ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಯೋಜನೆ: ರೈತರಿಗೆ ವರದಾನವಾದ ಕ್ಷೇತ್ರ ಬದು

ಉತ್ತಮ ಮಳೆಯಿಂದ ಹೊಲದ ತೆಗ್ಗುಗಳಲ್ಲಿ ನೀರು; ರೈತರಿಗೆ ಹೆಚ್ಚಿದ ಸಂಭ್ರಮ
Last Updated 26 ಜುಲೈ 2020, 5:54 IST
ಅಕ್ಷರ ಗಾತ್ರ

ಸುರಪುರ: ನರೇಗಾ ಯೋಜನೆಯಲ್ಲಿ ಕೊರೊನಾ ಸಮಯದ ಕಳೆದ 4 ತಿಂಗಳಿಂದ ಕೈಗೊಂಡಿರುವ ಕಾಮಗಾರಿಗಳು ರೈತರಿಗೆ ಪೂರಕವಾಗಿವೆ. ಅದರಲ್ಲೂ ಕ್ಷೇತ್ರ ಬದು ರೈತರಿಗೆ ವರದಾನವಾಗಿ ಪರಿಣಮಿಸಿದೆ.

ಈ ಮೊದಲು ನರೇಗಾ ಯೋಜನೆಯಲ್ಲಿ ಕೃಷಿ ಹೊಂಡ, ಕುರಿ ದೊಡ್ಡಿ, ಕೆರೆ ಹೂಳೆತ್ತುವುದು, ಎರೆಹುಳು ಘಟಕ, ರಸ್ತೆ ಇತರ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿತ್ತು. ಕ್ಷೇತ್ರ ಬದು ಕಾಮಗಾರಿ ಇತ್ತಾದರೂ ಹೆಚ್ಚಿನ ಮಹತ್ವ ನೀಡಿರಲಿಲ್ಲ. ಈ ಬಾರಿ ಕ್ಷೇತ್ರ ಬದುವಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಕಾಮಗಾರಿಯ ಚಿತ್ರಣ ಬದಲಿಸಲಾಗಿದೆ. ಮೊದಲು ಹೊಲದಲ್ಲಿನ ಮಣ್ಣನ್ನು ಎತ್ತಿ ಒಡ್ಡಿಗೆ ಹಾಕಲಾಗುತ್ತಿತ್ತು. ಈಗ ಒಡ್ಡಿನ ಒಂದು ಅಡಿ ದೂರದಲ್ಲಿ ಒಡ್ಡಿನ ಗುಂಟಾ ಚೌಕಾಕಾರದಲ್ಲಿ ತೆಗ್ಗು ತೋಡಿ ಆ ಮಣ್ಣನ್ನು ಒಡ್ಡು (ಬದು) ವಿಗೆ ಹಾಕಲಾಗುತ್ತದೆ. ಇದು ಸಾಕಷ್ಟು ಫಲ ನೀಡಿದೆ. ಕಳೆದ ಮೂರು ತಿಂಗಳಿಂದ ಸುರಿದ ಉತ್ತಮ ಮಳೆ ಈ ತೆಗ್ಗುಗಳಲ್ಲಿ ನಿಂತುಕೊಂಡಿದೆ.

ಮಳೆಯ ನೀರು ಮುಂದೆ ಹರಿಯದಂತೆ ಈ ತೆಗ್ಗುಗಳು ತಡೆ ಹಿಡಿದಿವೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲಗಳಾಗಿವೆ. ‘ಕ್ಷೇತ್ರ ಬದು ಕಾಮಗಾರಿಯಲ್ಲಿ ಆಯಾ ಹೊಲದ ರೈತರಿಗೆ ಕೂಲಿ ನೀಡಲಾಗುತ್ತದೆ. ರೈತರು ತಮ್ಮ ಹೊಲದ ಪಹಣಿ ಹಚ್ಚಿ ಸಂಬಂಧಿಸಿದ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೆ ಕ್ಷೇತ್ರ ಬದು ಕಾಮಗಾರಿ ಕೈಗೊಳ್ಳಲಾಗುತ್ತದೆ’ ಎಂದು ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ವಿಶ್ವನಾಥ ಯಾದಗಿರಿಕರ್ ಹೇಳಿದರು.

‘ಏಪ್ರಿಲ್ ತಿಂಗಳಿಂದ ಇಂದಿನವರೆಗೆ ತಾಲ್ಲೂಕಿನ 23 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 308 ಜನ ರೈತರ ಹೊಲಗಳಲ್ಲಿ ಕ್ಷೇತ್ರ ಬದು ನಿರ್ಮಿಸಲಾಗಿದೆ. ಒಂದು ಬದುವಿನ ತೆಗ್ಗಿಗೆ 70 ರಿಂದ 90 ಮಾನವ ದಿನಗಳನ್ನು ಸೃಷ್ಟಿಸಲಾಗಿದೆ’ ಎಂದು ತಿಳಿಸಿದರು. ‘ಕ್ಷೇತ್ರ ಬದುವಿಗಾಗಿಯೇ ಒಟ್ಟು ಅಂದಾಜು 3 ಸಾವಿರ ಮಾನವ ದಿನಗಳನ್ನು ಒದಗಿಸಲಾಗಿದೆ. ಒಬ್ಬರಿಗೆ ದಿನಕ್ಕೆ ₹275 ಕೂಲಿ ಮತ್ತು ₹ 10 ಸಲಕರಣೆ ಧನ ನೀಡಲಾಗಿದೆ. ಅವರವರ ಖಾತೆಗೆಳಿಗೆ ಹಣ ಜಮೆ ಮಾಡಲಾಗಿದೆ’ ಎಂದು ವಿವರಿಸಿದರು.

‘ನಮ್ಮ ಹೊಲದಲ್ಲಿ ಒಡ್ಡಿನ ಗುಂಟಾ 10 ಕ್ಷೇತ್ರ ಬದುವಿನ ತೆಗ್ಗು ತೋಡಲಾಗಿದೆ. ನಮಗೂ ಕೂಲಿ ಸಿಕ್ಕಂತಾಗಿದೆ. ನಮ್ಮ ಹೊಲದ ಒಡ್ಡು ಗಟ್ಟಿಮುಟ್ಟಾಗಿದ್ದು, ಹದ್ದುಬಸ್ತು ಆದಂತಾಗಿದೆ’ ಎನ್ನುತ್ತಾರೆ ಸೂಗೂರು ಗ್ರಾಮದ ರೈತ ಚಂದಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT