ಗುರುವಾರ , ಮೇ 19, 2022
24 °C
ಉಪಾಧ್ಯಕ್ಷರಾಗಿ ಚಂದ್ರಕಲಾ ಮಡ್ಡಿ ಅವಿರೋಧ ಆಯ್ಕೆ, 13 ತಿಂಗಳು ಉಳಿಕೆ ಅವಧಿ

ಯಾದಗಿರಿ ನಗರಸಭೆಗೆ ಸುರೇಶ್‌ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಯಾದಗಿರಿ ನಗರಸಭೆ ಅಧ್ಯಕ್ಷರಾಗಿ ಸುರೇಶ್‌ ಅಂಬಿಗೇರ್‌, ಉಪಾಧ್ಯಕ್ಷರಾಗಿ ಚಂದ್ರಕಲಾ ಮಡ್ಡಿ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದಿನ ಅಧ್ಯಕ್ಷ ವಿಲಾಸ್ ಪಾಟೀಲ ಹಾಗೂ ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು.

ಸೋಮವಾರ ಬೆಳಿಗ್ಗೆ 10ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಸುರೇಶ್‌ ಅಂಬಿಗೇರ್‌, ಲಲಿತಾ ಅನಪುರ ಹಾಗೂ ಹಣಮಂತ ಇಟಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಕಲಾ ಮಡ್ಡಿ ಏಕಮಾತ್ರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು.

ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮಹಿಳೆಗೆ ಮೀಸಲಾಗಿತ್ತು.

ನಾಮಪತ್ರ ಸಲ್ಲಿಕೆಯಾದ ನಂತರ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಸದಸ್ಯರೊಂದಿಗೆ ಮಾತುಕತೆ ನಡೆಸಿ ಲಲಿತಾ ಅನಪುರ ಹಾಗೂ ಹಣಮಂತ ಇಟಗಿ ನಾಮಪತ್ರ ವಾಪಸ್ ತೆಗೆಸಿದರು. ಇದರಿಂದ ಸುರೇಶ್‌ ಅಂಬಿಗೇರ್‌ ಅಧ್ಯಕ್ಷರಾಗಿ ಹಾಗೂ ಚಂದ್ರಕಲಾ ಮಡ್ಡಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಉಪವಿಭಾಗಾಧಿಕಾರಿಯೂ ಆದ ಚುನಾವಣಾಧಿಕಾರಿ ಶಾ ಆಲಂ ಹುಸೇನ್ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಸುರೇಶ್‌ ಅಂಬಿಗೇರ್‌ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರ ಕಾಲಿಗೆ ಎರಗಿ ಆಶೀರ್ವಾದ ಪಡೆದರು.

ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಸಿಹಿ ಹಂಚಿ ಖುಷಿಪಟ್ಟರು. ಪಟಾಕಿ ಸಿಡಿಸಿದರು. ಮೊದಲ ಬಾರಿಗೆ ಎರಡೂ ಹುದ್ದೆಗಳು ಕಬ್ಬಲಿಗ ಸಮುದಾಯದ ಪಾಲಾಗಿವೆ.

ನೂತನ ಅಧ್ಯಕ್ಷ ಅಂಬಿಗೇರ್‌ ವಾರ್ಡ್ ನಂ.7, ಉಪಾಧ್ಯಕ್ಷೆ ಮಡ್ಡಿ ವಾರ್ಡ್ ನಂ.29 ವಾರ್ಡ್‌ ಪ್ರತಿನಿಧಿಸುತ್ತಿದ್ದಾರೆ.

ನಗರಸಭೆಯಲ್ಲಿ 31 ಸದಸ್ಯ ಬಲವಿದ್ದು, 16 ಬಿಜೆಪಿ ಸದಸ್ಯರಿದ್ದರೆ, 12 ಕಾಂಗ್ರೆಸ್, 2 ಜೆಡಿ(ಎಸ್) ಹಾಗೂ ಒಬ್ಬರು ಸ್ವತಂತ್ರ ಸದಸ್ಯರಿದ್ದಾರೆ. ಕಾಂಗ್ರೆಸ್‌ 12 ಜನ ಸದಸ್ಯರನ್ನು ಹೊಂದಿದ್ದರೂ ಅಭ್ಯರ್ಥಿಯನ್ನು ನಿಲ್ಲಿಸುವ ಒಂದು ಪ್ರಯತ್ನವನ್ನು ಮಾಡಲಿಲ್ಲ.

ಮೊದಲ ಅವಧಿಯಲ್ಲಿ 17 ತಿಂಗಳು ಪೂರ್ತಿಯಾಗಿದ್ದು, ಈಗ 13 ತಿಂಗಳು ಬಾಕಿ ಇದೆ.

ಮತ ಬ್ಯಾಂಕ್‌ ಗಟ್ಟಿ:

ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ ನಗರಸಭೆಗೂ ಚುನಾವಣೆ ಎದುರಾಗುವ ಸಾಧ್ಯತೆ ಇದೆ. ನಗರಸಭೆಯಲ್ಲಿ ಅಧಿಪತ್ಯ ಸ್ಥಾಪಿಸುವ ಮೂಲಕ ಬಿಜೆಪಿ ವಿಧಾನಸಭೆ ಚುನಾವಣೆ ವೇಳೆಗೆ ಮತ್ತಷ್ಟು ಪ್ರಬಲವಾಗಿ ಹೊರಹೊಮ್ಮುವ ಮೂಲಕ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಶಾಸಕರು ಕಬ್ಬಲಿಗ ಸಮುದಾಯದ ಮತ ಬ್ಯಾಂಕ್‌ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಭರ್ಜರಿ ಮೆರವಣಿಗೆ: ನೂತನ ಅಧ್ಯಕ್ಷ-ಉಪಾಧ್ಯಕ್ಷರ ಮೆರವಣಿಗೆ ನಡೆಯಿತು. ತೆರದ ವಾಹನದಲ್ಲಿ ನಗರಸಭೆ ಕಚೇರಿಯಿಂದ ಆರಂಭಗೊಂಡ ಮೆರವಣಿಗೆಯೂ ಗಾಂಧಿ ವೃತ್ತ, ಚಕ್ರಕಟ್ಟ, ಮೈಲಾಪುರ ಆಗಸಿ, ಗಂಜ್‌ ವೃತ್ತ ಸೇರಿದಂತೆ ವಿವಿಧ ಕಡೆ ಸಾಗಿತು. ದಾರಿಯುದ್ಧಕ್ಕೂ ಅಭಿಮಾನಿಗಳು ನ್ಯತ್ಯ ಮಾಡಿದರು. ಇದೇ ವೇಳೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಬುದ್ಧ, ಬಸವ, ಅಂಬೇಡ್ಕರ್‌ ಅವರು ಇರುವ ಭಾವಚಿತ್ರವನ್ನು ಕೊಡುಗೆಯಾಗಿ ನೀಡಲಾಯಿತು.

ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಮತ್ತು ಚುನಾವಣೆ ವೀಕ್ಷಕ ಅಮರನಾಥ ಪಾಟೀಲ, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದೇವೀಂದ್ರನಾಥ ನಾದ, ವೆಂಕಟರಡ್ಡಿ ಅಬ್ಬೆತುಮಕೂರು, ಗುರು ಕಾಮಾ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ್ ಪಾಟೀಲ, ಮಹೇಶರಡ್ಡಿಗೌಡ ಮುದ್ನಾಳ ಹಾಗೂ ಶರಣಗೌಡ ಬಾಡಿಯಾಳ ಇದ್ದರು.

***

ನಗರದ ಪ್ರತಿಯೊಂದು ವಾರ್ಡ್‌ಗಳಿಗೂ ಭೇಟಿ ನೀಡಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುತ್ತೇನೆ. ಅಧಿಕಾರಿಗಳು ನಮ್ಮ ಕುಟುಂಬ ಸದಸ್ಯರಿದ್ದಂತೆ. ಶಾಸಕರ ಮಾರ್ಗದರ್ಶನದಲ್ಲಿ ಸಮನ್ವಯ ಸಾಧಿಸಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ
ಸುರೇಶ್‌ ಅಂಬಿಗೇರ್‌, ನಗರಸಭೆ ನೂತನ ಅಧ್ಯಕ್ಷ

***

ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿದ್ದು, ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುವುದು. ನಗರದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನ ಮಾಡಲಾಗುವುದು
ಚಂದ್ರಕಲಾ ಮಡ್ಡಿ, ನೂತನ ಉಪಾಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.