ಯಾದಗಿರಿ: ನಗರಸಭೆಯಲ್ಲಿ 1,310 ಅಕ್ರಮ ಖಾತಾ ನಕಲು, ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ಪರಭಾರೆ ಮಾಡಿದ್ದ ಹಿಂದಿನ ಪೌರಾಯುಕ್ತ, ಸಿಬ್ಬಂದಿ ವಿರುದ್ಧ ಸರ್ಕಾರಕ್ಕೆ ದೂರು ಸಲ್ಲಿಸಿದ್ದ ಪೌರಾಯುಕ್ತ ಸಂಗಮೇಶ ಉಪಾಸೆ ಅವರನ್ನು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಕರ್ತವ್ಯದಿಂದ ಬಿಡುಗಡೆಗೊಳಿಸಿ ಮಂಗಳವಾರ ಆದೇಶಿಸಿದ್ದಾರೆ.
1,310 ಅಕ್ರಮ ಖಾತಾ ನಕಲು ಮಾಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಹಾಗೂ ₹4 ಕೋಟಿ ಮೌಲ್ಯದ ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ಪರಭಾರೆ ಮಾಡಲಾಗಿದೆ ಎಂದು ನಗರಸಭೆಯ ಹಿಂದಿನ ಪೌರಾಯುಕ್ತರ ಹಾಗೂ ಅಧಿಕಾರಿಗಳ ವಿರುದ್ಧ ಸಂಗಮೇಶ ಉಪಾಸೆ ಅವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.
ವೃಂದ ಮತ್ತು ನೇಮಕಾತಿ ನಿಯಮಾವಳಿಯ ಪ್ರಕಾರ ಯಾದಗಿರಿ ನಗರಸಭೆಗೆ ಪೌರಾಯುಕ್ತರು ಶ್ರೇಣಿ-2 ಹುದ್ದೆಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಆದರೆ, ಪ್ರಸ್ತುತ ಸಂಗಮೇಶ ಉಪಾಸೆ ಅವರು ವಾಣಿಜ್ಯ ತೆರಿಗೆ ಇಲಾಖೆಯವರಾಗಿದ್ದಾರೆ. ಅವರು ನೀಡಿರುವ ದೂರುಗಳನ್ನು ಈಗಾಗಲೇ ತನಿಖಾ ತಂಡಕ್ಕೆ ವಹಿಸಲಾಗಿದೆ. ದೂರುಗಳ ಕುರಿತು ನಿಷ್ಪಕ್ಷಪಾತವಾಗಿ ವಿಚಾರಣೆ ಮಾಡುವ ನಿಟ್ಟಿನಲ್ಲಿ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಸಂಗಮೇಶ ಉಪಾಸೆ ಅವರನ್ನು ಪೌರಾಯುಕ್ತರ ಹುದ್ದೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಹಿಂದಿನ ಪೌರಾಯುಕ್ತರಾಗಿದ್ದ ಶರಣಪ್ಪ, ಭೀಮಣ್ಣ ಟಿ. ನಾಯಕ, ಹಿಂದಿನ ಕಂದಾಯ ಅಧಿಕಾರಿಗಳಾದ ವಿಶ್ವಪ್ರತಾಪ ಅಲೆಗ್ಸಾಂಡರ್, ನರಸಿಂಹರೆಡ್ಡಿ, ಎಫ್‌ಡಿಎ ರಿಯಾಜುದ್ದೀನ್ ಇತರರು ಜಿಲ್ಲಾಧಿಕಾರಿಗೆ ಈ ಕುರಿತು ದೂರು ಸಲ್ಲಿಸಿರುವುದನ್ನೂ ಜಿಲ್ಲಾಧಿಕಾರಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.