ಮಂಗಳವಾರ, ಸೆಪ್ಟೆಂಬರ್ 21, 2021
26 °C
ಕಳಪೆ ಕಾಮಗಾರಿ ಮಧ್ಯೆಯೂ ನೀರು ಬಿಡುಗಡೆಗೆ ಸಿದ್ಧತೆ: ಆರೋಪ

ಯಾದಗಿರಿ: ಕೊನೆ ಭಾಗದ ರೈತರ ತಲುಪದ ಕೃಷ್ಣೆಯ ನೀರು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯ ಜೀವನಾಡಿ ಕೃಷ್ಣಾ ನದಿಯಿಂದ ಮಂಗಳವಾರ ವಿತರಣಾ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಅಲ್ಲಲ್ಲಿ ಕಾಲುವೆ ದುರಸ್ತಿಯಲ್ಲಿ ಕಳಪೆ ಕಾಮಗಾರಿ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿವೆ. ಇವೆಲ್ಲವುಗಳ ಮಧ್ಯೆಯೇ ರೈತರಿಗೆ ಕೃಷಿಗಾಗಿ ನೀರು ಹರಿಸಲಾಗುತ್ತಿದೆ. 

ಕೃಷ್ಣಾ ನದಿ ಜಲಾನಯನ ಪಾತ್ರದಲ್ಲಿ ಹೆಚ್ಚಿನ ಮಳೆಯಾಗಿದ್ದು, ಆಲಮಟ್ಟಿ, ನಾರಾಯಣಪುರ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ನೀರು ಹರಿಸಲಾಗುತ್ತಿದೆ. ಆದರೆ, ಹಲವಾರು ಕಡೆ ಕಾಲುವೆ ದುರಸ್ತಿ ಆಗಿಲ್ಲ. ಕಾಲುವೆ ಆಧುನಿಕರಣ ಕಾಮಗಾರಿ ಕಳಪೆಯಾಗಿದೆ ಎನ್ನುವ ಆರೋಪ ರೈತರಿಂದ ಕೇಳಿ ಬರುತ್ತಿದೆ. 

‘ಅರೆಬರೆ ಕಾಮಗಾರಿ ನಡೆದಿರುವ ಕಡೆ ಅಧಿಕಾರಿಗಳು ಪರಿಶೀಲಿಸದೇ ನೀರು ಹರಿಸುವುದು ಎಷ್ಟರ ಮಟ್ಟಿಗೆ ಸರಿ. ಇದರಿಂದ ಕೊನೆ ಭಾಗಕ್ಕೆ ನೀರು ತಲುಪುವುದಿಲ್ಲ. ಆದರೂ ಯಾವುದೇ ದುರಸ್ತಿಗೆ ಮುಂದಾಗದೆ ಮಾಡಲಾಗಿದೆ ಎಂದು’ ರೈತ ಮಲ್ಲೇಶ ಕುರಕುಂದಿ ಆರೋಪಿಸಿದರು. 

‘ಕಾಲುವೆಯನ್ನು ದುರಸ್ತಿ ಮಾಡದ ಕಾರಣ ಕೊನೆ ಭಾಗಕ್ಕೆ ನೀರೇ ಸಿಗುವುದಿಲ್ಲ. ಒಂದು ಬೆಳೆಗೆ ನೀರು ಬಂದರೂ ನಮಗೆ ಎಷ್ಟೊ ಸಂತಸವಾಗುತ್ತದೆ. ಮಳೆಗಾಲದಲ್ಲಿ ಮಳೆ ಆಶ್ರಯಿಸಿಕೊಂಡು ಬೆಳೆ ಬೆಳೆಯುತ್ತೇವೆ. ಆದರೆ, ಬೇಸಿಗೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತದೆ. ಶೇಂಗಾ, ಸೂರ್ಯಕಾಂತಿ ಬೆಳೆದರೆ ನೀರು ಸಿಗುವುದಿಲ್ಲ. ನಮ್ಮ ಗೋಳು ಕೇಳುವವರು ಇಲ್ಲ’ ಎಂದು ರೈತ ಭೀಮರಾಯ ತುಮಕೂರ ಹೇಳುತ್ತಾರೆ. 

‘ನಾಯ್ಕಲ್–ಮಳ್ಳಳ್ಳಿ–ಕುರಕುಂದಿ ಭಾಗದಲ್ಲಿ ಉಪಕಾಲುವೆ ದುರಸ್ತಿ ಮಾಡದಿದ್ದರಿಂದ ಹೆಚ್ಚಿನ ಮಳೆ ಬಂದರೆ ಹೆಚ್ಚುವರಿ ನೀರು ಹೊಲಗಳಿಗೆ ನುಗ್ಗುತ್ತವೆ. ಇದರಿಂದ ರೈತರು ಸಮಸ್ಯೆ ಅನುಭವಿಸುತ್ತಾರೆ. ಹೀಗಾಗಿ ದುರಸ್ತಿ ಮಾಡಬೇಕು’ ಎಂದು ಅವರು ಆಗ್ರಹಿಸುತ್ತಾರೆ.

‘ನಾನು ಡಿಸೆಂಬರ್‌ನಲ್ಲಿ ಬಂದಿದ್ದೇನೆ. ಹಲವಾರು ಕಾಲುವೆಗಳನ್ನು ಪರಿಶೀಲಿಸಿದ್ದೇನೆ. ದುರಸ್ತಿಯಾಗದಿದ್ದರೆ ಮಾಡಿಸಲಾಗುವುದು. ಕೊನೆ ಭಾಗಕ್ಕೆ ನೀರು ತಲುಪಿಸಲಾಗುವುದು’ ಎಂದು ಕೆಬಿಜೆಎನ್‌ಎಲ್ ಭೀಮರಾಯನಗುಡಿ ವೃತ್ತ ‌ಸುಪ್ರಿಡೆಂಟ್‌ ಆಫ್‌ ಎಂಜಿನಿಯರ್ ಎನ್‌.ಕೆ.ಪವಾರ್‌ ತಿಳಿಸುತ್ತಾರೆ‌.

***

ಹೆಸರಿಗೆ ಮಾತ್ರ ನಮ್ಮ ಭಾಗ ನೀರಾವರಿ ಪ್ರದೇಶವಾಗಿದೆ. ಆದರೆ, ನೀರಿನಿಂದ ವಂಚಿತವಾಗಿದ್ದೇವೆ. ಕಾಲುವೆ ಜಾಲದಲ್ಲಿ ಗಿಡಗಂಟಿ ಬೆಳೆದಿದ್ದು, ಟೆಂಡರ್‌ನಲ್ಲಿಯೂ ಅವ್ಯವಹಾರ ನಡೆದಿರುವ ಗುಮಾನಿ ಇದೆ

-ಭೀಮರಾಯ ತುಮಕೂರ, ರೈತ, ನಾಯ್ಕಲ್‌

***

ಹಲವಾರು ವರ್ಷಗಳಿಂದ ನೀರಿಗಾಗಿ ಪರಿತಪಿಸುತ್ತಿದ್ದೇವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ಶೀಘ್ರವೇ ಈ ಭಾಗಕ್ಕೆ ನೀರು ನೀರು ಹರಿಸಬೇಕು

-ಮರಲಿಂಗಪ್ಪ ಮಳ್ಳಳ್ಳಿ, ರೈತ, ಮಳ್ಳಳ್ಳಿ 

***

ಯಾವ ಭಾಗಕ್ಕೆ ನೀರು ಹರಿಯುವುದಿಲ್ಲವೊ ಮುಂದಿನ ಬಾರಿ ಆ ಕಡೆ ಗಮನಹರಿಸಲಾಗುವುದು. ಉಪಕಾಲುವೆ ದುರಸ್ತಿ ಮಾಡಿದ ಫೋಟೊ, ವಿಡಿಯೊ ತರಿಸಿಕೊಳ್ಳುತ್ತೇನೆ

-ಎನ್‌.ಕೆ.ಪವಾರ್‌, ಕೆಬಿಜೆಎನ್‌ಎಲ್ ಭೀಮರಾಯನಗುಡಿ ವೃತ್ತ ‌ಸುಪ್ರಿಡೆಂಟ್‌ ಆಫ್‌ ಎಂಜಿನಿಯರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು