ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹತ್ವಾಕಾಂಕ್ಷಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ

ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣಾ ಸಮಿತಿ ಸಭೆ, ಸಂಸದ ನಾಯಕ ಸೂಚನೆ
Last Updated 14 ನವೆಂಬರ್ 2019, 15:53 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಕಾಟಾಚಾರಕ್ಕಾಗಿ ಕೆಲಸ ಮಾಡದೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಮಹಾತ್ವಕಾಂಕ್ಷಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣಾ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೇಂದ್ರದ ನೀತಿ ಆಯೋಗ ಶಿಕ್ಷಣ, ಆರೋಗ್ಯ, ಕೃಷಿ, ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಮಾನದಂಡಗಳನ್ನು ಇಟ್ಟುಕೊಂಡು ದೇಶದ ಹಿಂದುಳಿದ 115 ಜಿಲ್ಲೆಗಳನ್ನು ಮಹಾತ್ವಾಕಾಂಕ್ಷಿ ಜಿಲ್ಲೆಗಳೆಂದು ಗುರುತಿಸಿದೆ. ಇವುಗಳಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಆಯ್ಕೆಯಾಗಿವೆ. ಮಹಾತ್ವಾಕಾಂಕ್ಷಿ ಜಿಲ್ಲೆಯ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಟೀಂ ವರ್ಕ್ ಮಾಡೋಣ. ಆ ಮೂಲಕ ಮುಂದುವರೆದ ಜಿಲ್ಲೆಗಳಲ್ಲಿ ನಾವು ಕೂಡ ಗುರುತಿಸಿಕೊಳ್ಳೊಣ’ ಎಂದು ಸಲಹೆ ನೀಡಿದರು.

‘ಕೇಂದ್ರ ಪುರಸ್ಕೃತ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಜವಾಬ್ದಾರಿ ಅರಿತು ಕೆಲಸ ಮಾಡುವಂತೆ ತಾಕೀತು ಮಾಡಿದರು.

‘ಪ್ರಧಾನಮಂತ್ರಿ ಕೃಷಿ ಸಮ್ಮಾನ ನಿಧಿ ಯೋಜನೆಯ ಹಣ ಅರ್ಹ ಎಲ್ಲ ರೈತರಿಗೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಕೃಷಿ ಇಲಾಖೆ ಅಧಿಕಾರಿಗಳು ರೈತರಿಂದ ಸರಿಯಾದ ದಾಖಲೆ ಪಡೆದು ಯೋಜನೆಯ ಹಣ ತಲುಪಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ ರೈತರು ಹಣ ಪಡೆಯಲು ಬಂದಾಗ ಬ್ಯಾಂಕ್ ಅಧಿಕಾರಿಗಳು ಯಾವ ಯೋಜನೆಯ ಹಣ ಎಂದು ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.

ಜಂಟಿ ಕೃಷಿ ನಿರ್ದೇಶಕಿದೇವಿಕಾ ಆರ್., ಮಾತನಾಡಿ, ‘ಪ್ರಧಾನಮಂತ್ರಿ ಕೃಷಿ ಸಮ್ಮಾನ ನಿಧಿ ಯೋಜನೆಯಡಿ ಈಗಾಗಲೇ ನೋಂದಾಯಿಸಿರುವ ಜಿಲ್ಲೆಯ 1.22 ಲಕ್ಷ ರೈತರಲ್ಲಿ 91 ಸಾವಿರ ಫಲಾನುಭವಿಗಳ ಖಾತೆಗೆ ಸಹಾಯಧನ ಜಮಾ ಆಗಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮುಂಗಾರಿನಲ್ಲಿ ಸಾಲ ಪಡೆದ 11,093 ಹಾಗೂ ಸಾಲ ಪಡೆಯದ 5,938 ರೈತರು ಸೇರಿದಂತೆ ಒಟ್ಟು 17,031 ರೈತರು ನೋಂದಾಯಿಸಿದ್ದಾರೆ’ ಎಂದು ಮಾಹಿತಿ ಒದಗಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಮಾತನಾಡಿ, ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2019-20ನೇ ಸಾಲಿಗೆ 26.61 ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ 14.14 ಲಕ್ಷ ಮಾನವ ದಿನಗಳ ಗುರಿಯನ್ನು ತಲುಪಿದ್ದು, ಶೇಕಡ 53.15 ರಷ್ಟು ಸಾಧಿಸಲಾಗಿದೆ. ಅಕ್ಟೋಬರ್ ತಿಂಗಳಿಗೆ ನಿಗದಿಪಡಿಸಿದ ಗುರಿಯಲ್ಲಿ ಶೇಕಡ 100.12 ರಷ್ಟು ಸಾಧಿಸಲಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

‘ಜಿಲ್ಲೆಗೆ ಗ್ರಾಮೀಣ ಪ್ರದೇಶದಲ್ಲಿ ವಸತಿ ಯೋಜನೆಯಡಿ ಪ್ರಸಕ್ತ ಸಾಲಿಗೆ ಮನೆಗಳ ನಿರ್ಮಾಣಕ್ಕೆ ಎಲ್ಲ ವಸತಿ ಯೋಜನೆ ಸೇರಿ ಸರ್ಕಾದಿಂದ ನಿಗದಿಪಡಿಸಲಾದ ಒಟ್ಟು 6,813 ಮನೆಗಳ ಗುರಿಗೆ ಅನುಗುಣವಾಗಿ ಇಲ್ಲಿಯವರೆಗೆ ಒಟ್ಟು 3,199 ಮನೆಗಳು ಪೂರ್ಣಗೊಳಿಸಲಾಗಿದೆ. ಒಟ್ಟಾರೆ ಶೇಕಡ 46.95 ರಷ್ಟು ಸಾಧನೆ ಮಾಡಿದ್ದು, ಮನೆಗಳ ನಿರ್ಮಾಣದ ಪ್ರಗತಿಯಲ್ಲಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ’ ಎಂದು ನೋಡಲ್ ಅಧಿಕಾರಿ ಗುರುನಾಥ ಎನ್.ಗೌಡಪ್ಪನವರ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್, ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ, ಶರಣಬಸಪ್ಪಗೌಡ ದರ್ಶನಾಪುರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ಇದ್ದರು.

***
ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ, ಜನಸಂಖ್ಯೆಗೆ ತಕ್ಕಂತೆ ಆಶಾ ಕಾರ್ಯಕರ್ತೆಯರಿಲ್ಲ. ಅವರ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT