7
ಮಾನವ ಸರಪಳಿ ನಿರ್ಮಿಸಿ ಉಗ್ರ ಪ್ರತಿಭಟನೆ ನಡೆಸಿದ ವಿದ್ಯಾರ್ಥಿ ಸಂಘಟನೆಗಳು

ಉಚಿತ ಬಸ್‌ಪಾಸ್‌ ಯೋಜನೆ ಜಾರಿಗೆ ಆಗ್ರಹ

Published:
Updated:
ಉಚಿತ ಬಸ್ ಪಾಸ್ ಯೋಜನೆಯನ್ನು ಸರ್ಕಾರ ಕೈಬಿಟ್ಟಿರುವ ಕ್ರಮ ಖಂಡಿಸಿ ಯಾದಗಿರಿಯಲ್ಲಿ ಸೋಮವಾರ ವಿದ್ಯಾರ್ಥಿ ಸಂಘಟನೆಗಳು ಸುಭಾಷ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು

ಯಾದಗಿರಿ: ಉಚಿತ ಬಸ್‌ಪಾಸ್‌ ನೀಡದ ಸರ್ಕಾರದ ಕ್ರಮ ಖಂಡಿಸಿ ಸೋಮವಾರ ವಿದ್ಯಾರ್ಥಿ ಸಂಘಟನೆಗಳು ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ನಗರದ ಶುಭಾಷ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.  ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಐಡಿಎಸ್‌ಒ ಕಾರ್ಯದರ್ಶಿ ಎಚ್.ಪಿ. ಸೈದಪ್ಪ ಮಾತನಾಡಿ,‘ರಾಜ್ಯದ ಸಮಸ್ತ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಈ ಕುರಿತು ಬಜೆಟ್‌ ಘೋಷಣೆಯಲ್ಲಿ ಯೋಜನೆ ಜಾರಿಯಾಗಲಿದೆ ಎಂಬುದಾಗಿ ನಿರೀಕ್ಷಿಸಲಾಗಿತ್ತು. ಆದರೆ, ಸರ್ಕಾರ ಈ ಮಹತ್ವದ ಯೋಜನೆಯನ್ನು ಕೈಬಿಡುವ ಮೂಲಕ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬಜೆಟ್‌ ಮಂಡನೆಗೂ ಮುಂಚೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಉಚಿತ ಬಸ್‌ಪಾಸ್‌ ವಿತರಣೆಗೆ ಸರ್ಕಾರ ಕ್ರಮಕೈಗೊಳ್ಳಲಿದೆ. ಈ ಕುರಿತು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಮುಂದೆ ಕೂಡ ಈ ಯೋಜನೆ ಕುರಿತು ಪ್ರಸ್ತಾಪಿಸಿರುವುದಾಗಿ ತಿಳಿಸಿದ್ದರು. ಹಾಗಾಗಿ, ಲಕ್ಷಾಂತರ ವಿದ್ಯಾರ್ಥಿಗಳು ಬಹು ನಿರೀಕ್ಷೆಯಲ್ಲಿ ಉಚಿತ ಬಸ್‌ ಪಾಸ್ ಯೋಜನೆ ಜಾರಿಗೊಳ್ಳುವ ಕನಸು ಕಂಡಿದ್ದರು. ಸರ್ಕಾರದ ವಚನಭ್ರಷ್ಟತೆಯಿಂದ ವಿದ್ಯಾರ್ಥಿಗಳು ನಿರಾಸೆಗೊಂಡಿದ್ದಾರೆ. ಆದರೆ, ವಿದ್ಯಾರ್ಥಿಗಳ ಹೋರಾಟ ನಿರಂತರವಾಗಿರುತ್ತದೆ. ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸುವವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದರು.

‘ಉಚಿತ ಬಸ್‌ಪಾಸ್‌ ಯೋಜನೆ ಜಾರಿಗೆ ₹600 ಕೋಟಿ ಬೇಕು ಎಂಬುದಾಗಿ ಸರ್ಕಾರ ತಿಳಿಸಿದೆ. ಆದರೆ, ಕೆಎಸ್‌ಆರ್‌ಟಿಸಿಗೆ ನೀಡುವ ₹860 ಕೋಟಿಯಲ್ಲೇ ಈ ಯೋಜನೆ ಜಾರಿಗಳಿಸಲು ಸಾಧ್ಯವಿದೆ. ಪರಿಶಿಷ್ಟ ಜಾತಿ, ವರ್ಗದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯೇ ಉಚಿತ ಬಸ್‌ ಪಾಸ್ ವೆಚ್ಚ ಭರಿಸುತ್ತದೆ. ಹಾಗಾಗಿ, ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಯಾವುದೇ ಹೊರೆ ಆಗುವುದಿಲ್ಲ. ಆದರೆ, ಕೆಲವು ಹಿರಿಯ ಅಧಿಕಾರಿಗಳು ಸರ್ಕಾರದ ಹಾದಿ ತಪ್ಪಿಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ನಿಟ್ಟಿನಲ್ಲಿ ಮರುಚಿಂತನೆ ನಡೆಸಿ ಯೋಜನೆ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ಎಐಡಿಎಸ್‌ಒ ಅಧ್ಯ್ಯಕ್ಷ ಬಿ.ಎನ್.ರಾಮಲಿಂಗಪ್ಪ,‘ಮೊದಲು ಕೆಎಸ್ಆರ್‌ಟಿಸಿ ಸಂಸ್ಥೆಯಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟುವಲ್ಲಿ ಸರ್ಕಾರ ಮುಂದಾಗಬೇಕು. ಸೋರಿಕೆ ತಡೆಗಟ್ಟಿದರೆ ಕೆಎಸ್ಆರ್‌ಟಿಸಿ ಸಂಸ್ಥೆ ಲಾಭದಾಯಕ ಆಗಲಿದೆ. ಪ್ರತಿ ಆರ್ಥಿಕ ವರ್ಷದಲ್ಲಿ ಈ ಸಂಸ್ಥೆ ಸರ್ಕಾರಕ್ಕೆ ನಷ್ಟ ತೋರಿಸುತ್ತಲೇ ಬಂದಿರುವುದರಿಂದ ಇಂದು ಸರ್ಕಾರ ವಿದ್ಯಾರ್ಥಿಗಳ ಪರವಾಗಿ ನಿಲ್ಲಲು ಆಗಿಲ್ಲ. ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸಾರಿಗೆ ಸಂಸ್ಥೆಯಲ್ಲಿನ ಸೋರಿಕೆಯನ್ನು ತಡೆಗಟ್ಟಲು ತನಿಖಾ ತಂಡ ನೇಮಿಸಬೇಕು’ ಎಂದು ಆಗ್ರಹಿಸಿದರು.

ಸುಭಾಷ್‌ಚಂದ್ರ ಬಾವನೊರ್, ಬಿ.ಸಿಂಧು, ಮಲ್ಲಮ್ಮ, ಕಲಾ, ಮಹೇಶ್ವರಿ, ಯಶೋದಾ, ನಿಂಗಮ್ಮ, ಚೈತ್ರಾ, ಕಾವೇರಿ, ನಾಗರಾಜ, ಮಲ್ಲಿಕಾರ್ಜುನ, ಶಿವಶರಣ, ಕರಣ್ ಕುಮಾರ, ಮಾಳಪ್ಪ, ಶಿವರಾಜ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !