ಶನಿವಾರ, ಸೆಪ್ಟೆಂಬರ್ 24, 2022
24 °C
ಜಿಲ್ಲಾ ಕೇಂದ್ರದ ಸುತ್ತಲಿನ ಗ್ರಾಮಗಳಿಗೆ ಸರ್ಕಾರಿ ಬಸ್‌ ಸೌಲಭ್ಯವಿಲ್ಲ

ಯಾದಗಿರಿ: ಬಸ್‌ ಸೌಲಭ್ಯ ವಂಚಿತ ವಿದ್ಯಾರ್ಥಿಗಳು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದರೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೂಕ್ತ ಬಸ್‌ ಸೌಲಭ್ಯ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಗ್ರಾಮದ ಮುಖ್ಯರಸ್ತೆಯಿಂದ 1ರಿಂದ 2 ಕಿ.ಮೀ ಅಂತರದರಲ್ಲಿರುವ ಗ್ರಾಮಗಳಿಗೆ ಸರಿಯಾಗಿ ಬಸ್‌ ಸೌಲಭ್ಯ ಇಲ್ಲದಿದ್ದರಿಂದ ವಿದ್ಯಾರ್ಥಿಗಳು ಖಾಸಗಿ ವಾಹನಗಳನ್ನು ಅವಂಬಿಸಿದ್ದಾರೆ. ಹೇಗೋ ಮುಖ್ಯರಸ್ತೆಗೆ ಬಂದರೂ ಬಸ್‌ ನಿಲ್ಲಿಸದೇ ಬಸ್‌ ಚಾಲಕರು ತೆರಳುತ್ತಾರೆ ಎನ್ನುವುದು ವಿದ್ಯಾರ್ಥಿಗಳ ಆರೋಪವಾಗಿದೆ.

ಸುತ್ತಲಿನ ಗ್ರಾಮಗಳಿಗೆ ಬಸ್‌ ಇಲ್ಲ: ಜಿಲ್ಲಾ ಕೇಂದ್ರ ಯಾದಗಿರಿ ಸುತ್ತಲಿನ ಗ್ರಾಮಗಳಿಗೆ ಬಸ್‌ ಸೌಲಭ್ಯವಿಲ್ಲ. ವರ್ಕನಳ್ಳಿ, ಬಬಲಾದಿ, ಹುಲಕಲ್‌(ಜೆ) ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಬಸ್‌ ಸೌಲಭ್ಯ ಇಲ್ಲದಿದ್ದರಿಂದ ವಿದ್ಯಾರ್ಥಿಗಳು ಕೆಲವೊಮ್ಮೆ ಕಾಲ್ನಡಿಗೆಯಲ್ಲೇ ಶಾಲೆಗೆ ಬರುವುದು ಸಾಮಾನ್ಯವಾಗಿದೆ.

ನಗರ ಸಮೀಪದ ವಡಗೇರಾ ತಾಲ್ಲೂಕಿನ ಹುಲಕಲ್‌ (ಜೆ) ಗ್ರಾಮದ ವಿದ್ಯಾರ್ಥಿಗಳು ಪ್ರತಿವರ್ಷವೂ ಬಸ್‌ಗಾಗಿ ‍ಪರಿತಪಿಸುವುದು ಕಂಡು ಬರುತ್ತಿದೆ. ಈಚೆಗೆ ಬಸ್‌ ಸರಿಯಾದ ಸಮಯಕ್ಕೆ ಬಾರದ ಕಾರಣ ತರಗತಿಯಿಂದ ವಿದ್ಯಾರ್ಥಿಗಳು ದೂರವುಳಿದಿದ್ದರು. ಇದರಂತೆ ಮುಖ್ಯ ರಸ್ತೆಯಿಂದ ಅನತಿ ದೂರ ಇರುವ ಗ್ರಾಮಗಳ ವಿದ್ಯಾರ್ಥಿಗಳ ಪರಿಸ್ಥಿತಿ ಭಿನ್ನವಾಗಿಲ್ಲ.

ನಾಲ್ಕು ಡಿಪೋಗಳಲ್ಲೂ ಸಮಸ್ಯೆ: ಗ್ರಾಮೀಣ ಭಾಗಕ್ಕೆ ಬಸ್ ಸೌಲಭ್ಯ ಇಲ್ಲದಿರುವುದು ಜಿಲ್ಲೆಯ ನಾಲ್ಕು ಡಿಪೋಗಳಲ್ಲಿ ಕಂಡು ಬರುತ್ತಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜಿಲ್ಲೆಯ ಬಸ್ ಘಟಕಗಳಲ್ಲಿ ಈಚೆಗೆ ಟೈರ್ ಇಲ್ಲದ ಕಾರಣ ಸಂಪೂರ್ಣ ಕಾರ್ಯಾಚಾರಣೆಯಿಲ್ಲದೇ ನಾಲ್ಕು ಘಟಕಗಳಲ್ಲಿ 30ಕ್ಕೂ ಹೆಚ್ಚು ಬಸ್‌ಗಳು ಸಂಚಾರ ಸ್ಥಗಿತಗೊಂಡಿದ್ದವು.

ಟೈರ್‌ ಸಮಸ್ಯೆಯಿಂದ ಬಸ್‌ ಸೇವೆ ಒದಗಿಸುವಲ್ಲಿ ವ್ಯತ್ಯಯವಾಗುವುದಲ್ಲದೇ ಬೆಳಿಗ್ಗೆ ಹೊತ್ತಿನಲ್ಲಿ ಶಾಲಾ ಮಕ್ಕಳಿಗೆ ಮತ್ತು ಕಚೇರಿ ಕೆಲಸಗಳಿಗೆ ತೆರಳುವ ನೌಕರರಿಗೆ, ಕೂಲಿ ಕಾರ್ಮಿಕರಿಗೆ, ರೈತರಿಗೆ ತೀವ್ರ ತೊಂದರೆಯಾಗುತ್ತಿರುವುದರಿಂದ ಖಾಸಗಿ ವಾಹನಗಳಿಗೆ ಹೆಚ್ಚು ಹಣ ನೀಡಿ ಪ್ರಯಾಣಿಸಬೇಕಾದ ದೌರ್ಭಾಗ್ಯ ಎದುರಾಗಿದೆ.

ಇತ್ತ ವಿದ್ಯಾರ್ಥಿಗಳು ಬಸ್‌ಪಾಸ್ ಹೊಂದಿದ್ದರೂ ಬಸ್‌ಗಳು ಬಾರದ ಕಾರಣ ಖಾಸಗಿ ವಾಹನಗಳಲ್ಲಿ ಪ್ರಯಾಣಿಸಿದರೇ, ಇನ್ನು ಕೆಲ ವಿದ್ಯಾರ್ಥಿಗಳು ಇದನ್ನೇ ನೆಪ ಮಾಡಿಕೊಂಡು ಶಾಲೆಗೆ ಚಕ್ಕರ್ ಹಾಕುತ್ತಿರುವುದು ಪಾಲಕರ ವಲಯದಿಂದ ಕೇಳಿಬಂದಿದೆ.

***

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ‌ಬಸ್‌ ಸಮಸ್ಯೆಯಾಗುವುದು ಗಮನಕ್ಕೆ ಬಂದಿದೆ. ಹುಲಕಲ್‌ (ಜೆ) ವಿದ್ಯಾರ್ಥಿಗಳಿಗೆ ಪರ್ಯಾಯ ಮಾರ್ಗದಲ್ಲಿ ಬಸ್‌ ಸೌಲಭ್ಯ ಕಲ್ಪಿಸಲಾಗುವುದು.
–ಪ್ರವೀಣ ಯಾದವ, ಡಿಪೋ ವ್ಯವಸ್ಥಾಪಕ

***

ಹುಲಕಲ್‌ ಸೇರಿದಂತೆ ನಗರ ಸುತ್ತಮುತ್ತಲಿನ ಗ್ರಾಮೀಣ ಭಾಗದ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಯಾದಗಿರಿಗೆ ತೆರಳಲು ಬಸ್‌ ವ್ಯವಸ್ಥೆ ಇಲ್ಲ. ಬೆಳಿಗ್ಗೆ 8ಗಂಟೆಗೆ ಮತ್ತು ಸಂಜೆ 5 ಗಂಟೆಗೆ ಬಸ್‌ ವ್ಯವಸ್ಥೆ ಕಲ್ಪಿಸಬೇಕು.
-ಹೊನ್ನೇಶ ದೊಡ್ಡಮನಿ, ಎನ್‌ಎಸ್‌ಯುಐ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು