ಸುರಪುರ: ಆಶ್ಲೇಷಾ ಮಳೆ ಕಳೆದ ಮೂರ್ನಾಲ್ಕು ದಿನದಿಂದ ತಾಲ್ಲೂಕಿನಲ್ಲಿ ಉತ್ತಮವಾಗಿ ಸುರಿಯುತ್ತಿದೆ. ಮಳೆಯಿಲ್ಲದೆ ಕಂಗಾಲಾಗಿದ್ದ ಅನ್ನದಾತನ ಮೊಗದಲ್ಲಿ ಈಗ ಮಂದಹಾಸ ಮೂಡಿದೆ.
ಜೂನ್ ಮೊದಲ ವಾರದಲ್ಲಿ ಉತ್ತಮವಾಗಿ ಸುರಿದ ಮಳೆ ನಂತರ ಬರಲೇ ಇಲ್ಲ. ಬಿತ್ತನೆ ಮಾಡಿದ ರೈತರು ಮುಗಿಲು ನೋಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಹುತೇಕ ಬೆಳೆಗಳು ಒಣಗುವ ಹಂತದಲ್ಲಿದ್ದವು. ಸಕಾಲಕ್ಕೆ ಮಳೆ ಬಾರದ್ದಕ್ಕೆ ಅಲ್ಲಲ್ಲಿ ಹತ್ತಿ ಬೆಳೆ ಅವಧಿಗಿಂತ ಮುಂಚೆ ಹೂ ಬಿಟ್ಟು ನಷ್ಟದ ಮುನ್ಸೂಚನೆ ನೀಡುತ್ತಿದ್ದವು.
ಜೂನ್ ಎರಡನೇ ವಾರದಿಂದ ಜುಲೈ ತಿಂಗಳು ಪೂರ್ತಿ ಮಳೆರಾಯ ಮುನಿಸಿಕೊಂಡಿದ್ದ. ಶೇ 61 ಮಳೆ ಕೊರತೆ ಉಂಟಾಗಿತ್ತು. ಈಗ ಉತ್ತಮ ಮಳೆ ಸುರಿಯುತ್ತಿದ್ದು ತಾಲ್ಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ (ವಾಡಿಕೆ ಮಳೆ 28 ಮಿ.ಮೀ) ಗಿಂತ ಹೆಚ್ಚು ಒಟ್ಟು 42 ಮಿ.ಮೀ ಮಳೆಯಾಗಿದೆ. ಹತ್ತಿ ತೊಗರಿ, ಭತ್ತ, ಶೇಂಗಾ, ಹೆಸರು, ಸಜ್ಜೆ ಬೆಳೆಗಳು ನಳನಳಿಸುತ್ತಿವೆ.
ತಾಲ್ಲೂಕಿನಲ್ಲಿ ಇದುವರೆಗೆ ಹತ್ತಿ 35,138 ಹೆಕ್ಟೇರ್, ಭತ್ತ 23,502 ಹೆಕ್ಟೇರ್, ತೊಗರಿ 18,009 ಹೆಕ್ಟೇರ್ ಬಿತ್ತನೆಯಾಗಿದೆ. ಅಲ್ಲಲ್ಲಿ ಕಡಿಮೆ ಪ್ರಮಾಣದಲ್ಲಿ ಹೆಸರು, ಶೇಂಗಾ, ಸಜ್ಜೆ ಬಿತ್ತಲಾಗಿದೆ.
ಆಶ್ಲೇಷಾ ಮಳೆ ತಾಲ್ಲೂಕಿನ ಸುರಪುರ, ಕೆಂಭಾವಿ ಮತ್ತು ಕಕ್ಕೇರಾ ಮೂರು ಹೋಬಳಿಗಳಲ್ಲಿ ಬರುತ್ತಿದೆ. ಕೃಷಿ ಚಟುವಟಿಕೆಗಳು ಮತ್ತೆ ಬಿರುಸು ಪಡೆದುಕೊಂಡಿವೆ.
ಕಾಲುವೆಗೂ ನೀರು ಹರಿಯುತ್ತಿರುವುದರಿಂದ ರೈತ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾನೆ. ಕಳೆದ ವರ್ಷ ಎರಡನೇ ಅವಧಿಗೆ ಕಾಲುವೆ ನೀರು ಹರಿಸಿಲ್ಲವಾದ್ದರಿಂದ ಮುಂಗಾರು ಹಂಗಾಮಿನ ಕೃಷಿ ನಡೆಯಲಿಲ್ಲ.
ಭತ್ತದ 70 ಕೆಜಿಯ ಒಂದು ಚೀಲಕ್ಕೆ ₹2500 ವರೆಗೂ ದೊರಕಿತ್ತು. ಇದೇ ಬೆಲೆ ಈ ಬಾರಿಯೂ ದೊರೆತರೆ ರೈತನ ಶ್ರಮ ಸಾರ್ಥಕತೆ ಪಡೆದುಕೊಳ್ಳುತ್ತದೆ. ಹತ್ತಿಯ ದರ ₹7500 ಇದ್ದು ಮಾರುಕಟ್ಟೆ ವ್ಯವಸ್ಥೆ ಚೆನ್ನಾಗಿದೆ. ಹೀಗಾಗಿ ರೈತರು ಹತ್ತಿ ಮತ್ತು ಭತ್ತ ಕೃಷಿಗೆ ಒಲವು ತೋರುತ್ತಿದ್ದಾರೆ.