ಬುಧವಾರ, ಡಿಸೆಂಬರ್ 11, 2019
27 °C
ಗ್ರಾಹಕರ ಸಂಪರ್ಕ ಕಾರ್ಯಕ್ರಮದಲ್ಲಿ ಶ್ರೀನಿವಾಸ ಎಸ್.ಗಲಗಲಿ ಸಲಹೆ

‘ಒಟಿಎಫ್, ಎಟಿಎಂ ಪಿನ್ ಸಂಖ್ಯೆ ಹಂಚಿಕೊಳ್ಳದಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಯಾದಗಿರಿ: ‘ಸಾರ್ವಜನಿಕರು ತಮ್ಮ ಮೊಬೈಲ್‌ಗಳಿಗೆ ಬರುವ ಅಪರಿಚಿತ ಕರೆ ಮತ್ತು ಇ-ಮೇಲ್, ವಾಟ್ಸ್‌ಆಪ್, ಫೇಸ್‌ಬುಕ್ ಇನ್ನಿತರ ಸಂದೇಶಗಳಿಗೆ ಕಿವಿಗೊಡಬಾರದು’ ಎಂದು ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್)ದ ಸಲಹೆಗಾರ ಶ್ರೀನಿವಾಸ ಎಸ್.ಗಲಗಲಿ ಸಲಹೆ ನೀಡಿದರು.

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್)ದ ಬೆಂಗಳೂರಿನ ಪ್ರಾದೇಶಿಕ ಕಚೇರಿ ವತಿಯಿಂದ ಗ್ರಾಹಕರ ಹಕ್ಕು ಮತ್ತು ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಗ್ರಾಹಕರ ಸಂಪರ್ಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆಲವರು ಕರೆ ಮಾಡಿ, ನನ್ನ ಮತ್ತು ನಿಮ್ಮ ಮೊಬೈಲ್ ಸಂಖ್ಯೆ ಒಂದೇ ರೀತಿ ಇದೆ. ಕೊನೆಯಲ್ಲಿ 198 ಬದಲು 918 ಎಂದು ನಮೂದಾಗಿದೆ. ಅದರ ಒಟಿಎಫ್ (ಒನ್ ಟೈಮ್ ಫಾಸ್‌ವರ್ಡ್) ಸಂಖ್ಯೆ ನಿಮ್ಮ ಮೊಬೈಲ್‌ಗೆ ಬರುತ್ತದೆ. ಅದನ್ನು ಕೊಡಿ ಎಂದು ಕೇಳುತ್ತಾರೆ. ಈ ರೀತಿಯಾಗಿ ಅನೇಕ ಕಟ್ಟುಕಥೆಗಳನ್ನು ಸೃಷ್ಟಿಸುವ ಮೂಲಕ ನಂಬಿಸಿ, ಮೋಸ ಮಾಡುತ್ತಾರೆ. ಆದ್ದರಿಂದ ಗ್ರಾಹಕರು ಜಾಗೃತರಾಗಿರಬೇಕು. ಒಟಿಎಫ್ ಸಂಖ್ಯೆ, ಎಟಿಎಂ ಪಿನ್, ಇನ್ನಿತರ ಯಾವುದೇ ಪಾಸ್‌ವರ್ಡ್‌ಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು’ ಎಂದು ತಿಳಿಸಿದರು.

‘ಭಾರತದಲ್ಲಿ ಜಗತ್ತಿನ ಎಲ್ಲಾ ದೇಶಗಳಿಗಿಂತ ದೂರವಾಣಿ ಕರೆ ದರ ಕಡಿಮೆ ಇದೆ. ಸುಮಾರು117ಕೋಟಿ ದೂರವಾಣಿ, ಮೊಬೈಲ್ ಸಂಪರ್ಕ ಹೊಂದಿದ್ದು, ದೇಶದ ಶೇ 90ರಷ್ಟು ಜನ ಸಂಪರ್ಕ ಪಡೆದಿದ್ದಾರೆ. ನಗರ ಪ್ರದೇಶಗಳಲ್ಲಿ ಶೇ 100ಕ್ಕೆ ಶೇ158ರಷ್ಟು ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ 58ರಷ್ಟು ಜನ ಸಂಪರ್ಕ ಹೊಂದಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಪ್ರಿಪೇಯ್ಡ್ ಗ್ರಾಹಕರು ಆರು ತಿಂಗಳ ಅವಧಿಯಲ್ಲಿನ ಕರೆ, ಎಸ್‌ಎಂಎಸ್ ವಿವರಗಳನ್ನು ತಮ್ಮ ಸೇವಾ ಸಂಸ್ಥೆಯಿಂದ ಪಡೆಯಬಹುದು. ಬಿಲ್ಲಿಂಗ್ ದೂರುಗಳನ್ನು ನಾಲ್ಕು ವಾರಗಳಲ್ಲಿ ಪರಿಹರಿಸಬೇಕು. ಸೇವೆ ನಿಷ್ಕ್ರಿಯ ಬೇಡಿಕೆಯನ್ನು 7 ದಿನದೊಳಗೆ ಪೂರ್ಣಗೊಳಿಸಬೇಕು. ನಂತರದ ಅವಧಿಗೆ ಯಾವುದೇ ಶುಲ್ಕ ವಿಧಿಸುವ ಹಾಗಿಲ್ಲ. ಸೇವೆ ಒದಗಿಸುವವರು ಗ್ರಾಹಕರ ಸ್ಪಷ್ಟ ಅನುಮತಿಯಿಲ್ಲದೆ ಮೊಬೈಲ್ ಡೇಟಾ ಸೇವೆಯನ್ನು ಸಕ್ರಿಯಗೊಳಿಸುವಂತಿಲ್ಲ. ಗ್ರಾಹಕರು ಶುಲ್ಕರಹಿತ ಸಂಖ್ಯೆ 1925ಗೆ ಕರೆ ಅಥವಾ ಎಸ್‌ಎಂಎಸ್ ಮಾಡುವ ಮೂಲಕ ಡೇಟಾ ಸೇವೆಯನ್ನು ಸಕ್ರಿಯಗೊಳಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು’ ಎಂದು ವಿವರಿಸಿದರು.

‘ಮೊಬೈಲ್ ಪೋರ್ಟಬಿಲಿಟಿ ಗ್ರಾಹಕರಿಗೆ ಅಸ್ತಿತ್ವದಲ್ಲಿರುವ ತಮ್ಮ ಸಂಖ್ಯೆಯನ್ನು ಉಳಿಸಿಕೊಂಡು ಇನ್ನೊಂದು ಸೇವಾ ಸಂಸ್ಥೆಗೆ ಚಲಿಸುವ ಅವಕಾಶ ಒದಗಿಸುತ್ತದೆ. ಮೊಬೈಲ್ ಸಂಪರ್ಕವನ್ನು ಹೊಂದಿದ 90 ದಿನಗಳ ಬಳಿಕವಷ್ಟೇ, ಚಂದಾದಾರರಿಗೆ ಪೋರ್ಟಿಂಗ್ ಮನವಿ ಸಲ್ಲಿಸಲು ಅರ್ಹತೆ ದೊರೆಯುತ್ತದೆ’ ಎಂದು ತಿಳಿಸಿದರು.

‘ಅನಪೇಕ್ಷಿತ ಸಂದೇಶಗಳ ಮೇಲೆ ನಿಷೇಧ: ವಾಣಿಜ್ಯಾತ್ಮಕ ಸಂದೇಶಗಳು, ಟೆಲಿಮಾರ್ಕೆಟಿಂಗ್ ಕರೆಗಳನ್ನು ತಡೆಹಿಡಿಯಲು ಗ್ರಾಹಕರು ತಮ್ಮ ಆದ್ಯತೆಯನ್ನು ನೋಂದಾಯಿಸಲು ಟೋಲ್ ಫ್ರೀ ಸಂಖ್ಯೆ 1909ಗೆ ಕರೆ ಮಾಡಬಹುದು ಅಥವಾ ಎಸ್‌ಎಂಎಸ್ ಕಳುಹಿಸಬಹುದು. ನೋಂದಣಿಯಾದ ಮೇಲೂ ಸಂದೇಶ ಬಂದಲ್ಲಿ, ಮೂರು ದಿನಗೊಳಗಾಗಿ 1909ಗೆ ಕರೆ ಅಥವಾ ಎಸ್‌ಎಂಎಸ್ ಮಾಡುವುದರ ಮೂಲಕ ಸರ್ವೀಸ್ ಪ್ರೊವೈಡರ್‌ಗೆ ದೂರನ್ನು ಸಲ್ಲಿಸಬಹುದು’ ಎಂದು ಹೇಳಿದರು.

‘ಮೊಬೈಲ್ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಟ್ರಾಯ್ ಮೂರು ಹೊಸ ಅಪ್ಲಿಕೇಷನ್ (ಮೈಕಾಲ್, ಮೈಸ್ಪೀಡ್ ಮತ್ತು ಡಿ.ಎನ್.ಡಿ)ಗಳನ್ನು ಮತ್ತು ವೆಬ್ ಪೊರ್ಟಲ್ ಅನ್ನು ಪ್ರಾರಂಭಿಸಿದೆ. ಹೊಸ ಬ್ರಾಡ್‌ಕಾಸ್ಟಿಂಗ್ ರೆಗ್ಯುಲೇಷನ್ ಪ್ರಕಾರ ಕೇಬಲ್ ಟಿ.ವಿ ಯವರು ಮಾಸಿಕ 130 ರೂಪಾಯಿಗೆ 100 ಉಚಿತ ಚಾನಲ್‌ಗಳನ್ನು ಕೊಡಬೇಕು’ ಎಂದು ಮಾಹಿತಿ ನೀಡಿದರು.

ಟ್ರಾಯ್ ಹಿರಿಯ ಸಂಶೋಧನಾ ಅಧಿಕಾರಿ ಎಚ್.ಸಿ. ಲತಾ ಇದ್ದರು. ಅಧಿಕಾರಿಗಳು, ಗ್ರಾಹಕರು, ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಗ್ರಾಹಕ ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು