ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ‘ಯುವ ಸಂಗೀತೋತ್ಸವ’

Last Updated 10 ಜೂನ್ 2018, 19:30 IST
ಅಕ್ಷರ ಗಾತ್ರ

113 ವರ್ಷ ಇತಿಹಾಸವುಳ್ಳ ಬೆಂಗಳೂರು ಗಾಯನ ಸಮಾಜವು ಯುವ ಸಂಗೀತಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ನಗರದಲ್ಲಿ ಇದೇ 11ರಿಂದ 15ರವರೆಗೆ ‘ಯುವ ಸಂಗೀತೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಿದೆ.

ಗಾಯನ ಸಮಾಜವು ಪ್ರತಿವರ್ಷ ಈ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಸುಮಾರು 15 ವರ್ಷಗಳ ಹಿಂದೆ ‘ಯೂತ್‌ ಫೆಸ್ಟ್’ ಕಾರ್ಯಕ್ರಮವನ್ನು ಆಯೋಜಿಸಿ ಜನಮನ್ನಣೆ ಗಿಟ್ಟಿಸಿದ್ದ ಗಾಯನ ಸಮಾಜವು ಅದೇ ಕಾರ್ಯಕ್ರಮವನ್ನು ‘ಯುವ ಸಂಗೀತೋತ್ಸವ’ವಾಗಿ ಮಾರ್ಪಡಿಸಿದೆ.

15 ವರ್ಷಗಳಿಂದ ಪ್ರತಿವರ್ಷ ಯುವ ಐದು ಸಂಗೀತಗಾರರನ್ನು ಗುರುತಿಸಿ ಅವರ ವೃತ್ತಿ ಜೀವನಕ್ಕೆ ವೇದಿಕೆ ಕಲ್ಪಿಸಿಕೊಡುತ್ತಾ ಬಂದಿದೆ ಗಾಯನ ಸಮಾಜ. ಸಂಸ್ಥೆಯು ನಿಸ್ವಾರ್ಥವಾಗಿ ಸಂಗೀತ ಪೋಷಣೆ ಮಾಡುತ್ತಾ ಬಂದಿದ್ದು, ಸಂಗೀತೋತ್ಸವ ಸೇರಿದಂತೆ ಗಾಯನ ಸಮಾಜದ ಇತರ ವೇದಿಕೆ ಕಾರ್ಯಕ್ರಮಗಳಲ್ಲಿ ಸಾಕಷ್ಟು ಮಂದಿ ಅವಕಾಶ ಪಡೆದಿದ್ದಾರೆ. ಅವರಲ್ಲಿ ಬಹುತೇಕರು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ.

‘ಸಂಗೀತ ಎಂಬುದು ಎಲ್ಲ ವರ್ಗದವರಿಗೂ ಇಷ್ಟವಾಗುವ ಕ್ಷೇತ್ರ. ಸಮಾಜದ ಎಲ್ಲ ವರ್ಗಗಳಲ್ಲಿನ ಹಲವಾರು ಯುವ ಪ್ರತಿಭೆಗಳು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಬೇಕು ಎಂಬ ಮಹದಾಸೆ ಹೊಂದಿರುತ್ತಾರೆ. ಕೆಲವರಿಗೆ ಸೂಕ್ತ ವೇದಿಕೆ ಸಿಗುತ್ತದೆ. ಇನ್ನೂ ಕೆಲವರಿಗೆ ವೇದಿಕೆ ಸಿಗದೇ ತಮ್ಮ ಇಷ್ಟದ ಸಂಗೀತ ಕ್ಷೇತ್ರದಿಂದ ಹಿಂದೆ ಸರಿಯಲು ಮನಸು ಮಾಡುತ್ತಾರೆ. ಹಾಗಾಗಿ, ಇಂಥವರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಯುವ ಸಂಗೀತೋತ್ಸವ ಆಯೋಜಿಸುತ್ತಿದ್ದೇವೆ’ ಎನ್ನುತ್ತಾರೆ ಗಾಯನ ಸಮಾಜದ ಕಾರ್ಯದರ್ಶಿ ಟಿ.ಅಚ್ಯುತ ರಾವ್ ಪದಕಿ.

ಅವಕಾಶ ಸಿಗದ ಎಲ್ಲರಿಗೂ ಅವಕಾಶ ಕಲ್ಪಿಸಿಕೊಡಲು ಸಾಧ್ಯವಾಗದಿದ್ದರೂ ಕೆಲವರಿಗಂತೂ ಈ ಕಾರ್ಯಕ್ರಮ ನೆರವಾಗುತ್ತದೆ. ಈ ಮೂಲಕ ಸಂಗೀತ ಕ್ಷೇತ್ರಕ್ಕೆ ಅಳಿವು ಸೇವೆಯನ್ನು ಸಂಸ್ಥೆಯು ಮಾಡುತ್ತಿದೆ. ಸಂಗೀತೋತ್ಸವದಲ್ಲಿ ಪ್ರತಿ ವರ್ಷವೂ ಹೊಸ ಮುಖಗಳಿಗೆ ಮಣೆ ಹಾಕುತ್ತೇವೆ. ಅವರ ಆಯ್ಕೆ ಪ್ರಕ್ರಿಯೆಯೂ ಸೂಕ್ಷ್ಮವಾಗಿ ನಡೆಯುತ್ತದೆ. ಅವರ ಹಿನ್ನೆಲೆ, ಅಭಿರುಚಿ ಮೇರೆಗೆ ಅವಕಾಶ ನೀಡಲಾಗುತ್ತದೆ ಎನ್ನುತ್ತಾರೆ ಅವರು.

ಐದು ದಿನಗಳವರೆಗೆ ಈ ಕಾರ್ಯಕ್ರಮ ನಡೆಯುತ್ತದೆ. ಪ್ರತಿದಿನ ಸಂಜೆ 6ರಿಂದ 8ರವರೆಗೆ ಯುವ ಸಂಗೀತಗಾರರು ಕಛೇರಿ ನಡೆಸಿಕೊಡಲಿದ್ದಾರೆ. ವಾದ್ಯ ಹಾಗೂ ಪಿಟೀಲು ಸಹಕಾರವೂ ಇದೆ. ವಾದ್ಯ ಕಛೇರಿ ಹಾಗೂ ಹಾಡುಗಾರಿಕೆಗೆ ಅವಕಾಶ ಕಲ್ಪಿಸಿರುವುದು ಈ ಬಾರಿಯ ಸಂಗೀತೋತ್ಸವದ ವಿಶೇಷ.

ಕಾರ್ಯಕ್ರಮ ವಿವರ
ಯುವ ಸಂಗೀತೋತ್ಸವ:
ಗಾಯನ–ಪಾವನಿ ಕಾಶೀನಾಥ್‌, ಪಿಟೀಲು–ವೈಭವ್ ರಮಣಿ, ಮೃದಂಗ–ವಿಷ್ಣುವರ್ಧನ್ ಕೆ., ಆಯೋಜನೆ, ಸ್ಥಳ– ಗಾಯನ ಸಮಾಜ, ಕೃಷ್ಣರಾಜೇಂದ್ರ ರಸ್ತೆ, ಸಂಜೆ 6ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT