ಬುಧವಾರ, ನವೆಂಬರ್ 20, 2019
22 °C
ನೆರೆ ಪರಿಹಾರ ವೈಫಲ್ಯ ಮುಚ್ಚಿಕೊಳ್ಳಲು ಟಿಪ್ಪು ವಿವಾದ: ವಾಸು

ಬಿಜೆಪಿಯಿಂದ ಇತಿಹಾಸ ತಿರುಚುವ ಹುನ್ನಾರ

Published:
Updated:
Prajavani

ಯಾದಗಿರಿ: ‘ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಇತಿಹಾಸ ತೆಗೆದು ಹಾಕಲು ಬಿಜೆಪಿ ಸರ್ಕಾರ ಮುಂದಾಗಿರುವುದು ಖಂಡನೀಯ. ನೆರೆ ಪರಿಹಾರ ಕಾರ್ಯದಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರ್ಕಾರ ಉಪ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನರ ಗಮನ ಬೇರೆಡೆ ಸೆಳೆಯಲು ಮಾಡಿರುವ ಯತ್ನ ಇದಾಗಿದೆ ’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಬಿ.ವಾಸು ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ‌ಮಾತನಾಡಿದ ಅವರು, ‘ಇದು ಬಿಜೆಪಿ ಸರ್ಕಾರದ ನಾಚಿಕೆಗೇಡಿನ ವಿಚಾರ. ಇತಿಹಾಸ ತಿರುಚುವ ಹುನ್ನಾರ. ಇದು ಕೋಮುವಾದವನ್ನು ತೋರ್ಪಡಿಸುತ್ತದೆ. ಕಳೆದ 25 ವರ್ಷಗಳಿಂದ ಯಾವುದೇ ಐತಿಹಾಸಿಕ ವ್ಯಕ್ತಿಯ ಇತಿಹಾಸವನ್ನು ಪಠ್ಯಕ್ರಮದಿಂದ ತೆಗೆದು ಹಾಕಿದ ಉದಾಹರಣೆ ಇಲ್ಲ. ಈಗ ಬಿಜೆಪಿ ಟಿಪ್ಪು ವಿವಾದದಕ್ಕೆ ಮರುಜೀವ ನೀಡುವ ಪ್ರಯತ್ನ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಟಿಪ್ಪು ರಾಕೆಟ್‌ ತಂತ್ರಜ್ಞಾನ, ರೇಷ್ಮೆ, ಕೆರೆಗಳ ನಿರ್ಮಾಣ, ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದಾರೆ. ಅಂಥವರ ಬಗ್ಗೆ ಮತಾಂಧ, ಹಿಂದೂ ವಿರೋಧಿ ಎಂದು ಬಿಜೆಪಿಯವರು ಬಿಂಬಿಸಿದ್ದಾರೆ. ಆದರೆ, ಇದು ಸರಿಯಲ್ಲ. ಹಿಂದೂ ಮುಸ್ಲಿಂ ಜಗಳವಾಡಲು ಬಿಜೆಪಿ, ಕಾಂಗ್ರೆಸ್ ಕೆಲಸ ಮಾಡುತ್ತಿವೆ. ಮತ ಬ್ಯಾಂಕ್‌ಗಾಗಿ ಬಿಜೆಪಿ ಟಿಪ್ಪು ಜಯಂತಿ ರದ್ದು ಮಾಡಲು ಹೊರಟಿದೆ. ಬಿಜೆಪಿ ಸರ್ಕಾರ ಕೋಮುವಾದಿ ನಿರ್ಧಾರವನ್ನು ಕೈ ಬಿಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಬಸವರಾಜ ರಾಮಸಮುದ್ರ, ಎಂ.ಡಿ.ತಾಜ್‌, ಗುರುಪುತ್ರ ಯಡ್ಡಳ್ಳಿ, ಆನಂದ ಗೋಡಿಯಾಳ, ಧರ್ಮರಾಜ ಚವ್ಹಾಣ, ಅಬ್ದುಲ್ ಕರೀಂ, ಚಂದ್ರಶೇಖರ ನಾಗ್ಲಾಪುರ, ಪರಶುರಾಮ ದೊಡಮನಿ, ರಾಘವೇಂದ್ರ ಹಳಿಗೇರಾ, ಮೈಲಾರಪ್ಪ ಮುಂಡರಗಿ ಇದ್ದರು.

ಪ್ರತಿಕ್ರಿಯಿಸಿ (+)