ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ ಚಾಲಕ; ಯಾದಗಿರಿಯ ಈತ ಈಗ ಯಶಸ್ವಿ ಕೃಷಿಕ

ದಂಡೋತಿ ಗ್ರಾಮದ ರೈತ ರಶೀದ್ ಪಠಾಣ ಯಶೋಗಾಥೆ
Last Updated 18 ಜನವರಿ 2020, 10:15 IST
ಅಕ್ಷರ ಗಾತ್ರ

ಚಿತ್ತಾಪುರ: ಬದುಕು ಯಾರನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆಯೊ ಯಾರೂ ಬಲ್ಲವರಿಲ್ಲ. ಹಿಂದೆ ತಿಂಗಳಿಗೆ ಕೇವಲ ₹45 ವೇತನಕ್ಕೆ ಹೋಟೆಲ್ ಕಾರ್ಮಿಕನಾಗಿ ದುಡಿಯುತ್ತಿದ್ದವರು ಇಂದು ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಕಬ್ಬು ಬೆಳೆಯುವ ಕೃಷಿಕರಾಗಿದ್ದಾರೆ.

ತಾಲ್ಲೂಕಿನ ದಂಡೋತಿ ಗ್ರಾಮದ ರಶೀದ್ ಅಲಿಷೇರ್ ಪಠಾಣ ಎಂಬುವವರ ಯಶೋಗಾಥೆ ಇದು. 1975ರಲ್ಲಿ ಚಿಕ್ಕಂದಿನಲ್ಲೆ ಊರು ಬಿಟ್ಟ ಇವರು ಕೆಲಸ ಅರಸಿ ಮುಂಬೈ ನಗರ ಸೇರಿದರು. ಏನೂ ಗೊತ್ತಿಲ್ಲದ ನಗರದಲ್ಲಿ ಹೋಟೆಲ್ ಕಾರ್ಮಿಕನಾಗಿ ದುಡಿಮೆ ಆರಂಭಿಸಿದರು. ನಂತರ ಬಿಲ್ಡರ್ ಹತ್ತಿರ ಕಾರು ಚಾಲಕರಾಗಿ ವೃತ್ತಿ ಶುರು ಮಾಡಿದರು.

13 ವರ್ಷಗಳ ಕಾಲ ಕಾರು ಚಾಲಕರಾಗಿ ದುಡಿದ ಅವರು ತಂದೆಯ ನಿಧನದ ನಂತರ ಮರಳಿ ಗ್ರಾಮಕ್ಕೆ ಬಂದು ನೆಲೆಸಿದರು. ತಂದೆಯ ಜಮೀನಿನಲ್ಲಿ ಕೃಷಿ ಮಾಡುವ ಆಸಕ್ತಿಯೊಂದಿಗೆ ಕಳೆದ 20 ವರ್ಷಗಳ ಹಿಂದೆಯೆ ತೋಟಗಾರಿಕೆ ಬೆಳೆ ಬೆಳೆಯುವುದನ್ನು ಶುರು ಮಾಡಿದರು.

8 ಎಕರೆ ಭೂಮಿಯಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆದು ಲಾಭ, ನಷ್ಟ ಎರಡನ್ನೂ ಸಮಾನವಾಗಿ ಎದುರಿಸಿದ್ದಾರೆ. ಪಪ್ಪಾಯ, ಬಾಳೆ, ಅರಿಶಿಣ, ಭತ್ತ, ಕಬ್ಬು ಬೆಳೆದು ತೋಟಗಾರಿಕೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ತೋಟದಲ್ಲಿ ಕಬ್ಬು ಬೆಳೆಯಿದೆ.

ಯಾದಗಿರಿ ಜಿಲ್ಲೆಯ ವಡಗೇರಾ ಸಕ್ಕರೆ ಕಾರ್ಖಾನೆಗೆ ಒಂದು ಟನ್‌ಗೆ ₹1,950ಕ್ಕೆ ಕಬ್ಬು ಮಾರಾಟ ಮಾಡಿದ ಇವರು ಅಂದಾಜು ₹5 ಲಕ್ಷದವರೆಗೆ ಆದಾಯ ಮಾಡಿಕೊಂಡಿದ್ದಾರೆ. ವರ್ಷಕ್ಕೆ ಕನಿಷ್ಟ ₹2.50 ಲಕ್ಷ ಖರ್ಚು ಬರುತ್ತದೆ. ಪ್ರಸ್ತುತ ವರ್ಷ ಟನ್ನಿಗೆ ₹2,300 ಬೆಲೆ ನೀಡುವುದಾಗಿ ಸಕ್ಕರೆ ಕಾರ್ಖಾನೆ ಭರವಸೆ ನೀಡಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ರಶೀದ್.

ಜಮೀನಿಗೆ ಹೊಂದಿಕೊಂಡು ಹರಿಯುವ ಹಳ್ಳದಿಂದ (ಮರಗೋಳ ನಾಲಾ) ಪಂಪ್ ಸೆಟ್ ಮೂಲಕ ನೀರು ಪಡೆಯುತ್ತಾರೆ. ತೋಟದಲ್ಲಿ ಮಾವಿನ ಗಿಡ, ತೆಂಗಿನ ಮರ, ಸಾಗವಾನಿ, ಜಾಫಲ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಒಂದುವರೆ ಎಕರೆಯಲ್ಲಿ ತೊಗರಿ ಬೆಳೆದಿದ್ದಾರೆ.

ರಶೀದ್ ಅವರಿಗೆ ಇಬ್ಬರು ಗಂಡು ಮಕ್ಕಳು, ಓರ್ವ ಪುತ್ರಿ ಇದ್ದು ತೋಟದಲ್ಲಿಯೆ ಮನೆ ಕಟ್ಟಿಸಿಕೊಂಡು ವಾಸ ಮಾಡುತ್ತಿದ್ದಾರೆ. ಇಬ್ಬರು ಗಂಡು ಮಕ್ಕಳಿಗೆ ಎಂಬಿಎ ಶಿಕ್ಷಣ ಕೊಡಿಸಿದ್ದಾರೆ. ಮಗಳಿಗೆ ಎಂ.ಎಸ್ಸಿ, ಬಿ.ಇಡಿ ಓದಿಸಿದ್ದಾರೆ.

ಮೂವರು ಮಕ್ಕಳಿಗೆ ಮದುವೆ ಮಾಡಿ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಕೃಷಿಯಲ್ಲಿ ಲಾಭ ಮತ್ತು ನಷ್ಟ ಎರಡು ಅನುಭವಿಸಿದ್ದೇನೆ. ಉತ್ತಮ ಇಳುವರಿ ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೆ ಮಾತ್ರ ರೈತರಿಗೆ ಸ್ವಲ್ಪ ಆದಾಯ. ಇಲ್ಲವಾದರೆ ಕೆರೆಯ ನೀರು ಕೆರೆಗೆ ಚೆಲ್ಲಿದಂತೆ ಎನ್ನುತ್ತಾರೆ ರಶೀದ್ ಪಠಾಣ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT