ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿಯರ ಆರೋಗ್ಯಕ್ಕೆ ವಿಶೇಷ ಕಾಳಜಿ ವಹಿಸಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ಸಭೆ;ಡಿಸಿ ಸೂಚನೆ
Last Updated 6 ಜನವರಿ 2023, 16:13 IST
ಅಕ್ಷರ ಗಾತ್ರ

ಯಾದಗಿರಿ: ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಗರ್ಭಿಣಿಯರ ಕುರಿತು ಪ್ರತಿ ತಿಂಗಳು ನಿಯಮಿತವಾಗಿ ತಪಾಸಣೆ ಮಾಡಿ, ಪ್ರತಿದಿನ ಮನೆಗೆ ಭೇಟಿನೀಡಿ ಆರೋಗ್ಯದ ಕುರಿತು ತಿಳಿವಳಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಯಂದಿರ ಮರಣದ ಪ್ರಗತಿ ಪರಿಶೀಲನಾ ಮಾಸಿಕ ಸಭೆ ನಡೆಸಿ ಅವರು ಮಾತನಾಡಿದರು.

ವೈದ್ಯಾಧಿಕಾರಿಗಳು ತಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರ ನಿಗದಿಪಡಿಸಿದ ಸಮಯದವರೆಗೂ ಕಾರ್ಯನಿರ್ವಹಿಸಬೇಕು. ಹೆರಿಗೆ ಪೂರ್ವ ಮತ್ತು ನಂತರದಲ್ಲಿ ವಿಶೇಷ ಆರೋಗ್ಯ ಕಾಳಜಿ ವಹಿಸಿ ತಾಯಿ ಮರಣ ಪ್ರಮಾಣ ‘ಶೂನ್ಯ’ ಆಗಿರುವಂತೆ ನಿಗಾವಹಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗರ್ಭಿಣಿ ಮರಣ ಹೊಂದುವುದು ಆತಂಕಕಾರಿ ವಿಷಯ. ಪ್ರಸವ ಪೂರ್ವ ಹಾಗೂ ನಂತರದ ತಾಯಿ ಹಾಗೂ ಮಗುವಿನ ಆರೋಗ್ಯ ರಕ್ಷಣೆಗೆ ಹಾಗೂ ಪೌಷ್ಟಿಕತೆ ಕಾಪಾಡಲು ಸರ್ಕಾರ ವಿಶೇಷ ಅನುದಾನ ನೀಡುತ್ತಿದ್ದು ಅದರ ಸದುಪಯೋಗ ಆಗಬೇಕು. ಜಿಲ್ಲೆಯಲ್ಲಿ ಪ್ರಸವ ಸಮಯದಲ್ಲಿ ಒಬ್ಬರೂ ಮರಣ ಹೊಂದಬಾರದು. ಆ ನಿಟ್ಟಿನಲ್ಲಿ ಪ್ರಯತ್ನ ಆಗಬೇಕು. ಜಿಲ್ಲೆಯಲ್ಲಿ ಖಾಲಿ ಇರುವ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು (ಮಹಿಳಾ) ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.

ಎಲ್ಲಾ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಬಾಲ್ಯ ವಿವಾಹದ ಮಾಹಿತಿಯನ್ನು ತಮಗೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಆರ್‌ಸಿಎಚ್ಒ ಡಾ.ಮಲ್ಲಪ್ಪ ಕಣಜಿಕರ್, ಕಲಬುರಗಿ ಸರ್ವೇಕ್ಷಣಾಧಿಕಾರಿ ಡಾ.ಅನಿಲ್ ಕುಮಾರ ತಾಳಿಕೋಟೆ, ಜಿಲ್ಲಾ ಮಲೇರಿಯಾ ಅಧಿಕಾರಿ ಲಕ್ಷ್ಮಿಕಾಂತ ಒಂಟಿಪೀರ, ಯಾದಗಿರಿ ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಸುರಪುರ ವೈದ್ಯಾಧಿಕಾರಿ ಆರ್‌.ವಿ.ನಾಯಕ, ಶಹಾಪುರ ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ್, ಜಿಲ್ಲಾ ಪ್ರಭಾರಿ ಶಸ್ತ್ರ ಚಿಕಿತ್ಸಕಿ ಡಾ.ರಿಜ್ವಾನ್ ಆಫ್ರೀನ್‌, ಪ್ರಸೂತಿ ತಜ್ಞೆ ಡಾ.ಪ್ರೀತಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT