ಸೋಮವಾರ, ಡಿಸೆಂಬರ್ 9, 2019
22 °C
ಅನುದಾನ ಹಂಚಿಕೆಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷರ ಮಧ್ಯೆ ಶೀತಲ ಸಮರ

ಇತರೆ ಸದಸ್ಯರ ಅಭಿವೃದ್ಧಿ ಅನುದಾನಕ್ಕೂ ಕೊಕ್ಕೆ

ಮಲ್ಲೇಶ್ ನಾಯಕನಹಟ್ಟಿ Updated:

ಅಕ್ಷರ ಗಾತ್ರ : | |

Deccan Herald

ಯಾದಗಿರಿ: ಅಭಿವೃದ್ಧಿ ಕಾಮಗಾರಿಗಳ ಅನುದಾನ ಹಂಚಿಕೆ ವಿಷಯದಲ್ಲಿ ಇಲ್ಲಿನ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬಾಷು ರಾಥೋಡ ಹಾಗೂ ಉಪಾಧ್ಯಕ್ಷೆ ರಾಮಲಿಂಗಮ್ಮ ಅವರ ಮಧ್ಯೆ ನಡೆಯುತ್ತಿರುವ ಶೀತಲ ಸಮರದಿಂದಾಗಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಅಲ್ಲದೇ ಇತರೆ ಸದಸ್ಯರ ಕಾಮಗಾರಿಗಳ ಅನುದಾನಕ್ಕೂ ಕೊಕ್ಕೆ ಬಿದ್ದಿದೆ.

ಸೋಮವಾರ ಆಯೋಜಿಸಿದ್ದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ ಕೂಡ ಇದೇ ಕಾರಣಕ್ಕಾಗಿಯೇ ರದ್ದುಗೊಂಡಿದೆ ಎಂಬುದಾಗಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮಖ್ಬುಲ್ ಪಟೇಲ್, ಭಾಸ್ಕರರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಒಟ್ಟು 31 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳಿವೆ. 2016ರಲ್ಲಿ ಈ ಕ್ಷೇತ್ರಗಳಿಗೆ ಚುನಾವಣೆ ನಡೆದಾಗ ಬಿಜೆಪಿ14 , ಕಾಂಗ್ರೆಸ್ 12 ಜೆಡಿಎಸ್ 5 ಸ್ಥಾನ ಗಳಿಸುವ ಮೂಲಕ ಫಲಿತಾಂಶ ಅತಂತ್ರವಾಗಿತ್ತು. ಆಗ ಕಾಂಗ್ರೆಸ್ ಜೆಡಿಎಸ್ ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಅಧಿಕಾರ ಹಿಡಿದಿತ್ತು. 30 ತಿಂಗಳವರೆಗೆ ಅಧ್ಯಕ್ಷಗಾದಿ ಆಡಳಿತ ಹಂಚಿಕೆಯನ್ನು ಪಕ್ಷದ ಒಳ ಒಪ್ಪಂದ ಆಗಿತ್ತು. ಹಾಗಾಗಿ, ಕಾಂಗ್ರೆಸ್ ನ ಬಾಷು ರಾಥೋಡ ಅಧ್ಯಕ್ಷರಾಗಿ ಹಾಗೂ ಜೆಡಿಎಸ್ ನ ರಾಮಲಿಂಗಮ್ಮ ಉಪಾಧ್ಯಕ್ಷರಾಗಿ ಅಧಿಕಾರ ಹಿಡಿದಿದ್ದರು.

ಕಳೆದ ನವೆಂಬರ್‌ 11ಕ್ಕೆ ಬಾಷು ರಾಥೋಡ ಅವರ ಅವಧಿ ಮುಕ್ತಾಯಗೊಂಡಿದೆ. ಅವರು ಜೆಡಿಎಸ್‌ ಗೆ ಅಧಿಕಾರ ಬಿಟ್ಟುಕೊಡಬೇಕು ಇಲ್ಲವೇ ಕಾಂಗ್ರೆಸ್‌ನ ಇತರರಿಗೆ ಅಧ್ಯಕ್ಷ ಗಾದಿ ಬಿಟ್ಟುಕೊಡಬೇಕು ಎಂಬುದಾಗಿ ಕಾಂಗ್ರೆಸ್‌ ಬೆಂಬಲಿತ ತಾಲ್ಲೂಕು ಪಂಚಾಯಿತಿ ಸದಸ್ಯರು ಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ಅಧಿಕಾರ ಹಿಡಿದಂದಿನಿಂದಲೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮಧ್ಯೆ ಪರಸ್ಪರ ಸಮನ್ವಯದ ಕೊರತೆ ಇದೆ. ಹಾಗಾಗಿ, ಅನುದಾನ ಹಂಚಿಕೆ ವಿಷಯದಲ್ಲಿ ಇಬ್ಬರಿಗೂ ಅಸಮಾಧಾನ ಉಂಟಾಗಿದೆ. ಈ ಕಾರಣಕ್ಕಾಗಿಯೇ ಇತರೆ ಸದಸ್ಯರ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆಗಳಿಗೂ ಅಡ್ಡಿಯಾಗಿದೆ ಎಂಬುದು ಇತರೆ ಸದಸ್ಯರ ಆರೋಪವಾಗಿದೆ.

‘ತಾಲ್ಲೂಕು ಪಂಚಾಯಿತಿ ಎರಡೂವರೆ ವರ್ಷ ಆಡಳಿತ ಅವಧಿ ಮುಗಿದಿದೆ. ಇದುವರೆಗೂ ಯಶಸ್ವಿಯಾಗಿ ಒಂದೂ ಪ್ರಗತಿ ಪರಿಶೀಲನಾ ಸಭೆಯಾಗಲಿ, ಸಾಮಾನ್ಯ ಸಭೆ ಆಗಲಿ ನಡೆದಿಲ್ಲ. ನಾಲ್ಕೈದು ಬಾರಿ ಈ ರೀತಿ ಸಭೆಯನ್ನು ರದ್ದುಪಡಿಸಿದ್ದಾರೆ. ಇಲ್ಲವೇ ಮುಂದೂಡಿದಿದ್ದಾರೆ. ವೈಯಕ್ತಿ ಕಾರಣಕ್ಕಾಗಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಹಿನ್ನಡೆ ಉಂಟು ಮಾಡುತ್ತಿದ್ದಾರೆ’ ಎಂದು ಮುಂಡರಗಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯ ಮಖ್ಬುಲ್‌ ಪಟೇಲ್‌ ಬೇಸರ ವ್ಯಕ್ತಪಡಿಸಿದರು.

‘ಇದುವರೆಗೂ ತಾಲ್ಲೂಕು ಪಂಚಾಯಿತಿಗಳ ಅಭಿವೃದ್ಧಿಗಾಗಿ ₹2 ಕೋಟಿ ಅನುದಾನವನ್ನು ಸರ್ಕಾರ ಒದಗಿಸಿದೆ. ಆದರೆ, ಸದಸ್ಯರಿಗೆ ಕಾಮಗಾರಿಗಳ ಹಂಚಿಕೆ ಮಾಡಿ, ಕೆಲವೊಂದು ಕಾಮಗಾರಿಗಳನ್ನು ಬದಲಾಯಿಸಿಕೊಡುವಂತೆ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಕಾಮಗಾರಿಗಳನ್ನು ಬದಲಾವಣೆ ಮಾಡುವಂತಿಲ್ಲ ಎಂಬುದಾಗಿ ಜಿಲ್ಲಾ ಪಂಚಾಯಿತಿ ತಾಂತ್ರಿಕ ಅಧಿಕಾರಿಗಳು ತಿಳಿಸಿದ ಮೇಲೆ ಇರುವ ಕಾಮಗಾರಿಗಳ ಹಂಚಿಕೆಯಲ್ಲಿ ಅಧ್ಯಕ್ಷ– ಉಪಾಧ್ಯಕ್ಷರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿದೆ. ಈ ಕಾರಣಕ್ಕಾಗಿಯೇ ತಾಲ್ಲೂಕು ಪಂಚಾಯಿತಿಗಳ ಅಭಿವೃದ್ಧಿ ಮತ್ತು ಪ್ರಗತಿ ಪರಿಶೀಲನೆ ಕೂಡ ಕಡೆಗಣಿಸಲಾಗಿದೆ’ ಎಂಬುದಾಗಿ ಕೊಂಕಲ್‌ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯ ಭಾಸ್ಕರರಡ್ಡಿ ಹೇಳುತ್ತಾರೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು