟನೆ ಮಾಡಲಾಯಿತು.

ಹೊರಗುತ್ತಿಗೆ ಕಾರ್ಮಿಕರು ಹಲವಾರು ವರ್ಷಗಳಿಂದ ಅತಿ ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸಮಾಜ ಕಲ್ಯಾಣ ವ್ಯಾಪ್ತಿಯ ಕಾರ್ಮಿಕರಿಗೆ ಇನ್ನೂ 5-6 ತಿಂಗಳ ವೇತನ ಬಾಕಿ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‍ಡೌನ್ ಅವಧಿಯಲ್ಲಿ ಎಲ್ಲಾ ಗುತ್ತಿಗೆ ಕಾರ್ಮಿಕರಿಗೂ ವೇತನ ನೀಡಬೇಕೆಂದು ಸುತ್ತೋಲೆ ಹೊರಡಿಸಿವೆ. ಆದರೆ, ಕೆಲವು ಅಧಿಕಾರಿಗಳು ಲಾಕ್‍ಡೌನ್ ಅವಧಿಯ ವೇತನ ನೀಡುತ್ತಿಲ್ಲ. ಕಾರಣ ಕೇಳಿದರೆ ಲಾಕ್‌ಡೌನ್ ಅವಧಿಯಲ್ಲಿ ಕೆಲಸ ಮಾಡಿದರೆ ಮಾತ್ರ ನೀಡುವುದಾಗಿ ತಿಳಿಸುತ್ತಿದ್ದಾರೆ ಮತ್ತು ಕೆಲವು ಕಡೆ ಪ್ರಿಮೆಟ್ರಿಕ್ ಹೊರತುಪಡಿಸಿ ಇತರರಿಗೆ ನೀಡಿದ್ದಾರೆ ಎಂದು ಪದಾಧಿಕಾರಿಗಳು ದೂರಿದರು.

ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಪ್ರಿ ಮೆಟ್ರಿಕ್ / ವಸತಿಶಾಲೆಗಳು / ಆಶ್ರಮ ಶಾಲೆ ರಜೆ ಇರುವುದರಿಂದ ವೇತನ ಬರುವುದಿಲ್ಲವೆಂದು ತಿಳಿಸುತ್ತಿದ್ದಾರೆ. ಆದರೆ, ಲಾಕ್‍ಡೌನ್ ಅವಧಿಯಲ್ಲಿ ಬೇರೆ ಕೆಲಸಗಳನ್ನು ನಿರ್ವಹಿಸುವುದು ಸಾಧ್ಯವಿಲ್ಲ. ಹಾಗಾಗಿ ಇಲಾಖೆಗೆ ಕನಿಷ್ಠ ಕೂಲಿಗೆ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿರುವ ಕಾರ್ಮಿಕರಿಗೆ ಇಂಥ ವಿಶೇಷ ಸಂಧರ್ಭದಲ್ಲಿ ಸರ್ಕಾರವು ವೇತನ ನೀಡಬೇಕಿತ್ತು. ಹಾಸ್ಟೆಲ್‍ಗಳಲ್ಲಿನ ಆಹಾರ ಸಾಮಗ್ರಿಗಳು ಹಾಳಾಗುವ ಮುನ್ನ, ತಕ್ಷಣಕ್ಕೆ ಈ ಸಾಮಗ್ರಿಗಳನ್ನು ಇಲಾಖೆಯ ಗುತ್ತಿಗೆ ಕಾರ್ಮಿಕರಿಗೆ ವಿತರಿಸುವ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ನಂತರ ಸಮಾಜ ಕಲ್ಯಾಣ, ಬಿಸಿಎಂ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಸಚಿವರಿಗೆ ಆಯಾ ಇಲಾಖೆಯ ಉಪನಿರ್ದೇಶಕರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಸಂಘದ ಜಿಲ್ಲಾ ಮುಖಂಡರಾದ ರಾಮಲಿಂಗಪ್ಪ ಬಿ.ಎನ್., ಜಿಲ್ಲಾ ಉಪಾಧ್ಯಕ್ಷ ತಾಜುದ್ದೀನ್, ಹಾಸ್ಟೆಲ್ ಕಾರ್ಮಿಕರಾದ ಭೀಮಶಂಕರ, ಜೈಭೀಮ, ಶ್ರೀಕಾಂತ, ಭಾಗಪ್ಪ, ನಾಗಮ್ಮ, ಪದ್ಮಾ, ಜಗದೇವಿ, ಲಕ್ಷ್ಮಿ, ಸುಮಂಗಲಾ, ಶ್ರೀದೇವಿ, ಅನುಸುಯಾ, ಬನ್ನಮ್ಮ ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು