ಯಾದಗಿರಿ: ವಿದ್ಯಾರ್ಥಿಗಳು ಈಗಿನ ದಿನಗಳಲ್ಲಿ ಓದುವಿನ ಜತೆ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಟ್ಯ, ಗಾಯನ ಹಾಗೂ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರಬೇಕೆಂದು ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿಪಾಟೀಲ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮೇಜರ್ ಧ್ಯಾನಚಂದ್ ರವರ ಜನ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಿಂದ ನಮ್ಮಲ್ಲಿ ಇರುವ ಮಾನಸಿಕ ಹಾಗೂ ದೈಹಿಕ ಒತ್ತಡ ದೂರವಾಗಿ ಸದಾ ಚಟುವಟಿಕೆಯಿಂದ ಇರಲು ಸಹಕಾರಿಯಾಗಿದೆ. ಈಗಿನ ದಿನಮಾನಗಳಲ್ಲಿ ಯುವಕ ಯುವತಿಯರು ಸಾಮಾಜಿಕ ಜಾಲತಾಣಗಳಲ್ಲಿ ಮಾರುಹೋಗದೆ ಕ್ರೀಡಾ, ಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡೆಯಿಂದ ಉತ್ಸಾಹ ಮಾನಸಿಕ ಸಮತೋಲನ ಕಾಪಾಡಲು ಸಹಕಾರಿಯಾಗಿದೆ. ದೈಹಿಕವಾಗಿ ಸದೃಢವಾಗಿರಲು ಅನುಕೂಲವಾಗುವಂತಹ ಚಟುವಟಿಕೆಗಳಲ್ಲಿ ಮುಂದಾಗಿ ಶಾಲಾ ಕಾಲೇಜುಗಳಿಗೆ, ಸಮಾಜಕ್ಕೆ ಕೀರ್ತಿ ತರುವ ಪ್ರಯತ್ನ ಮಾಡಬೇಕು. ಜೀವನದಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ನಾವು ಆಚರಿಸುತ್ತಿರುವ ರಾಷ್ಟ್ರೀಯ ಕ್ರೀಡಾ ದಿನಾಚರಣೆಯು ಹಾಕಿ ಮಾಂತ್ರಿಕರೆಂದೆ ಖ್ಯಾತಿ ಪಡೆದ ಮೇಜರ್ ಧ್ಯಾನಚಂದ್ ರವರ ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮೈಗೂಡಿಸಿಕೊಂಡು ಸಾಧನೆಗಳ ಕಡೆ ಮುಖ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ, ಕ್ಷಯ ರೋಗ ನಿರ್ಮೂಲನಾ ಮಂಡಳಿ ಸದಸ್ಯ ಡಾ.ಸಂಜೀವಕುಮಾರ್ ರಾಯಚೂರಕರ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ತೆರಿಗೆ ಇಲಾಖೆ ಸಹಾಯಕ ನಿರ್ದೇಶಕ ಅಪ್ಪು ಚಿಮ್ಮಲಗಿ, ಅರ್ಥಶಾಸ್ತ್ರ ಉಪನ್ಯಾಸಕ ಸಾಮುವೇಲ್, ವೀರಭದ್ರಪ್ಪ ಗವಾಯಿ ತಂಡದಿಂದ ಗಾಯನ, ಗುರುಪ್ರಸಾದ್ ವೈದ್ಯ ನಿರೂಪಿಸಿ ವಂದಿಸಿದರು. ಶಾಲಾ–ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
5 ಕಿ.ಮೀ ಓಟ
ಯಾದಗಿರಿ: ಮೇಜರ್ ಧ್ಯಾನ್ ಚಂದ್ ಹುಟ್ಟುಹಬ್ಬದ ಪ್ರಯುಕ್ತ 2024-25ನೇ ಸಾಲಿನ 'ರಾಷ್ಟ್ರೀಯ ಕ್ರೀಡಾ ದಿನಾಚರಣೆ' 5 ಕಿ.ಮೀ ಓಟ ನಗರದಲ್ಲಿ ಗುರುವಾರ ನಡೆಯಿತು. ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಾಲಾ ಶಿಕ್ಷಣಾ ಮತ್ತು ಸಾಕ್ಷಾರತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಓಟ ಹಮ್ಮಿಕೊಳ್ಳಲಾಯಿತು. ಹೊಸ ಬಸ್ ನಿಲ್ದಾಣ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಮಾರ್ಗವಾಗಿ ಕನಕದಾಸ ವೃತ್ತ ಕಾಡ್ಲೂರ್ ಪೆಟ್ರೋಲ್ ಬಂಕ್ ಪದವಿ ಮಹಾವಿದ್ಯಾಲಯ ಹಾಗೂ ಜಿಲ್ಲಾ ಕ್ರೀಡಾಂಗಣದವರೆಗೆ 5 ಕಿ.ಮೀ ಓಟ ಆಯೋಜಿಸಲಾಗಿತ್ತು. ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಸಂಜೀವಕುಮಾರ ಸಿಂಗ್ ರಾಯಚೂರಕರ್ ಅವರು ಓಟಕ್ಕೆ ಹೊಸ ಬಸ್ ನಿಲ್ದಾಣ ಮುಂದೆ ಚಾಲನೆ ನೀಡಿದರು. ಪುರುಷರು ಹಾಗೂ ಮಹಿಳೆಯರ ಓಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸತ್ಕರಿಸಿ ನಗದು ಬಹುಮಾನ ವಿತರಿಸಲಾಯಿತು. ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಹನುಮಂತ ರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರಣೇಶ ಡಿವೈಎಸ್ಪಿ ಅರುಣಕುಮಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ರಾಜು ಬಾವಿಹಳ್ಳಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.