ಶನಿವಾರ, ಮೇ 8, 2021
20 °C
ತಹಶೀಲ್ದಾರರು, ನಗರಸಭೆಗಳ ಪೌರಾಯುಕ್ತರು, ಪುರಸಭೆ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೋವಿಡ್‌ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೋವಿಡ್ -19 ನಿಯಂತ್ರಣ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಮದುವೆ, ಜನ್ಮದಿನ ಸಮಾರಂಭ ಮುಂತಾದ ಎಲ್ಲಾ ಆಚರಣೆಗಳಿಗೂ ಅನುಮತಿ ಕಡ್ಡಾಯವಾಗಿದ್ದು, ಇದನ್ನು ಪಾಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಅವರು ತಹಶೀಲ್ದಾರರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಈ ಕುರಿತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಲ್ಯಾಣ ಮಂಟಪದ ಮಾಲೀಕರು ಹಾಗೂ ಮದುವೆ ಸಮಾರಂಭದ ಆಹ್ವಾನ ಪತ್ರಿಕೆ ಮುದ್ರಿಸುವ ಪ್ರಿಂಟಿಂಗ್ ಪ್ರೆಸ್ ಮಾಲೀಕರ ಸಭೆ ಕರೆದು ತಿಳಿಸಬೇಕು ಎಂದು ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರಿಗೆ ಸೂಚಿಸಿದರು.

ಮದುವೆ ಸಮಾರಂಭಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ತೆರೆದ ಪ್ರದೇಶದಲ್ಲಿ 200 ಜನ ಭಾಗವಹಿಸಬೇಕು. ಮುಚ್ಚಿದ ಪ್ರದೇಶ (ಸಭಾಂಗಣ)ದಲ್ಲಿ 100 ಜನ ಮಾತ್ರ ಭಾಗವಹಿಸಬೇಕು. ಈ ಸಮಾರಂಭಕ್ಕೆ ಪಾಸ್ ವಿತರಣೆ ಕಡ್ಡಾಯ ಎಂದು ತಿಳಿಸಿದರು.

ನಿಯಮ ಉಲ್ಲಂಘನೆಯಾದಲ್ಲಿ ಆಯಾ ತಾಲ್ಲೂಕಿನ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪಿಡಿಒಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ ಜಾತ್ರೆ ನಡೆಸುವುದನ್ನು ನಿಷೇಧಿಸಲಾಗಿದ್ದು, ಈ ಬಗ್ಗೆ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಪಿಡಿಒಗಳು ಹಾಗೂ ಪೊಲೀಸರು ನಿಗಾವಹಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ನಗರಸಭೆ, ಪುರಸಭೆ ಮುಂತಾದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಮಾರುಕಟ್ಟೆಗಳಲ್ಲಿ ಜನಸಂದಣಿಯಾಗದಂತೆ ನೋಡಿಕೊಳ್ಳಬೇಕು. ಜನಸಂದಣಿಯಾಗುವುದು ಕಂಡು ಬಂದಲ್ಲಿ ಮಾರುಕಟ್ಟೆಗಳನ್ನು ವಿಶಾಲವಾದ ಪ್ರದೇಶಗಳಿಗೆ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು ಎಂದು ನಗರಸಭೆಗಳ ಪೌರಾಯುಕ್ತರು ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಇನ್ನು ಕ್ವಾರಂಟೈನ್‍ನಲ್ಲಿರುವವರ ಬಗ್ಗೆ ಕ್ವಾರಂಟೈನ್ ವಾಚ್ ಆ್ಯಪ್‍ಗಾಗಿ ನಿಯೋಜಿಸಲಾಗಿರುವ ಕಂದಾಯ ಇಲಾಖೆ, ಸಿಬ್ಬಂದಿ, ಪಿಡಿಒ, ಪಂಚಾಯಿತಿ ಇಲಾಖೆ ಸಿಬ್ಬಂದಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಕ್ಚಾರಂಟೈನ್‍ನಲ್ಲಿರುವವರ ಛಾಯಾಚಿತ್ರ ತೆಗೆದು ಪ್ರತಿದಿನ ಅಪ್‍ಲೋಡ್ ಮಾಡಬೇಕು ಎಂದು ತಿಳಿಸಿದರು.

ಈ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ. ರಜಪೂತ್, ಉಪವಿಭಾಗಾಕಾರಿ ಶಂಕರಗೌಡ ಸೋಮನಾಳ, ಎಲ್ಲಾ ನಗರಸಭೆಗಳ ಪೌರಾಯುಕ್ತರು, ಪುರಸಭೆ ಮುಖ್ಯಾಧಿಕಾರಿಗಳು, ಎಲ್ಲಾ ತಹಶೀಲ್ದಾರರು
ಇದ್ದರು.

***

ಮದುವೆಗೆ ಪರವಾನಗಿ ಕಡ್ಡಾಯ

ಯಾದಗಿರಿ: ಕೋವಿಡ್ ಎರಡನೇ ಅಲೆಯ ಅಪಾಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಯಾದಗಿರಿ ನಗರಸಭೆ ಕಚೇರಿಯ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಅವರ ಅಧ್ಯಕ್ಷತೆಯಲ್ಲಿ ಕಲ್ಯಾಣ ಮಂಟಪಗಳ ಮಾಲೀಕರ ಸಭೆ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ಅವರು, ನಗರದ ಎಲ್ಲಾ ಕಲ್ಯಾಣ ಮಂಟಪಗಳ ಮಾಲೀಕರು ಮದುವೆ ಹಾಗೂ ಇತರೆ ಕಾರ್ಯಕ್ರಮಕ್ಕೆ ಕಲ್ಯಾಣ ಮಂಟಪ ನೀಡುವ ಮೊದಲು ಸಂಬಂಧಪಟ್ಟ ತಹಶೀಲ್ದಾರ್ ಅವರಿಂದ ಒಪ್ಪಿಗೆ ಪಡೆದು ಕೋವಿಡ್ ಮಾರ್ಗಸೂಚಿ ಅನ್ವಯ ನಿರ್ದಿಷ್ಟ ಜನರಿಗೆ ಪಾಸ್‌ಗಳನ್ನು ತಪ್ಪದೇ ಪಡೆಯಬೇಕೆಂದು ಹೇಳಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕಿನ ಜನರು ಯಾವುದೇ ಸಭೆ, ಸಮಾರಂಭ ಮಾಡಲು ತಹಶೀಲ್ದಾರ್‌ರಿಂದ ಒಪ್ಪಿಗೆ ಪಡೆಯಬೇಕು. ಒಂದು ವೇಳೆ ಒಪ್ಪಿಗೆ ಪಡೆಯದೆ ಸಭೆ, ಸಮಾರಂಭ ಮಾಡಿದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ನಗರಸಭೆ ಪೌರಾಯುಕ್ತ ಬಿ.ಟಿ.ನಾಯಕ ಸೇರಿದಂತೆ ವಿವಿಧ ಕಲ್ಯಾಣ ಮಂಟಪದ ಮಾಲೀಕರು ಸಭೆಯಲ್ಲಿ ಇದ್ದರು.
***
74 ಜನರಿಗೆ ಕೋವಿಡ್‌ ದೃಢ

ಜಿಲ್ಲೆಯಲ್ಲಿ ಭಾನುವಾರ 74 ಜನರಿಗೆ ಕೋವಿಡ್‌ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 11,677ಕ್ಕೆ ಏರಿಕೆಯಾಗಿದೆ.

ಭಾನುವಾರ 26 ಜನ ಕೋವಿಡ್‌ನಿಂದ ಚೇತರಿಸಿಕೊಂಡಿದ್ದು, ಒಟ್ಟಾರೆ 10,896 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. 716 ಸಕ್ರಿಯ ಪ್ರಕರಣಗಳಿವೆ. 7 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್‌ನಿಂದ ಇಬ್ಬರ ಸಾವು: 85 ವರ್ಷದ ಮಹಿಳೆ ಏಪ್ರಿಲ್‌ 12ರಂದು ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. 17ರಂದು ಮೃತಪಟ್ಟಿದ್ದಾರೆ. 47 ವರ್ಷದ ಮಹಿಳೆ ಏಪ್ರಿಲ್‌ 13ರಂದು ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. 17ರಂದು ಮೃತಪಟ್ಟಿದ್ದಾರೆ. ಒಟ್ಟಾರೆ ಕೋವಿಡ್‌ ಸೋಂಕಿತರು 65ಕ್ಕೆ ಏರಿಕೆಯಾಗಿದೆ.

***

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಜನ್ಮದಿನ, ಮದುವೆ ಮುಂತಾದ ಕಾರ್ಯಕ್ರಮಗಳ ಮೇಲೆ ನಿಗಾವಹಿಸುವುದು ಆಯಾ ಗ್ರಾಮ ಪಂಚಾಯಿತಿಯ ಪಿಡಿಒಗಳ ಜವಾಬ್ದಾರಿ
ಡಾ.ರಾಗಪ್ರಿಯಾ ಆರ್, ಜಿಲ್ಲಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು