ಭಾನುವಾರ, ಮೇ 9, 2021
19 °C
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಭಿಪ್ರಾಯ

ಸಾರ, ಸತ್ವಯುತ ಭಾಷೆ ನಮ್ಮ ಕನ್ನಡ: ಟಿ.ಎಸ್.ನಾಗಾಭರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಕನ್ನಡ ಭಾಷೆಯೆಂದರೆ ಸಾಯುವ ಭಾಷೆಯಲ್ಲ, ಮನು ಕುಲ ಇರುವವರೆಗೂ ಇರುವಂಥ ಭಾಷೆಯಾಗಿದೆ. ನಮ್ಮದು ಸಾರಯುತ ಹಾಗೂ ಸತ್ವಯುತವಾದ ಸ್ವಾಭಿಮಾನದ ಭಾಷೆಯಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.

ನಗರದ ತಾಲ್ಲೂಕು ಪಂಚಾಯಿತಿ ಕಚೇರಿಯ ಹತ್ತಿರ ಭಾನುವಾರ ಹಮ್ಮಿಕೊಂಡಿದ್ದ ₹54 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ’ದಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಬೆಳವಣಿಗೆ ಸಾಧಿಸುವಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಅವಶ್ಯಕತೆಯಿದೆ. ಆದರೆ, ಥಾಮಸ್ ಬ್ಯಾಬಿಂಗ್ಟನ್ ಮೆಕಾಲೆ ಅವರ ಕಾನ್ವೆಂಟ್ ಶಿಕ್ಷಣ ಕ್ರಮದಿಂದಾಗಿ ನಮ್ಮಲ್ಲಿ ಕೀಳರಿಮೆ ಬೆಳೆಯುವಂತಾಗಿದೆ’ ಎಂದರು.

ಭಾರತೀಯರದ್ದು ‘ನಾಳೆಗಳಿಗಾಗಿ ಇಂದು ಬದುಕು’ವ ಚಿಂತನೆಯಾಗಿದೆ. ಆದರೆ, ಐರೋಪ್ಯರದ್ದು ಇದಕ್ಕೆ ಭಿನ್ನವಾಗಿ ‘ಈ ಕ್ಷಣದ ಸುಖಕ್ಕಾಗಿ ಬದುಕು' ಎನ್ನುವ ಚಿಂತನೆ. ನಾವು ಐರೋಪ್ಯ ಚಿಂತನಾಕ್ರಮದಿಂದಾಗಿ ಭಾರತೀಯ ನೆಲಮೂಲದ ವಿಷಯಗಳ ಕುರಿತು ಕೀಳರಿಮೆ ಪಡುತ್ತಿರುವುದು ಕಳವಳದ ಬೆಳವಣಿಗೆ ಎಂದರು.

‘8ನೇ ಶತಮಾನದಲ್ಲಿ ಪಂಪ ಮನುಜಕುಲಂ ತಾನೊಂದೆವಲಂ' ಎಂದೂ, 12ನೇ ಶತಮಾನದಲ್ಲಿ ಬಸವಣ್ಣ ‘ಇವನಾರವ ಎನ್ನದೆ, ಇವ ನಮ್ಮವ ಎನ್ನಿ’ ಎಂದು ಹಾಗೂ ನವೋದಯದ ಕಾಲಘಟ್ಟದ ಕುವೆಂಪು ಅವರು ‘ಮನುಜ ಮತ ವಿಶ್ವ ಪಥ’ ಎಂದು ಹೇಳುವ ಮೂಲಕ ಕನ್ನಡದ್ದು ವಿಶ್ವಮಟ್ಟದ ಚಿಂತನೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ನಾವೂ ಮುಂದಿನ ದಿನಗಳಲ್ಲಿ ಅವರದೇ ದಾರಿಯಲ್ಲಿ ಮುಂದುವರೆಯೋಣ’ ಎಂದು ಸಲಹೆ ನೀಡಿದರು.

‘ಜಿಲ್ಲಾ ಕೇಂದ್ರದಲ್ಲಿ ಪರಿಷತ್ತಿಗೆ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಪ್ರಾಧಿಕಾರವೂ ಭಾಗಿಯಾಗಿದ್ದು, ಹೆಮ್ಮೆ ಎನಿಸುತ್ತದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸಹಾಯಧನ ಪಡೆದ ಎಷ್ಟೋ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಇನ್ನು ಕೆಲವು ಆರಂಭದ ಮಟ್ಟದಲ್ಲೇ ಇವೆ. ಆದರೆ, ಯಾದಗಿರಿಯಲ್ಲಿ ಮಾತ್ರ ವ್ಯವಸ್ಥಿತ ಕಟ್ಟಡ ನಿರ್ಮಾಣವಾಗಿದ್ದು, ತುಂಬಾ ಸಂತಸ ನೀಡುತ್ತಿದೆ’ ಎಂದು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಕ್ಕೆ ಅಭಿನಂದಿಸಿದರು.

ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಮಾತನಾಡಿ, ‘ವಿಶ್ವವಿದ್ಯಾಲಯಗಳಿಗೆ ಅನುದಾನದ ಕೊರತೆಯಿಂದಾಗಿ ಸಂಶೋಧನಾ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಈಚೆಗೆ ರಾಯಚೂರಿಗೆ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗಿದ್ದು, ಅನುದಾನದ ಕೊರತೆಯಿದೆ. ಕನಿಷ್ಠ ವಿಶ್ವವಿದ್ಯಾಲಯಗಳಿಗೆ ₹100 ಕೋಟಿ ಅನುದಾನ ನೀಡಿದರೆ ಉತ್ತಮ. ಯಾದಗಿರಿಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭಿಸಲು ಶಾಸಕರು ಸದನದಲ್ಲಿ ಪ್ರಸ್ತಾಪಿಸುವಂತೆ’ ಮನವಿ ಮಾಡಿದರು.

ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸುಭಾಶ ಕೌಲಗಿ ಮಾತನಾಡಿ, ಈಗಾಗಲೇ ನಮ್ಮಲ್ಲಿ 11 ವಿಷಯಗಳ ಸ್ನಾತಕೋತ್ತರ ಅಧ್ಯಯನ ಕೇಂದ್ರವಿದೆ. ಆದರೆ, ಜಿಲ್ಲೆಗೆ ಒಂದು ವಿಶ್ವವಿದ್ಯಾಲಯ ಸ್ಥಾಪಿಸುವತ್ತ ಸರ್ಕಾರದ ಗಮನ ಸೆಳೆಯುವಂತೆ ನಮೋಶಿ ಅವರಿಗೆ ಮನವಿ ಮಾಡಿದರು.

ಶಾಸಕ ವೆಂಕಟರೆಡ್ಡಿ ಮುದ್ನಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಸಾಹಿತ್ಯಾಭಿಮಾನಿಗಳ ಬಹುದಿನದ ಬೇಡಿಕೆಯಾದ ಸ್ವಂತ ಕಸಾಪ ಕಟ್ಟಡ ಕಚೇರಿ ನಿರ್ಮಾಣ ಸಂಕಲ್ಪ ಈಡೇರಿಸಲು ಸಿದ್ದಪ್ಪ ಹೊಟ್ಟಿ ಅವರ ತಂಡ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಯುವ ಸಾಹಿತಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿ ಅವರಲ್ಲಿರುವ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸಬೇಕು’ ಎಂದು ಸಲಹೆ ನೀಡಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಎಸ್.ಹೊಟ್ಟಿ ಅಧ್ಯಕ್ಷತೆ ವಹಿಸಿ ಕಟ್ಟಡ ನಿರ್ಮಾಣ ಕುರಿತು ಮಾತನಾಡಿದರು. 

ಸಮಾರಂಭದಲ್ಲಿ ಪರಿಷತ್ತಿನ ಬೆಳವಣಿಗೆಗೆ ಶ್ರಮಿಸಿದ ಹಿರಿಯರಾದ ಅಯ್ಯಣ್ಣ ಹುಂಡೇಕಾರ, ಎಂ.ಕೆ.ಬೀರನೂರ ಹಾಗೂ ಬಸವಂತ್ರಾಯಗೌಡ ಮಾಲಿಪಾಟೀಲ ಅವರನ್ನು ಸತ್ಕರಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಯಡಿಯಾಪುರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಚಂಡ್ರಿಕಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭೀಮವ್ವ ಅಚ್ಚೋಲಾ, ವಿಧಾನ ಪರಿಷತ್ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ, ಕಸಾಪ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಭೀಮರಾಯ ಲಿಂಗೇರಿ, ಸಿದ್ಲಿಂಗಣ್ಣ ಆನೆಗುಂದಿ, ಶ್ರೀನಿವಾಸ ಜಾಲವಾದಿ, ಡಾ.ಗಾಳೆಪ್ಪ ಪೂಜಾರಿ, ನಾಗಣ್ಣ ಅಡಿಕ್ಯಾಳ, ಬಸರೆಡ್ಡಿ ಎಂ.ಟಿ.ಪಲ್ಲಿ ಇದ್ದರು.

‘ಸರಿಗನ್ನಡ ಬಳಕೆಗೆ ಅಭಿಯಾನ’
‘ಮಾರ್ಚ್‌ 29 ರಿಂದ ಮೂರು ದಿನಗಳ ಕಾಲ ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಕುರಿತಾಗಿ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೇಡಿಯೊ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ನಡ ಭಾಷೆ ಸರಿಯಾಗಿ ಬಳಕೆ ಮಾಡುತ್ತಿಲ್ಲ. ಮುದ್ರಣ ಮಾಧ್ಯಮದಲ್ಲಿ ಮಾತ್ರ ಚೆನ್ನಾಗಿ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುವಂತೆ ಅಭಿಯಾನ ನಡೆಸಿ ಯಶಸ್ವಿಯಾಗಿದ್ದೇವೆ’ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು