ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜಾರರು ಪ್ರಾಮಾಣಿಕತೆಗೆ ಹೆಸರುವಾಸಿ

ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಅಭಿಮತ
Last Updated 4 ಮಾರ್ಚ್ 2021, 3:22 IST
ಅಕ್ಷರ ಗಾತ್ರ

ಹುಣಸಗಿ: ‘ಬಂಜಾರ ಜನಾಂಗ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿ’ ಎಂದು ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಹೇಳಿದರು.

ಹುಣಸಗಿ ಪಟ್ಟಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂತ ಸೇವಾಲಾಲ್ ಭವನಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

‘ಸಿಖ್ ಸಮುದಾಯದ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್‌ನಲ್ಲಿ ಬಂಜಾರ ಸಮಾಜದವರ ಶೂರತನ, ತ್ಯಾಗ, ಬಲಿದಾನದ ಕುರಿತು ಉಲ್ಲೇಖಿಸಲಾಗಿದೆ’ ಎಂದರು.

ತಾಂಡಾ ಅಭಿವೃದ್ಧಿ ನಿಗಮದಿಂದ ದೊರೆಯುವ ಸೌಲಭ್ಯಗಳ ಕುರಿತು ವಿವರಿಸಿದರು.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಶಾಸಕ ರಾಜುಗೌಡ ಮಾತನಾಡಿ,‘ಸುರಪುರ ಕ್ಷೇತ್ರದ ಪ್ರತಿ ತಾಂಡಾದಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆದರೆ ಈ ಜನಾಂಗದವರು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುವ ಅಗತ್ಯವಿದೆ’ ಎಂದರು.

‘ತಾಂಡಾದ ಜನ ಕೆಲಸ ಅರಿಸಿ ಹೊರ ರಾಜ್ಯಗಳಿಗೆ ಗುಳೆ ಹೋಗದೆ, ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ತಮ್ಮ ಗ್ರಾಮಗಳಲ್ಲಿಯೇ ಸ್ವಯಂ ಉದ್ಯೋಗ ಕೈಗೊಳ್ಳಬೇಕು’ ಎಂದು ತಿಳವಳಿಕೆ ನೀಡಿದರು.

‘ಸುರಪುರ ವಿಧಾನಸಭಾ ಕ್ಷೇತ್ರದ ಹುಣಸಗಿ ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದ್ದು, ಉದ್ಯೋಗ ಸೃಷ್ಟಿಯಾಗಲಿದೆ. ತಾಂಡಾ ಅಭಿವೃದ್ಧಿ ನಿಗಮದಿಂದ ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಸಂತ ಸೇವಾಲಾಲ್‌ ಭವನಕ್ಕೆ ಎರಡು ಎಕರೆ ಭೂಮಿ ಮಂಜೂರು ಮಾಡಿಸಿದ್ದೇನೆ’ ಎಂದು ತಿಳಿಸಿದರು.

ಸಮಾರಂಭದಲ್ಲಿ ವಜ್ಜಲದ ತಳಬಂಡೆ ಹನುಂತದೇವರಮಠದ ವಿಠ್ಠಲ ಮಹಾರಾಜ್, ಸಿದ್ದಲಿಂಗ ಮಹಾರಾಜ್, ಸೋಮಲಿಂಗ ಮಹಾರಾಜ್ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ನಾಯಕ ಮಾತನಾಡಿದರು.

ಹುಣಸಗಿ ಜಿ.ಪಂ. ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಬಿ.ಎಂ.ಅಳ್ಳಿಕೋಟಿ, ವೀರೇಶ ಚಿಂಚೋಳಿ, ಸಿದ್ಧನಗೌಡ ಕರಿಭಾವಿ, ಜಿ.ಪಂ. ಸದಸ್ಯ ನಾರಾಯಣ ನಾಯ್ಕ್, ಶಾಂತಿಲಾಲ್, ವೆಂಕಟೇಶ ನಾಯಕ, ತಾ.ಪಂ. ಸದಸ್ಯೆ ಪ್ರೀತಾಬಾಯಿ ರಾಠೋಡ, ಮೋತಿಲಾಲ್ ಚವಾಣ್ ಹಾಗೂ ಬಾಸುನಾಯಕ ಇದ್ದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಮಹಾಂತಸ್ವಾಮಿ ವೃತ್ತದಿಂದ ಬಸವೇಶ್ವರ ವೃತ್ತದ ಮುಖಾಂತರ ಪೊಲೀಸ್ ಠಾಣೆ ಮೈದಾನದವರೆಗೂ ಸಸಿ ಪುಟ್ಟಿಗಳ ಮೆರವಣಿಗೆ ನಡೆಯಿತು. ಬಂಜಾರ ಸಮುದಾಯದ ಮಹಿಳೆಯರು ನೃತ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT