7

ಬಿಡಾಡಿ ದನಗಳ ತಾಣವಾದ ಸುರಪುರ ಬಸ್ ನಿಲ್ದಾಣ

Published:
Updated:
ಸುರಪುರ ಬಸ್ ನಿಲ್ದಾಣದಲ್ಲಿ ಬಿಡಾಡಿ ದನಗಳು ಬೀಡು ಬಿಟ್ಟಿರುವುದು

ಸುರಪುರ: ಎಲ್ಲೆಂದರಲ್ಲಿ ಕಾಣುವ ಬಿಡಾಡಿ ದನಗಳು, ಅಲ್ಲಲ್ಲಿ ಸಗಣಿಯ ಕುಂಪೆ, ಮೂತ್ರದ ಕಡು ವಾಸನೆ, ಪ್ರಯಾಣಿಕರನ್ನು ಬೆನ್ನಟ್ಟುವ ಜಾನುವಾರುಗಳು… ಇವು ನಗರದ ಬಸ್ ನಿಲ್ದಾಣದಲ್ಲಿ ನಿತ್ಯ ಕಂಡುಬರುವ ದೃಶ್ಯ.

ಬಿಡಾಡಿ ದನಗಳ ಹಾವಳಿ ಬೆಳಿಗ್ಗೆಯಿಂದಲೇ ಇರುತ್ತದೆ. ಅವು ರಾತ್ರಿ ಹೊತ್ತು ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯುತ್ತವೆ. ಎಷ್ಟು ಓಡಿಸಿದರೂ ಮತ್ತೆ ಬಂದು ಇದೇ ಸ್ಥಳ ಸೇರಿಕೊಳ್ಳುತ್ತವೆ. ನಿಲ್ದಾಣದ ಸಿಬ್ಬಂದಿ ಬೇಸತ್ತು ದನಗಳನ್ನು ಓಡಿಸುವುದೇ ಬಿಟ್ಟಿದ್ದಾರೆ. ಬಸ್‍ಗಳಿಗೆ ದನಗಳು ಅಡ್ಡ ಬರುವುದರಿಂದ ಚಾಲಕರಿಗೆ ತೊಂದರೆಯಾಗಿದೆ. ಕೆಲ ಬಿಡಾಡಿ ದನಗಳಂತೂ ನಿತ್ಯ ಗುದ್ದಾಡಿ ಪ್ರಯಾಣಿಕರನ್ನು ಮತ್ತು ದ್ವಿಚಕ್ರ ವಾಹನಗಳನ್ನು ಬೀಳಿಸುತ್ತಿವೆ.

ನಗರದ ಇತರೆಡೆಯೂ ಬಿಡಾಡಿ ದನಗಳ ಹಾವಳಿ ಮೀತಿ ಮೀರಿದೆ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಮಧ್ಯೆ ನಿಂತು ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಸಮಸ್ಯೆ ಮಾಡುತ್ತಿವೆ. ಜನರು ತಮ್ಮ ರಾಸುಗಳನ್ನು ಮೇಯಿಸುವ ಸಲುವಾಗಿ ಹೊರಗೆ ಬಿಡುತ್ತಾರೆ. ಆದರೆ, ರಾಸುಗಳು ನಗರದಲ್ಲಿ ಬಿದ್ದಿರುವ ಕಸ, ತರಕಾರಿ, ಹಣ್ಣುಗಳನ್ನು ಮೇಯುತ್ತಾ ನಡು ರಸ್ತೆಯಲ್ಲಿಯೇ ಗುಂಪಾಗಿ ಮಲಗಿ ತೊಂದರೆ ಮಾಡುತ್ತಿವೆ.

‘ ನಗರಸಭೆ ಅಧಿಕಾರಿಗಳು ಜಾನುವಾರುಗಳ ಮಾಲೀಕರಿಗೆ ನೋಟಿಸ್ ಕೊಟ್ಟು ತಮ್ಮ ಜಾನುವಾರುಗಳನ್ನು ಮನೆಯಲ್ಲಿಯೇ ಕಟ್ಟಿಕೊಳ್ಳುವಂತೆ ತಾಕೀತು ಮಾಡಬೇಕು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಮಾಲೀಕರು ಸೂಚನೆ ಪಾಲಿಸದಿದ್ದರೆ ಬೀಡಾಡಿ ದನಗಳನ್ನು ಹಿಡಿದು ಕೊಂಡವಾಡಿಗೆ ಕಳುಹಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದರು.

‘ಬಿಡಾಡಿ ದನಗಳ ಸಮಸ್ಯೆ ಬಗ್ಗೆ ನಗರಸಭೆಗೆ ಹಲವು ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಿಲ್ದಾಣದ ಪರಿಸರ ಕೆಡುತ್ತಿದೆ. ನಗರಸಭೆ ಬಿಡಾಡಿ ದನಗಳ ಬಗ್ಗೆ ಕ್ರಮ ಜರುಗಿಸಬೇಕು’ ಎನ್ನುತ್ತಾರೆ ಸಾರಿಗೆ ಅಧಿಕಾರಿಗಳು. ‘ನಿಲ್ದಾಣದಲ್ಲಿ ಕಾವಲುಗಾರರನ್ನು ನೇಮಿಸಬೇಕು’ ಎನ್ನುವುದು ಪ್ರಯಾಣಿಕರ ಆಗ್ರಹ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !