ಬುಧವಾರ, ಜೂನ್ 29, 2022
26 °C

ಸುರಪುರ ಶಾಸಕ ರಾಜೂಗೌಡ ಹೆಸರು ದುರ್ಬಳಕೆ ಮಾಡಿಕೊಂಡಿದ್ದ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಜನರನ್ನು ವಂಚಿಸುತ್ತಿದ್ದ ಬೆಂಗಳೂರಿನ ರೇಖಾ.ಎಂ.ಎನ್ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೌಕರಿ ನೆಪದಲ್ಲಿ ರೇಖಾ ಅವರು ಜನರಿಂದ ಹಣ ಪಡೆದು ಸುರಪುರದ ಶಾಸಕ ರಾಜೂಗೌಡ ಅವರು ನನಗೆ ಪರಿಚಯವಿದ್ದಾರೆ ಎಂದು ಮಾತನಾಡಿದ ಆಡಿಯೋ ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಶಾಸಕ ರಾಜೂಗೌಡ ರೇಖಾ ವಿರುದ್ಧ ದೂರು ಸಲ್ಲಿಸಿದ್ದರು’ ಎಂದು ತಿಳಿಸಿದರು.

‘ಈ ಕುರಿತು ತನಿಖೆ ಮುಂದುವರಿಸಿ ನೌಕರಿ ಸಲುವಾಗಿ ಹಣ ನೀಡಿದವರ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಕೋನಾಳ ಗ್ರಾಮದ ಈರಪ್ಪ ಶರಭಣಗೌಡ ರಸ್ತಾಪುರ ಅವರು ತಮ್ಮ ಇಬ್ಬರು ಮಕ್ಕಳ ನೌಕರಿಗಾಗಿ ₹5 ಲಕ್ಷ ನೀಡಿರುವುದಾಗಿ ತಿಳಿಸಿದ್ದಾರೆ. ಸೂಗೂರಿನ ಮಲ್ಲನಗೌಡ ಶಂಕ್ರಪ್ಪ ಕಮತಗಿ ಇವರು ತಮ್ಮ ಪತ್ನಿಯ ನೌಕರಿ ಸಲುವಾಗಿ ₹3.65 ಲಕ್ಷ, ಸಗರ ಗ್ರಾಮದ ವಿಶ್ವನಾಥರೆಡ್ಡಿ ಸಂಗಾರೆಡ್ಡಿ ಬಿಳವಾರ ₹15 ಲಕ್ಷ ಹಣವನ್ನು ಸೂಗೂರು ಗ್ರಾಮದ ಈರಪ್ಪಗೌಡ ಮುಖಾಂತರ ರೇಖಾಗೆ ಕೊಟ್ಟಿರುವುದಾಗಿ ತಿಳಿಸಿದ್ದರು’ ಎಂದು ಮಾಹಿತಿ ನೀಡಿದರು.

‘ಆರೋಪಿ ಪತ್ತೆಗಾಗಿ ಡಿವೈಎಸ್ಪಿ ವಿರೇಶ ನೇತೃತ್ವದಲ್ಲಿ ಪಿಐಗಳಾದ ಸುನೀಲ್ ಮೂಲಿಮನಿ, ಬಾಪುಗೌಡ ಪಾಟೀಲ, ಸಿಬ್ಬಂದಿ ಬಸವರಾಜ, ಶಿವಶರಣಪ್ಪ, ಸವಿತಾ, ಬನ್ನಮ್ಮ, ಲತಾ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ತಂಡವು ಆರೋಪಿ ರೇಖಾ ಅವರನ್ನು ಪತ್ತೆ ಹಚ್ಚಿ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಬಂಧಿಸಿದೆ’ ಎಂದು ತಿಳಿಸಿದರು.

‘ರೇಖಾಳನ್ನು ವಿಚಾರಣೆ ಮಾಡಲಾಗಿ ಎನ್‌ಜಿಒ ಟ್ರಸ್ಟ್ ಸ್ಥಾಪಿಸಿ ಆ ಮೂಲಕ ಬ್ಯಾಂಕ್ ಖಾತೆ ತೆಗೆದು ನೌಕರಿ ಕೊಡಿಸುವುದಾಗಿ ಈರಪ್ಪಗೌಡನ ಮುಖಾಂತರ ಮೂರು ಜನರ ಬಳಿ ಹಣ ಪಡೆದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾಳೆ’ ಎಂದು ತಿಳಿಸಿದರು.

‘ಇದೇ ರೀತಿ ಸಾರ್ವಜನಿಕರನ್ನು ನಂಬಿಸಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ 10-12 ಜನರ ಬಳಿ ಹಣ ಪಡೆದಿದ್ದಾರೆ. ಆರೋಪಿ ರೇಖಾಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ವಿಚಾರಣೆ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

‘ಶಾಸಕ ರಾಜೂಗೌಡ ನನಗೆ ಪರಿಚಯವಿಲ್ಲ. ಒಮ್ಮೆಯೂ ಅವರನ್ನು ನೋಡಿಲ್ಲ. ಜನರನ್ನು ನಂಬಿಸಲು ಅವರ ಹೆಸರನ್ನು ಬಳಸಿದ್ದು ನನ್ನಿಂದ ತಪ್ಪಾಗಿದೆ, ಇದರಲ್ಲಿ ನನಗೂ ಮತ್ತು ಶಾಸಕರಿಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಆರೋಪಿ ರೇಖಾ ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದಾರೆ’ ಎಂದು ವಿವರಿಸಿದರು.

‘ಗಣ್ಯ ವ್ಯಕ್ತಿಗಳ ಹೆಸರು ಹೇಳಿ ಉದ್ಯೋಗ ಆಕಾಂಕ್ಷಿಗಳನ್ನು ನಂಬಿಸಿ ಉದ್ಯೋಗ ಕೊಡಿಸುವುದಾಗಿ ಮೋಸ ಮಾಡುತ್ತಾರೆ. ಜನರು ಇಂಥ ಮೋಸ ವಂಚನೆಗಳಿಗೆ ಒಳಗಾಗಬಾರದು. ಎಂದು ಹೇಳಿದರು.

ಈ ವೇಳೆ ಡಿವೈಎಸ್ಪಿ ವಿರೇಶ್, ಪಿಐಗಳಾದ ಸುನೀಲ್‌ ಮೂಲಿಮನಿ, ಬಾಪುಗೌಡ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು