ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ಏಳು... ಕೋಟಿ ಏಳು ಕೋಟಿಘೆ...ಮಲ್ಲಯ್ಯ

ಕೋವಿಡ್‌ ನಂತರ ಅದ್ಧೂರಿಯಾಗಿ ನಡೆದ ಮೈಲಾರಲಿಂಗೇಶ್ವರ ಪಲ್ಲಕ್ಕಿ ಉತ್ಸವ, ಲಕ್ಷಾಂತರ ಭಕ್ತರ ಆಗಮನ
Last Updated 15 ಜನವರಿ 2023, 0:15 IST
ಅಕ್ಷರ ಗಾತ್ರ

ಯಾದಗಿರಿ: ಐತಿಹಾಸಿಕ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆ ಎರಡು ವರ್ಷ ನಂತರ ಅದ್ಧೂರಿಯಾಗಿ ಮಕರ ಸಂಕ್ರಮದ ಶನಿವಾರ ನಡೆಯಿತು.

ಕೋವಿಡ್‌ ಕಾರಣ ಕಳೆದ ಎರಡು ವರ್ಷಗಳಲ್ಲಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಈ ಬಾರಿ ಕೋವಿಡ್‌ ಪ್ರಭಾವ ಇಲ್ಲದ ಕಾರಣ ಲಕ್ಷಾಂತರ ಜನರು ಸಾಕ್ಷಿಯಾದರು.

ಲಕ್ಷಾಂತರ ಭಕ್ತರ ಆಗಮನ: ಬೇರೆ ಜಾತ್ರೆಗಳಲ್ಲಿ ರಥೋತ್ಸವ ನಡೆದರೆ ಇಲ್ಲಿ ಪಲ್ಲಕ್ಕಿ ಉತ್ಸವ ನಡೆಯುವುದು ವಿಶೇಷವಾಗಿದೆ.

ಬೆಳಿಗ್ಗೆಯಿಂದಲೇ ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದ ಭಕ್ತ ಸಮೂಹ ಪವಿತ್ರ ಹೊನ್ನಕೆರೆಯಲ್ಲಿ ಪುಣ್ಯ ಸ್ನಾನ ಮಾಡಿ, ಸರದಿಯಲ್ಲಿ ಗಂಟೆಗಳ ಕಾಲ ನಿಂತು, ಮಲ್ಲಯ್ಯನ ದರ್ಶನ ಪಡೆದರು. ಚಿಕ್ಕಮಕ್ಕಳು, ದೊಡ್ಡವರು, ಯುವಕರು ಸೇರಿದಂತೆ ಲಕ್ಷಾಂತರ ಭಕ್ತರು ಜಾಮಾಯಿಸಿದ್ದರು.

ಶನಿವಾರ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಶುಕ್ರವಾರ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆ ವರೆಗೆ ಮಹಾಪೂಜೆ, ರುದ್ರಾಭಿಷೇಕ ನಡೆಯಿತು.

ಸರಪಳಿ ಹರಿದ ಪೂಜಾರಿ: ಸರಪಳಿ ಹರಿಯುವ ಕಂಬಕ್ಕೆ ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ಪಾದಗಟ್ಟೆಯಲ್ಲಿ ಪೂಜಾರಿಯವರು ಮಲ್ಲಯ್ಯನಿಗೆ ಜೈಕಾರ ಹಾಕಿ ಸರಪಳಿ ಹರಿದರು. ಇದರಿಂದ ಭಕ್ತರ ಹರ್ಷೋಷ್ಘಾರ ಮುಗಿಲು ಮುಟ್ಟಿತ್ತು. ಸರಪಳಿ ಹರಿಯುವುದನ್ನು ಭಕ್ತರು ಮನೆಯ ಮಾಳಿಗೆಯಿಂದ ನಿಂತು ವೀಕ್ಷಿಸಿದರು.

ಏಳು... ಕೋಟಿ ಏಳು ಕೋಟಿಘೆ: ಮೈಲಾರಲಿಂಗೇಶ್ವರ ಜಾತ್ರೆಗೆ ಆಗಮಿಸಿ ಭಕ್ತರು ಏಳು... ಕೋಟಿ ಏಳು ಕೋಟಿಘೆ ಮಲ್ಲಯ್ಯ ಜೈಕಾರ ಕೂಗುವುದು ಸಾಮಾನ್ಯವಾಗಿತ್ತು. ಯುವಕರು ಗುಂಪುಕಟ್ಟಿಕೊಟ್ಟು ಪ್ರತಿಧ್ವನಿ ಮಾಡುತ್ತಿದ್ದರು. ಪಲ್ಲಕ್ಕಿ ಹೊರಟ ಮೇಲಂತೂ ದೇವಸ್ಥಾನದದಿಂದ ಹೊನ್ನಕೆರೆಯವರೆಗೆ ಏಳು... ಕೋಟಿ ಏಳು ಕೋಟಿಘೆ ಜೈಕಾರ ಕೇಳಿಸುತ್ತಿತ್ತು.

ಶನಿವಾರವೂ ವಿವಿಧ ಕಡೆಯಿಂದ ಭಕ್ತರು ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ಆಗಮಿಸುವುದು ರಸ್ತೆಯುದ್ದಕ್ಕೂ ಕಾಣಿಸಿತು.

ದೇವಸ್ಥಾನದ ಸಮೀಪದ ಬಂಡೆಯ ಮೇಲೆ ಭಕ್ತರು ನಾಣ್ಯಗಳನ್ನು ನಿಲ್ಲಿಸುವುದು ಕಂಡು ಬಂತು. ಹರಿಕೆ ಹೊತ್ತು ಬಂಡೆಯ ಮೇಲೆ ನಾಣ್ಯ ನಿಲ್ಲಿಸಿದರೆ ಫಲ ಸಿಗುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.

ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ ನಿರ್ಮಾಣ ಮಾಡಿ ಹೊರವಲಯದಲ್ಲೇ ವಾಹನಗಳನ್ನು ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಬ್ಯಾರಿಕೇಡ್‌ ಹಾಕಿ ಸಂಚಾರ ನಿಯಂತ್ರಣವನ್ನು ಪೊಲೀಸರು ಮಾಡಿಸುತ್ತಿದ್ದರು.

ಆರೋಗ್ಯ ಜಾಗೃತಿ: ಜಾತ್ರೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಜಾಗೃತಿ ಮೂಡಿಸಲಾಯಿತು. ಪರಿಸರ ಸ್ವಚ್ಛತೆ, ಆರೋಗ್ಯ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

ಸಿಹಿ ಪದಾರ್ಥ ಖರೀದಿ: ಜಾತ್ರೆಗೆ ಬಂದ ಭಕ್ತರು ಸಿಹಿ ಪದಾರ್ಥಗಳನ್ನು ಖರೀದಿ ಮಾಡುವುದು ಕಂಡು ಬಂತು. ಖಾರಾ, ಮಂಡಾಳು, ಸಿಹಿ ಖಾದ್ಯ, ಕಬ್ಬು ಮಾರಾಟ ಕಂಡು ಬಂತು. ದಾರಿಯುದ್ದಕ್ಕೂ ಕಬ್ಬಿನ ಹಾಲು ಮಾರಾಟ ಮಾಡುವುದು ಕಂಡು ಬಂತು. ಮಕ್ಕಳು ವಿವಿಧ ಆಟಿಕೆಗಳನ್ನು ಖರೀದಿ ಮಾಡಿದರು.

ಹರಿಕೆ ಹೊತ್ತ ಭಕ್ತರು ದೇವಸ್ಥಾನ ಸಮೀಪದ ಜಮೀನುಗಳಲ್ಲಿ ಹೋಳಿಗೆ ಪ್ರಸಾದ ತಯಾರಿಸುವುದು ಕಂಡು ಬಂತು.

***

ಭಂಡಾರ ಮಯವಾದ ಮೈಲಾ‍ಪುರ

ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಸಂಭ್ರಮ ಮನೆ ಮಾಡಿತ್ತು. ದೇವಸ್ಥಾನದಿಂದ ಹೊನ್ನಕೆರೆಯವರೆಗೆ ಭಂಡಾರಮಯವಾಗಿತ್ತು. ಎಲ್ಲಿ ನೋಡಿದರೂ ಭಂಡಾರ ಕಾಣಿಸುತ್ತಿತ್ತು. ಬೆಳಿಗ್ಗೆ 11 ಗಂಟೆಯಿಂದಲೇ ಪಲ್ಲಕ್ಕಿ ಉತ್ಸವಕ್ಕೆ ಸಿದ್ಧತೆ ನಡೆಯಿತು.

ಮಲ್ಲಯ್ಯನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ಭಕ್ತ ಸಮೂಹ ಗಂಗಾಸ್ನಾನಕ್ಕೆ ಹೊನ್ನಕೆರೆಗೆ ವಿವಿಧ ಸಂಗೀತ ವಾದ್ಯ ಮೇಳಗಳ ಜೊತೆಗೆ ಮೆರವಣಿಗೆಯಲ್ಲಿ ತೆರಳಿದರು.

ವಿವಿಧ ಕಡೆಯಿಂದ ಆಗಮಿಸಿದ ಭಕ್ತರು ಪಲ್ಲಕ್ಕಿ ಮೇಲೆ ಭಂಡಾರ ಎಸೆಯುವ ಮೂಲಕ ಭಕ್ತಿ ಪರಿಕಾಷ್ಠೆ ಮೆರೆದರು. ಅಲ್ಲದೇ ಉತ್ತುತ್ತಿ, ಬಾಳೆಹಣ್ಣು, ಶೇಂಗಾ, ಕಡಲೆ ಸೇರಿದಂತೆ ತಮ್ಮ ಜಮೀನಿನಲ್ಲಿ ಬೆಳೆದಿದ್ದ ವಿವಿಧ ಬೆಳೆಗಳ ತೆನೆ ತುಂಬಿದ ದಂಟುಗಳನ್ನು ಎಸೆದು, ತಮ್ಮ ಭಕ್ತಿ ಭಾವ ಮೆರೆದರು. ವಿವಿಧ ಬಣ್ಣದ ಕೊಡೆಗಳನ್ನು ಮಲ್ಲಯ್ಯ ಪಲ್ಲಕ್ಕಿ ಮೆರವಣಿಗೆ ವೇಳೆ ಎಸೆದು ಭಕ್ತಿ ಪ್ರದರ್ಶಿಸಿದರು.

ಅರ್ಧಗಂಟೆಗೂ ಹೆಚ್ಚು ಸಮಯ ಹೊನ್ನಕೆರೆಯಲ್ಲಿ ಮಲ್ಲಯ್ಯನಿಗೆ ವಿವಿಧ ಪೂಜಾ, ಕೈಂಕರ್ಯಗಳು ಮುಗಿದ ನಂತರ ನಂತರ ಡೊಳ್ಳು, ಹಲಗೆ ಸೇರಿದಂತೆ ವಿವಿಧ ವಾದ್ಯಗಳ ಮೂಲಕ ದೇವಸ್ಥಾನಕ್ಕೆ ಬಂದು ತಲುಪಿತು.

***

650 ಕುರಿಮರಿ ವಶ

ಮೈಲಾರಲಿಂಗೇಶ್ವರ ಪಲ್ಲಕ್ಕಿ ಮೇಲೆ ಕುರಿಮರಿ ಎಸೆಯುವ ಪದ್ಧತಿ ನಿಷೇಧಿಸಲಾಗಿದ್ದು, ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ 650 ಕುರಿಮರಿ ವಶಪಡಿಸಿಕೊಳ್ಳಲಾಗಿದೆ. ಇದು ₹14.57 ಲಕ್ಷ ಟೆಂಡರ್‌ ಮೂಲಕ ವಿಲೇವಾರಿ ಮಾಡಲಾಗಿದೆ.

ಪೊಲೀಸ್, ಕಂದಾಯ ಹಾಗೂ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು 8 ಚೆಕ್‌ಪೋಸ್ಟ್‌ಗಳಲ್ಲಿ ಕುರಿಮರಿಗಳನ್ನು ವಶಪಡಿಸಿಕೊಂಡಿದ್ದಾರೆ.

***

ಹಲವಾರು ವರ್ಷಗಳಿಂದ ಮೈಲಾರಲಿಂಗೇಶ್ವರ ಜಾತ್ರೆಗೆ ಆಗಮಿಸುತ್ತಿದ್ದೇನೆ. ಕೋವಿಡ್‌ ನಂತರ ಅದ್ಧೂರಿಯಾಗಿ ನಡೆದ ಜಾತ್ರೆ ಇದಾಗಿದೆ
ಮಲ್ಲಯ್ಯ ಪೂಜಾರಿ, ಭಕ್ತ

***

ಕುಟುಂಬ ಸಮೇತ ಜಾತ್ರೆಗೆ ಬಂದಿದ್ದು, ಹೊನ್ನಕೆರೆಯಲ್ಲಿ ಪುಣ್ಯ ಸ್ನಾನದ ನಂತರ ಹೋಳಿಗೆ ಪ್ರಸಾದ ತಯಾರು ಮಾಡಲಾಗಿದೆ. ಬಂಧು ಬಳಗದೊಂದಿಗೆ ಹಂಚಿಕೊಂಡು ಮೈಲಾರಲಿಂಗೇಶ್ವರನಿಗೆ ನಮಿಸುತ್ತೇವೆ
ಸುಮಂಗಲಾ ಬಸವರಾಜ, ಭಕ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT