ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೋರಾಪುರ’ ಹೆಸರು ಬದಲಿಸಲು ಪ್ರಸ್ತಾವ

ಸುರಪುರ ನಗರಸಭೆ ಸಾಮಾನ್ಯ ಸಭೆ: ₹4.71 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಸಮ್ಮತಿ
Last Updated 14 ಜೂನ್ 2022, 4:15 IST
ಅಕ್ಷರ ಗಾತ್ರ

ಸುರಪುರ: ಅಭಿವೃದ್ಧಿ ಕಾಮಗಾರಿಗಳಿಗಾಗಿ ₹4.71 ಕೋಟಿ ಕ್ರಿಯಾ ಯೋಜನೆಗೆ ಸಮ್ಮತಿ, ಶೋರಾಪುರ ಹೆಸರನ್ನು ಸುರಪುರ ಎಂದು ಬದಲಿಸಲು ಸರ್ಕಾರಕ್ಕೆ ಪ್ರಸ್ತಾವ, ವಾರ್ಡ್‍ಗಳಿಗೆ ಕಾಮಗಾರಿ ನೀಡಲು ತಾರತಮ್ಯದ ಆರೋಪ...

ಇವು ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾದ ಪ್ರಮುಖ ವಿಷಯಗಳು.

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ ‘ಎಲ್ಲ 31 ವಾರ್ಡ್‍ಗಳಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಲಾಗುತ್ತಿದ್ದು, ಎಲ್ಲ ವಾರ್ಡ್‍ಗಳಿಗೆ ಸಮಾನ ಆದ್ಯತೆ ನೀಡಲಾಗಿದೆ’ ಎಂದು ತಿಳಿಸಿದರು.

‘ನೀರು, ಸ್ವಚ್ಛತೆ, ರಸ್ತೆ, ಬೀದಿ ದೀಪ ಇನ್ನಿತರ ಸೌಲಭ್ಯಗಳನ್ನು ಪ್ರತಿಯೊಂದು ವಾರ್ಡ್‍ಗಳಿಗೆ ಒದಗಿಸಲಾಗುತ್ತಿದೆ. ಸದಸ್ಯರು ತಮ್ಮ ವಾರ್ಡ್‍ಗಳಲ್ಲಿ ಏನೇ ಸಮಸ್ಯೆಗಳಿದ್ದರೆ ತಿಳಿಸಿದರೆ ತಕ್ಷಣ ಸ್ಪಂದಿಸುವುದಾಗಿ’ ಭರವಸೆ ನೀಡಿದರು.

ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡನಾಯಕ ಮಾತನಾಡಿ, ‘ವಿರೋಧ ಪಕ್ಷದ ಸದಸ್ಯರ ವಾರ್ಡ್‍ಗಳ ಕಾಮಗಾರಿಗೆ ಅನುದಾನ ನೀಡಲು ತಾರತಮ್ಯ ಮಾಡಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ಅನುದಾನ ಹಂಚಿಕೆ ಮಾಡಬೇಕು. ಯುಜಿಡಿ ಕಾಮಗಾರಿಯಿಂದ ಅಲ್ಲಲ್ಲಿ ರಸ್ತೆಗಳು ಹದಗೆಡುತ್ತಿದ್ದು ಸರಿಪಡಿಸುವಂತೆ ಸಂಬಂಧಿಸಿದವರಿಗೆ ಸೂಚಿಸಬೇಕು’ ಎಂದರು.

‘ಇಲ್ಲಿಯವರೆಗೂ ನನ್ನ ವಾರ್ಡ್‍ನಲ್ಲಿ ಕೆಲಸಗಳೆ ಆಗಿಲ್ಲ. ಮೂಲಸೌಕರ್ಯ ಕೂಡ ಕಲ್ಪಿಸಲಾಗುತ್ತಿಲ್ಲ’ ಎಂದು ಕುಂಬಾರಪೇಟೆ ವಾರ್ಡ 1 ರ ಸದಸ್ಯ ಅಯ್ಯಣ್ಣ ಪೂಜಾರಿ ಭಾವುಕರಾಗಿ ಬೇಸರ ವ್ಯಕ್ತಪಡಿಸಿದರು.

ಸದಸ್ಯರಾದ ಮಾನಪ್ಪ ಚಳ್ಳಿಗಿಡ, ಜುಮ್ಮಣ್ಣ ಏಳುರೊಟ್ಟಿ, ಕಮರುದ್ದೀನ್, ನಾಸೀರ್ ಕುಂಡಾಲೆ, ಶಿವಕುಮಾರ ಕಟ್ಟಿಮನಿ, ಸುವರ್ಣಾ ಎಲಿಗಾರ ಮಾತನಾಡಿದರು.

ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಅಭಿವೃದ್ಧಿ ಕಾಮಗಾರಿ ಕುರಿತಂತೆ ಮಾಹಿತಿ ನೀಡಿದರು.

ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ, ವ್ಯವಸ್ಥಾಪಕ ಯಲ್ಲಪ್ಪನಾಯಕ ಡೊಣ್ಣಿಗೇರಿ, ಎಇಇ ಶಾಂತಪ್ಪ, ಲೆಕ್ಕಿಗ ರವಿದಾಸ್ ರಾಠೋಡ, ಸದಸ್ಯರಾದ ನರಸಿಂಹಕಾಂತ ಪಂಚಮಗಿರಿ, ಮಲ್ಲೇಶಿ ಪೂಜಾರಿ, ಮಹಮ್ಮದ್ ಶರೀಫ್, ಮಹಮ್ಮದ್ ಗೌಸ್ ಇದ್ದರು.

‘ಶೋರಾಪುರ’ ಹೆಸರು ಬದಲಾಯಿಸಿ: ಬ್ರಿಟಿಷರು ಮತ್ತು ಹೈದರಾಬಾದ್ ನಿಜಾಮರು ಸರ್ಕಾರಿ ದಾಖಲೆಗಳಲ್ಲಿ ಸುರಪುರ ಎಂದಿದ್ದ ಹೆಸರನ್ನು ಶೋರಾಪುರ ಎಂದು ನಮೂದಿಸಿದರು. ಸರ್ಕಾರಿ ದಾಖಲೆಗಳಲ್ಲಿ ಈಗಲೂ ಶೋರಾಪುರ ಎಂದೇ ಇದೆ. ‘ಸುರಪುರ’ ಎಂದು ಮರು ನಾಮಕರಣ ಮಾಡಬೇಕು ಎಂದು ಸದಸ್ಯ ವೇಣುಮಾಧವನಾಯಕ ಪ್ರಸ್ತಾಪಿಸಿದರು. ಎಲ್ಲ ಸದಸ್ಯರು ಒಪ್ಪಿ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT