ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ದಾಸಿಮಯ್ಯ ಕ್ಷೇತ್ರಕ್ಕಿಲ್ಲ ಕಾಯಕಲ್ಪ

ಹಾಳಾದ ಶಿಲ್ಪ ಕಲೆ, ಸಂರಕ್ಷಣೆಗೆ ಮುಂದಾಗದ ಪ್ರಾಚ್ಯವಸ್ತು ಇಲಾಖೆ
Last Updated 5 ಡಿಸೆಂಬರ್ 2019, 9:35 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಮುದನೂರಿನಲ್ಲಿರುವ ಪ್ರಥಮ ವಚನಕಾರ ದೇವರ ದಾಸಿಮಯ್ಯ ದೇವಸ್ಥಾನ ಸುತ್ತಮುತ್ತಲಿನ ಕ್ಷೇತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಅಮೂಲ್ಯ ಶಿಲ್ಪ ಕಲೆಗಳು ಅವನತಿಯತ್ತ ಸಾಗುತ್ತಿವೆ.

ಕೆಂಭಾವಿ ಸಮೀಪದ ಮುದನೂರಿನಲ್ಲಿ ಎಂದಿಗೂ ಬತ್ತದ ಪುಷ್ಕರಣಿಗಳಿವೆ. ಇವುಗಳಿಂದಲೇ ಗ್ರಾಮವೂ ಪ್ರಸಿದ್ಧಿಯನ್ನು ಪಡೆದಿದೆ. ಜಿಲ್ಲೆಯಲ್ಲಿ ಬೇಸಿಗೆ ವೇಳೆ ನೀರಿಗೆ ಹಾಹಾಕಾರವಿರುತ್ತದೆ. ಆದರೆ, ಮುದನೂರಿನಲ್ಲಿ ಯಾವ ಕಾಲದಲ್ಲೂ ಬಾವಿಗಳು ಬತ್ತಿಲ್ಲ. ಯಾವಾಗಲೂ ಇಲ್ಲಿ ನೀರಿಗೆ ಕೊರತೆ ಇಲ್ಲ.

ಪಾಳು ಬಿದ್ದ ಕಲ್ಯಾಣ ಮಂಟಪ: ಕೆಲ ವರ್ಷಗಳ ಹಿಂದೆ ಅರ್ಧಕ್ಕೆ ನಿರ್ಮಿಸಿದ ಕಲ್ಯಾಣ ಮಂಟಪ ಈಗ ಹಾಳು ಬಿದ್ದಿದೆ. ಕಾಮಗಾರಿ ಅರೆ ಬರೆ ಮಾಡಿದ್ದು, ಇದರಿಂದ ಕೆಲಸವನ್ನು ನಿಲ್ಲಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ. ಕಲ್ಯಾಣ ಪಂಟಪದ ಸುತ್ತಲೂ ಬಳ್ಳಾರಿ ಜಾಲಿ ಗಿಡಗಳು ಬೆಳೆದು ನಿಂತಿದ್ದು, ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ ಉಪಯೋಗವಿಲ್ಲದಂತಾಗಿದೆ.

ಶಿಲ್ಪ ಕಲೆಗಳು ಹಾಳು: ದೇವಸ್ಥಾನ ಪಕ್ಕದಲ್ಲಿ ಆಗಿನ ಕಾಲದ ಅನೇಕ ಶಿಲ್ಪ ಕಲೆಗಳು ಮಳೆ, ಗಾಳಿ, ಚಳಿಗೆ ತುತ್ತಾಗಿ ರೂಪ ಕಳೆದುಕೊಂಡಿವೆ. ಅವುಗಳನ್ನು ಸಂರಕ್ಷಣೆ ಮಾಡುವ ಕೆಲಸವಾಗಿಲ್ಲ. ಇದರಿಂದ ಹೊರಗಡೆ ಬಿದ್ದು ಹಾಳಾಗುತ್ತಿವೆ. ಕೆಲ ಮೂರ್ತಿಗಳು ಅರ್ಧಬರ್ಧ ಈಗಾಗಲೇ ಹಾಳಾಗಿವೆ. ಇವುಗಳನ್ನು ಸಂರಕ್ಷಣೆ ಮಾಡದಿದ್ದರೆ, ಕೇವಲ ಕಥೆಗಳಲ್ಲಿ ಮಾತ್ರ ಹೇಳಬೇಕಾಗುತ್ತದೆ ಎಂದು ಪವನಕುಮಾರ ಕುಲಕರ್ಣಿ ಹೇಳುತ್ತಾರೆ.

ನಿತ್ಯ ಭಕ್ತಿ ಸಮರ್ಪಣೆ: ದೇವರ ದಾಸಿಮಯ್ಯ ಅವರು ಪ್ರತಿನಿತ್ಯ ಭೀಮಾ ನದಿಗೆ ಹೋಗಿ ರಾಮನಾಥನಿಗೆ ಭಕ್ತಿ ಸಮಪರ್ಣೆ ಮಾಡಿ ಬರುತ್ತಿದ್ದರು. ಹೀಗಾಗಿ ಪ್ರತಿನಿತ್ಯವೂ ಇಲ್ಲಿಗೆ ಬರುವುದು ಬೇಡ ಎಂದು ಮುದನೂರಿನಲ್ಲಿಯೇ ಅವರ ಆರಾಧ್ಯ ದೈವ ರಾಮನಾಥ ನೀರಿನ ಸೆಲೆಯನ್ನು ನಿರ್ಮಾಣ ಮಾಡಿದನು ಎಂದು ಗ್ರಾಮಸ್ಥರು ವಿವರಿಸುತ್ತಾರೆ. ಹೀಗಾಗಿ ಇಲ್ಲಿರುವ ನೀರು ಎಂದಿಗೂ ಬತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥ ಹಣಮಂತರಾಯ ಪತ್ತಾರ.

ತೀರ್ಥಗಳ ತಾಣ: ಪಾಂಡವ ತೀರ್ಥ, ರಾಮತೀರ್ಥ, ಲಕ್ಷ್ಮಣ ತೀರ್ಥ, ಮರಳ ತೀರ್ಥ, ಹಾಲು ತೀರ್ಥ, ಸಕ್ಕರೆ ತೀರ್ಥಗಳ ತಾಣವಾದ ಮುದನೂರು ಬಾವಿಗಳಿಂದಲೇ ಗುರುತಿಸಿಕೊಂಡಿದೆ. ಎಷ್ಟೊಂದು ಶತಮಾನ ಕಳೆದರೂ ನೀರು ಬತ್ತಿಲ್ಲ ಎನ್ನುವುದು ವಿಶೇಷವಾಗಿದೆ. ಹಾಲಿನಂತೆ ಬಾವಿ ಇರುವುದರಿಂದ ಅದಕ್ಕೆ ಹಾಲು ತೀರ್ಥ, ಸಕ್ಕರೆಯಂತೆ ನೀರು ಸಿಹಿಯಾಗಿದ್ದರಿಂದ ಸಕ್ಕರೆ ತೀರ್ಥ ಎಂದು ಹೆಸರಿಸಲಾಗಿದೆ.

400 ಎಕರೆಗೆ ನೀರಾವರಿ: ಪಾಂಡವ ತೀರ್ಥ ಬಾವಿಯಿಂದ ಗ್ರಾಮದ 400 ಎಕರೆ ಜಮೀನಿಗೆ ನೀರುಣಿಸಲಾಗುತ್ತಿದೆ. ಈ ಬಾವಿಯಲ್ಲಿ ವರ್ಷದ ಎಲ್ಲ ದಿನಗಳಲ್ಲೂ ನೀರು ಇರುವುದರಿಂದ ನೀರಾವರಿಗೆ ಆಶ್ರಯವಾಗಿದೆ ಎಂದು ಗ್ರಾಮದ ಹಿರಿಯರಾದ ಭೀಮರಾಯ ಸಾಹುಕಾರ ಹೊಟ್ಟಿ ಹೇಳುತ್ತಾರೆ.

ಲಕ್ಷ್ಮಣ ತೀರ್ಥ ಬಾವಿಗೆ ಪ್ರತ್ಯೇಕ ನೀರಿನ ಸೆಲೆ ಇಲ್ಲ. ಪಾಂಡವ ತೀರ್ಥ ಬಾವಿಯಿಂದ ನೆಲೆ ನೀರು ಹೋಗುತ್ತವೆ. ಒಂದೊಂದು ತೀರ್ಥದಲ್ಲಿ ಒಂದೊಂದು ವಿಶೇಷವಿದೆ ಎಂದು ಎನ್ನುತ್ತಾರೆ ಅವರು.

ಸರ್ಕಾರ, ಜಿಲ್ಲಾಡಳಿತ ಪ್ರಥಮ ವಚನಕಾರ ದೇವರ ದಾಸಿಮಯ್ಯ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿ ರೂಪಿಸಬೇಕು. ಅಲ್ಲದೆ ಅಭಿವೃದ್ಧಿ ಮಾಡುವುದರಿಂದ ಇತಿಹಾಸ ಪ್ರಸಿದ್ಧ ಸ್ಥಳವನ್ನು ಕಾಪಾಡಿದಂತೆ ಆಗುತ್ತದೆ.

***

13ನೇ ಹಣಕಾಸು ಯೋಜನೆಯಡಿ ₹50 ಲಕ್ಷ 2013–14ನೇ ಸಾಲಿನಲ್ಲಿ ಟೆಂಡರ್‌ ಕರೆದು, ರದ್ದು ಮಾಡಲಾಯಿತು. 2016–17ನೇ ಸಾಲಿನಲ್ಲಿ ಪುನಃ ಟೆಂಡರ್‌ ಕರೆದು ಚಿಕ್ಕಗುಡಿ, ರಾಮತೀರ್ಥ ಪುಷ್ಕರಣೆಯನ್ನು ಸಂರಕ್ಷಣೆ ಮಾಡಲಾಗಿದೆ.
- ಪ್ರೇಮಲತಾ, ಎಇ ಪ್ರಾಚ್ಯವಸ್ತು ಇಲಾಖೆ

**

ರಾಮತೀರ್ಥ ಪುಷ್ಕರಣೆ ಕಾಮಗಾರಿ ಮಾತ್ರ ಆಗಿದೆ. ಇನ್ನುಳಿದ ಯಾವ ಕಾಮಗಾರಿಯೂ ಆಗಿಲ್ಲ. ಇದರಿಂದ ಇಲ್ಲಿ ಅಭಿವೃದ್ಧಿ ಕಾಮಗಾರಿಗಳು ನಿಂತು ಹೋಗಿವೆ.
-ಭೀಮರಾಯ ಸಾಹುಕಾರ ಹೊಟ್ಟಿ, ದಾಸಿಮಯ್ಯ ಅಭಿವೃದ್ಧಿ ಪ್ರಾಧಿಕಾರ ಸಮಿತಿ ಸದಸ್ಯ

***

ಪ್ರಥಮ ವಚನಕಾರ ದೇವರ ದಾಸಿಮಯ್ಯ ಕ್ಷೇತ್ರವನ್ನು ಸರ್ಕಾರ ಮರೆತಿದೆ, ಹಲವಾರು ಕಾಮಗಾರಿಗಳು ಮಾಡಬೇಕಾಗಿತ್ತು. ಆದರೆ, ಎಲ್ಲ ಕೆಲಸಗಳು ಅರ್ಧಕ್ಕೆ ನಿಂತಿವೆ.
-ಚನ್ನಪ್ಪಗೌಡ ಪಡೇನೋರ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT