ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧ ಅಕ್ಕ- ತಮ್ಮನಿಗೆ ಸಿಗದ ಮಾಸಾಶನ

ನೆರವು ನೀಡುವಂತೆ ಕಾನೂನು ಸೇವಾ ಸಮಿತಿಗೆ ಮನವಿ
Last Updated 12 ಜನವರಿ 2021, 4:06 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನ ಬಿದರಾಣಿ ಗ್ರಾಮದ ಅಕ್ಕ- ತಮ್ಮ ಬಸಲಿಂಗಮ್ಮ (20) ಮತ್ತು ಶರಣಬಸವ (18) ಅಂಧರಾಗಿದ್ದು, ಜೀವನ ನಿರ್ವಹಣೆಗೆ ಮಾಸಾಶನ ಸಿಗದೆ ಪರದಾಡುತ್ತಿದ್ದು, ನೆರವಿಗೆ ಮನವಿ ಮಾಡಿದ್ದಾರೆ.

ಇಬ್ಬರು ಚಿಕ್ಕವಯಸ್ಸಿನಲ್ಲೆ ತಂದೆಯನ್ನು ಕಳೆದುಕೊಂಡಿದ್ದಾರೆ. ತಾಯಿ ಚಂದ್ರಮ್ಮ ಅವರಿಗೆ ವಿಧವಾ ವೇತನವು ಇಲ್ಲವಾಗಿದೆ. ಅತ್ಯಂತ ಸಂಕಷ್ಟ ಜೀವನ ನಡೆಸುತ್ತಿರುವ ಕುಟುಂಬಕ್ಕೆ ನೆರವಿನ ಆಸರೆ ನೀಡುವಂತೆ ಕಾನೂನು ಸೇವಾ ಸಮಿತಿಗೆ ಮನವಿ ಸಲ್ಲಿಸಿದ್ದಾರೆ.

‘ನನ್ನ ಗಂಡ 9 ವರ್ಷದ ಹಿಂದೆ ಮೃತಪಟ್ಟರು. ನನಗೆ ನಾಲ್ವರು ಮಕ್ಕಳಿದ್ದಾರೆ. ಅದರಲ್ಲಿ ಹಿರಿಯ ಮಗ ಮಗ ಮಲ್ಲಿಕಾರ್ಜುನ ಟಿಪ್ಪರ್ ಚಾಲಕನಾಗಿದ್ದ. ಎಂಟು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇಂದಿಗೂ ಪರಿಹಾರ ಸಿಕ್ಕಿಲ್ಲ. ಇನ್ನೊಬ್ಬ ಮಗ ಮದುವೆಯಾಗಿ ಬೇರೆ ಕಡೆ ವಾಸವಾಗಿದ್ದಾರೆ. ಈಗ ಉಳಿದ ಇಬ್ಬರು ಮಕ್ಕಳು ಅಂಧರಾಗಿದ್ದು, ಅವರನ್ನು ಸಾಕಿ ಬೆಳೆಸುವುದು ನನ್ನ ಹೆಗಲ ಮೇಲಿದೆ.ಅಂಧ ಮಕ್ಕಳಿಗೆ ಮಾಸಾಶನ ಹಾಗೂ ನನಗೆ ವಿಧವಾ ವೇತನ ಮಾಡಿಸಿ ಕೊಡುತ್ತೇನೆ ಎಂದು ಇಬ್ರಾಹಿಂಪುರ ಗ್ರಾಮದ ಒಬ್ಬ ವ್ಯಕ್ತಿ ₹4 ಸಾವಿರ ತೆಗೆದುಕೊಂಡು ಹೋಗಿ ಎಂಟು ವರ್ಷವಾಗಿದೆ. ಇಂದಿಗೂ ಮಂಜೂರಾತಿ ಕೊಡಿಸಿಲ್ಲ’ ಎಂದು ತಾಯಿ ಚಂದ್ರಮ್ಮ ಅಳಲು ತೋಡಿಕೊಂಡರು.

‘ಇಬ್ಬರು ಮಕ್ಕಳಿಗೆ ಹುಟ್ಟುವಾಗಲೇ ಕಣ್ಣು ಇಲ್ಲವಾಗಿವೆ. ಕಡು ಬಡತನ ನನಗೆ ನೆರಳಿನಂತೆ ಕಾಡುತ್ತಲಿದೆ.ತಹಶೀಲ್ದಾರ್ ಕಚೇರಿಗೆ ಬಂದು ಅರ್ಜಿ ನೀಡುವಷ್ಟು ಹಣ ನನ್ನ ಬಳಿ ಇಲ್ಲ. ಸರ್ಕಾರದಿಂದ ನಯಾ ಪೈಸೆ ಅನುದಾನ ಸಿಕ್ಕಿಲ್ಲ. ವೈದ್ಯರ ಬಳಿ ಹೋಗಿ ನ್ಯೂನ್ಯತೆಯ ಪ್ರಮಾಣ ಪತ್ರ ಪಡೆಯಲು ಬಿಡಿಗಾಸು ಇಲ್ಲ’ ಎಂದು ತಿಳಿಸಿದರು.

‘ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡಬೇಕು. ಅಂಗೈ ಅಗಲ ಜಮೀನು ನನ್ನ ಬಳಿ ಇಲ್ಲ. ಇಬ್ಬರು ಮಕ್ಕಳನ್ನು ಸಾಕುವುದು ನನಗೆ ಸವಾಲಿನ ಕೆಲಸವಾಗಿದೆ. ಚಿಕ್ಕದಾದ ಟಿನ್ ಶೆಡ್ ಮನೆಯಿದೆ. ಆ ಮನೆಗೆ ಶೌಚಾಲಯವಿಲ್ಲ. ಅದರಲ್ಲಿ ವಯಸ್ಸಿಗೆ ಬಂದ ಬಸಲಿಂಗಮ್ಮಳ ನಿತ್ಯ ಕರ್ಮಗಳನ್ನು ಪೂರೈಸುವುದು ದೊಡ್ಡ ಸಮಸ್ಯೆಯಾಗಿದೆ. ರಸ್ತೆ ಬದಿಯಲ್ಲಿಯೇ ತುರ್ತು ಕ್ರಿಯೆಗಳನ್ನು ಮುಗಿಸಬೇಕು. ಜೀವ ಹಿಂಡುತ್ತಲಿದೆ. ನೀವಾದರೂ ಕರುಣೆ ತೋರಿಸಿ ಸರ್ಕಾರದ ಸೌಲಭ್ಯ ದೊರಕುವಂತೆ ಮಾಡಿ’ ಎಂದು ತಾಯಿ ಚಂದ್ರಮ್ಮ ಅಂಗಲಾಚಿದರು.

ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಸರ್ಕಾರ ಸೌಲಭ್ಯಗಳನ್ನು ಒದಗಿಸಿಕೊಡುವ ಭರವಸೆಯಲ್ಲಿ ಅಂಧ ಮಕ್ಕಳು ಹಾಗೂ ವಿಧವಾ ತಾಯಿ ನಿರೀಕ್ಷೆಯಲ್ಲಿ ಇದ್ದಾರೆ. ಮಾಹಿತಿಗೆ ಮೊ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT