ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ವಿಶ್ವಾರಾಧ್ಯರ ಮೂರ್ತಿ ಪುನರ್ ಬಿಂಬ ಪ್ರತಿಷ್ಠಾಪನೆ

Last Updated 1 ಏಪ್ರಿಲ್ 2023, 6:06 IST
ಅಕ್ಷರ ಗಾತ್ರ

ಯಾದಗಿರಿ: ’ಪ್ರತಿಯೊಬ್ಬರೂ ವ್ಯಕ್ತಿತ್ವವನ್ನು ಎತ್ತರಕ್ಕೆ ಬೆಳೆಸಿಕೊಳ್ಳಬೇಕು. ಲೋಕಕಲ್ಯಾಣದ ಕಾರ್ಯಗಳ ಮೂಲಕ ಎತ್ತರವಾಗಿ ಬೆಳೆಯಬೇಕು‘ ಎಂದು ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯರು ಹೇಳಿದರು.

ಸುಕ್ಷೇತ್ರ ಅಬ್ಬೆತುಮಕೂರಿನಲ್ಲಿ ಸಿದ್ದಿಪುರುಷ ವಿಶ್ವಾರಾಧ್ಯರ ಮೂರ್ತಿ ಪುನರ್ ಬಿಂಬ ಪ್ರತಿಷ್ಠಾಪನಾ ಸಮಾರಂಭದ ಅಂಗವಾಗಿ ನಡೆಸುತ್ತಿರುವ 1008 ಉಮಾಮಹೇಶ್ವರಿ ಸಂತೃಪ್ತಿ ಸಮಾರಂಭಕ್ಕೆ ಚಾಲನೆ ನೀಡಿ ನಂತರ ವಿಶ್ವಾರಾಧ್ಯರ ಭವ್ಯವಾದ ಮೂರ್ತಿ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.

ಅಬ್ಬೆತುಮಕೂರಿನ ವಿಶ್ವಾರಾಧ್ಯರ ಸುಕ್ಷೇತ್ರದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ನಡೆಸುತ್ತಿರುವ ಅತಿರುದ್ರಯಾಗ, ಗೋಮಂಗಲ ಪೂಜೆ, ಅಷ್ಟಲಕ್ಷ್ಮಿ ಕುಬೇರ ಪೂಜೆ, 1008 ಉಮಾಮಹೇಶ್ವರಿ ಸಂತೃಪ್ತಿ ಸಮಾರಂಭ ಮತ್ತು ವಿಶ್ವಾರಾಧ್ಯರ ಭವ್ಯವಾದ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮಗಳು ಉತ್ತಮವಾಗಿ ನಡೆದಿವೆ ಎಂದು ಹೇಳಿದರು.

ಪೀಠಾಧಿಪತಿ ಗಂಗಾಧರ ಸ್ವಾಮೀಜಿ, ವಿಶ್ವಾರಾಧ್ಯರ ಭವ್ಯವಾದ ಮೂರ್ತಿ ಸಿದ್ದಗೊಂಡು ಮೂರ್ನಾಲ್ಕು ವರ್ಷಗಳೇ ಆಗಿವೆ. ಆಗಲೇ ಲೋಕಾರ್ಪಣೆ ಆಗಬೇಕಿತ್ತು. ಆದರೆ, 11 ವರ್ಷಗಳಿಗೊಮ್ಮೆ ನಡೆಯುವ ಬೃಹತ್ ಸಮಾರಂಭದಲ್ಲಿಯೇ ಅನಾವರಣಗೊಳ್ಳಲಿ ಎಂಬ ಸಂಕಲ್ಪ ವಿಶ್ವಾರಾಧ್ಯರದಾಗಿತ್ತು ಎಂದು ತೋರುತ್ತದೆ. ಅದಕ್ಕಾಗಿ ಈಗ ಅನಾವರಣಗೊಂಡಿದೆ ಎಂದು ಹೇಳಿದರು.

ಶಹಾಪುರದ ಕುಂಬಾರಗೇರಿ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರು, ಅಬ್ಬೆತುಮಕೂರು ಮಠದ ಕಿರಿಯ ಸ್ವಾಮೀಜಿ ಶಿವಶೇಖರ ಸ್ವಾಮೀಜಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ಅವರು, ’ವಿಶ್ವಾರಾಧ್ಯರ ತಪಃಶಕ್ತಿ, ಗಂಗಾಧರ ಶ್ರೀಗಳ ಅಂತಃಕರಣ ಶಕ್ತಿ ಮತ್ತು ಭಕ್ತರ ಭಕ್ತಿಯಿಂದ ಹಲವು ಧಾರ್ಮಿಕ ಕಾರ್ಯಕ್ರಮಗಳು ಶ್ರೀಮಠದಲ್ಲಿ ಜರುಗಿವೆ‘ ಎಂದು ಹೇಳಿದರು.

ಈ ವೇಳೆ ಪಾಳಾ ಸಂಸ್ಥಾನ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಹಲಕರ್ಟಿಯ ಮುನಿಂದ್ರ ಶಿವಾಚಾರ್ಯರು, ದಂಡಗುಂಡ ಮಠದ ಸಂಗನಬಸವ ಸ್ವಾಮೀಜಿ ಇದ್ದರು.

ಸೇವಾರ್ಥಿಗಳಿಗೆ ಸನ್ಮಾನ: ಭವ್ಯ ಮಂಟಪದ ಸೇವಾರ್ಥಿ ಎಂ.ನರಸಣಗೌಡ ರಾಯಚೂರು, ಪ್ರಸಾದ ಸೇವೆ ಮಾಡಿದ ಸುರೇಶ ಬಾಡದ, ಹೆಲಿಕ್ಯಾಪ್ಟರ್ ಸೇವೆ ಮಾಡಿದ ಶಾಹಿರ್ ಪಟೇಲ್ ಕಲಬುರಗಿ ಸೇರಿದಂತೆ ವಿವಿಧ ಸೇವಾರ್ಥಿಗಳಿಗೆ ಶ್ರೀಮಠದ ವತಿಯಿಂದ ಸತ್ಕರಿಸಲಾಯಿತು.

ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಟಿ: ವಿಶ್ವಾರಾಧ್ಯರ ಭವ್ಯವಾದ ಮೂರ್ತಿ ಲೋಕಾರ್ಪಣೆಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ವಿಶ್ವಾರಾಧ್ಯರ ಮೂರ್ತಿ ಮೇಲೆ ಪುಷ್ಪವೃಷ್ಟಿ ಮಾಡಿದಾಗ ಭಕ್ತರ ಜಯಘೋಷ ಮುಗಿಲು
ಮುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT