ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ನಲ್ಲಿ ಉಳಿದು ಮಕ್ಕಳ ಸಮಸ್ಯೆ ಅರಿಯಿರಿ

ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಸೂಚನೆ
Last Updated 3 ಸೆಪ್ಟೆಂಬರ್ 2019, 14:41 IST
ಅಕ್ಷರ ಗಾತ್ರ

ಯಾದಗಿರಿ: ‘ವಿವಿಧ ಇಲಾಖೆಗಳ ಅಡಿಯಲ್ಲಿ ನಡೆಯುತ್ತಿರುವ ಜಿಲ್ಲೆಯ ವಸತಿ ಶಾಲೆ ಮತ್ತು ವಸತಿ ನಿಲಯಗಳಲ್ಲಿರುವ ನೈಜ ಸಮಸ್ಯೆಗಳನ್ನು ಅರಿಯಲು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಒಂದು ರಾತ್ರಿ ವಸತಿ ನಿಲಯಗಳಲ್ಲಿ ಉಳಿದುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ವಸತಿ ಶಾಲೆಗಳು ಮತ್ತು ವಸತಿ ನಿಲಯಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪ್ರಾಂಶುಪಾಲರು ಹಾಗೂ ಮೇಲ್ವಿಚಾರಕರಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಬಾಲಕರ ವಸತಿನಿಲಯಗಳಲ್ಲಿ ಪುರುಷ ಅಧಿಕಾರಿಗಳು ಮತ್ತು ಬಾಲಕಿಯರ ವಸತಿ ನಿಲಯಗಳಲ್ಲಿ ಮಹಿಳಾ ಅಧಿಕಾರಿಗಳು ಒಂದು ರಾತ್ರಿ ಮಕ್ಕಳೊಂದಿಗೆ ವಾಸ ಮಾಡಿ ವರದಿ ನೀಡಬೇಕು. ಮಕ್ಕಳೊಂದಿಗೆ ಮುಕ್ತವಾಗಿ ಚರ್ಚಿಸಿ, ಅವರ ಸಮಸ್ಯೆಗಳನ್ನು ಆಲಿಸಬೇಕು’ ಎಂದರು.

‘ನೋಡಲ್ ಅಧಿಕಾರಿಗಳು ತಮಗೆ ಸಂಬಂಧಿಸಿದ ವಸತಿ ಶಾಲೆ ಅಥವಾ ವಿದ್ಯಾರ್ಥಿನಿಲಯಗಳ ಸಂಪೂರ್ಣ ಪ್ರಗತಿಯ ಹೊಣೆ ಹೊಂದಿದ್ದು, ಅವುಗಳನ್ನು ಮಾದರಿ ಶಾಲೆ, ಮಾದರಿ ವಿದ್ಯಾರ್ಥಿ ನಿಲಯಗಳನ್ನಾಗಿ ಮಾಡುವ ಜವಾಬ್ದಾರಿ ಇರುತ್ತದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ, ಶುದ್ಧ ಕುಡಿಯುವ ನೀರು ಒದಗಿಸಬೇಕು. ನೀರು ಶುದ್ಧೀಕರಣ ಘಟಕ, ಸೋಲಾರ್, ಜನರೇಟರ್, ಕಂಪ್ಯೂಟರ್, ಶೌಚಾಲಯ, ಕ್ರೀಡಾ ಸಾಮಗ್ರಿ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕು’ ಎಂದು ನಿರ್ದೇಶನ ನೀಡಿದರು.

‘ವಸತಿ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿರಬೇಕು. ಕಾವಲುಗಾರರು ಜಾಗೃತರಾಗಿರಬೇಕು. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಲಿಖಿತ ಅನುಮತಿ ಇಲ್ಲದೆ ಹೊರಹೋಗುವಂತಿಲ್ಲ. ರಜೆಯನ್ನು ಸಹ ಸಕಾರಣದೊಂದಿಗೆ ಲಿಖಿತವಾಗಿ ಪಡೆದು ಸಂಬಂಧಿಸಿದ ಪಾಲಕರ ಜೊತೆಗೆ ಹೋಗಬೇಕು’ ಎಂದು ತಿಳಿಸಿದರು.

‘ಸ್ನಾನಗೃಹ, ಶೌಚಾಲಯಗಳನ್ನು ಸೂಕ್ತವಾಗಿ ಬಳಕೆ ಮಾಡಬೇಕು. ಬಳಸದೇ ಇರುವ ವಿಷಯ ಗಮನಕ್ಕೆ ಬಂದರೆ ಸಂಬಂಧಪಟ್ಟ ವಾರ್ಡನ್, ಪ್ರಾಂಶುಪಾಲರು, ತಾಲ್ಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ‘ನೋಡಲ್ ಅಧಿಕಾರಿಗಳು ಎಲ್ಲ ಇಲಾಖೆಯ ವಸತಿ ಶಾಲೆ, ವಿದ್ಯಾರ್ಥಿನಿಲಯಗಳನ್ನು ತಪಾಸಣೆ ಮಾಡಬೇಕು. ವಸತಿ ಶಾಲೆ, ವಿದ್ಯಾರ್ಥಿನಿಲಯಗಳಲ್ಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯವಿರುವ ಎಲ್ಲ ರೀತಿಯ ಮಾರ್ಗೋಪಾಯಗಳನ್ನು ಕಂಡುಹಿಡಿದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಷ್ಠಾನಕ್ಕೆ ತರಬೇಕು’ ಎಂದು ಸೂಚಿಸಿದರು.

ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸುನೀಲ್ ಬಿಸ್ವಾಸ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಎಸ್.ಅಲ್ಲಾಬಕ್ಷ,ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಅಜೀತ್ ಜಿ.ನಾಯಕ, ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಬಂದೇನವಾಜ್ ಗೇಸುದರಾಜ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಪೂರ್ಣಿಮಾ ಚೂರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT