ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಬೇಸಿಗೆ ಮುನ್ನವೇ ಮಾರುಕಟ್ಟೆಗೆ ಬಂದ ಮಡಕೆ

ರಾಜಸ್ಥಾನದಿಂದ ಅಲಂಕಾರಿಕ ಮಣ್ಣಿನ ಮಡಕೆಗಳು ಆಮದು, ಉತ್ತಮ ಮಾರಾಟದ ನಿರೀಕ್ಷೆ
Last Updated 23 ಜನವರಿ 2021, 2:24 IST
ಅಕ್ಷರ ಗಾತ್ರ

ಯಾದಗಿರಿ: ಬೇಸಿಗೆ ಕಾಲ ಆರಂಭವಾಗುವ ಮುನ್ನವೇ ನಗರದ ವಿವಿಧ ಕಡೆ ಮಣ್ಣಿನ ಮಡಕೆ ಮಾರುಕಟ್ಟೆಗೆ ಬಂದಿವೆ. ವಿವಿಧ ಗಾತ್ರದ ಮಣ್ಣಿನ ಮಡಕೆಗಳು ಕೆಂಪು, ಕಪ್ಪು ಬಣ್ಣದಲ್ಲಿ ಗ್ರಾಹಕರನ್ನು ಕೈ ಬಿಸಿ ಕರೆಯುತ್ತಿವೆ.

ನಗರದ ಚಿರಂಜೀವಿ ಶಾಲೆ ಎದುರಗಡೆ ಬಯಲು ಪ್ರದೇಶ, ಮೆಥೋಡಿಸ್ಟ್‌ ಚರ್ಚ್‌ ಮುಂಭಾಗದಲ್ಲಿ ಮಣ್ಣಿನ ಮಡಕೆಗಳನ್ನು ಕುಂಬಾರರು ಇಟ್ಟು ಮಾರಾಟದಲ್ಲಿ ತೊಡಗಿದ್ದಾರೆ.

ಜಿಲ್ಲೆಯಲ್ಲಿ ಬೆಳಿಗಿನ ಜಾವ ಮಾತ್ರ ಚಳಿಯ ಅನುಭವ ಆಗುತ್ತದೆ. ಮಧ್ಯಾಹ್ನ ಸೂರ್ಯ ನೆತ್ತಿಗೇರಿದರೆ ಬಿಸಿಲಿನ ಜಳ ಅನುಭವವಾಗುತ್ತದೆ. 32ರಿಂದ 33 ಡಿಗ್ರಿ ಸೆಲ್ಸಿಯಸ್‌ ತನಕ ಉಷ್ಣಾಂಶ ದಾಖಲಾಗುತ್ತಿದೆ. ಆದರೆ, ಇನ್ನೂ ಬೇಸಿಗೆ ಆರಂಭಕ್ಕೆ ಎರಡು ತಿಂಗಳು ಇದೆ. ಬಿಸಿಲು ಕಾಲ ಬರುವುದಕ್ಕಿಂತ ಮುಂಚೆ ಮಡಕೆ ವ್ಯಾಪಾರಿಗಳು ಬೀಡು ಬಿಟ್ಟಿದ್ದಾರೆ.

ಕೋವಿಡ್‌ನಿಂದ ಭಾರಿ ನಷ್ಟ: ಕಳೆದ 2020ರಲ್ಲಿ ಕೋವಿಡ್‌ ಕಾರಣದಿಂದ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಿಲಾಗಿತ್ತು. ಇದರಿಂದ ಕುಂಬಾರರು ಮಡಕೆ ತಯಾರಿಸಿದ್ದರೂ ಮಾರಾಟ ಮಾಡಲು ಆಗಿರಲಿಲ್ಲ. ಇದರಿಂದ ಹಾಕಿದ ಬಂಡವಾಳವೂ ಬಾರದೆ ಸಂಕಷ್ಟದಲ್ಲಿ ದಿನ ದೂಡಿದ್ದರು. ದೀಪಾವಳಿ ವೇಳೆಯೂ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಬಂದು ಹಣತೆ, ಮಡಕೆಗಳು ನೀರು ಪಾಲಾಗಿದ್ದವು. ಇದನ್ನು ಸರಿದೂಗಿಸಿಕೊಳ್ಳಲು ಮುಂಚಿತವಾಗಿ ಮಾರಾಟಕ್ಕೆ ಬಂದಿದ್ದಾರೆ.

‘ಈ ವರ್ಷ 2,000 ಮಣ್ಣಿನ ಮಡಕೆಗಳನ್ನು ತಯಾರಿಸಲಾಗಿದೆ. ಚಿರಂಜೀವಿ ಶಾಲೆ ಎದುಗಡೆ ಇರುವ ಖಾಲಿ ಜಾಗದಲ್ಲಿ ಯುಗಾದಿವರಗೆ ಇರುತ್ತವೆ. ಜಾಗ ಬದಲಿಸಿದೆ ಗ್ರಾಹಕರು ಬರುವುದಿಲ್ಲ. ಹೀಗಾಗಿ ಒಂದೇ ಕಡೆ ಇರುತ್ತೇವೆ’ ಎಂದು ವ್ಯಾಪಾರಿ ಶರಣಪ್ಪ ಕುಂಬಾರ ಹೇಳುತ್ತಾರೆ.

ಯಾವ್ಯಾವ ಮಡಿಕೆಗಳಿವೆ?: ಮಣ್ಣಿನಲ್ಲಿ ವಿವಿಧ ಗಾತ್ರದ ಮಡಕೆಗಳನ್ನು ತಯಾರಿಸಲಾಗಿದೆ. ರಂಜಣಿಗಿ₹ 250, ಕರಿ/ಕೆಂಪು ಮಡಕೆ ₹150, ಸಣ್ಣ ಗಾತ್ರದ ಮಡಕೆ ₹120, ಓಲೆ ₹80, ಸಾಮಾನ್ಯ ಮಡಕೆ ₹150 ರಿಂದ ₹ 350ರ ತನಕ ದರ ನಿಗದಿ ಮಾಡಿದ್ದಾರೆ.

ಮಣ್ಣಿನಿಂದ ತಯಾರಿಸಿದ ನೀರಿನ ಬಾಟಲಿ ₹180, ಮಡಕೆ ಫಿಲ್ಟರ್ ₹600, ವಿವಿಧ ಗಾತ್ರದ ರಾಜಸ್ತಾನದಿಂದ ತಂದಿರುವ ಮಡಕೆ ₹350 ರಿಂದ ₹550ರ ತನಕ ದರ ಇದೆ. ಇದರ ಜೊತೆಗೆ ಹೂಜಿ ₹60, ಸಣ್ಣ ಗಾತ್ರದ ಮಡಿಕೆಯಲ್ಲಿ ಮೂರು ವಿಧಗಳಿದ್ದು, ₹120ರಿಂದ ₹350 ದರಕ್ಕೆ ಮಾರಾಟ ಮಾಡುತ್ತಿದ್ದಾರೆ.

ಖರ್ಚು ತೆಗೆದು 1 ಲಕ್ಷ ಸಿಗುತ್ತದೆ: ‘ಮಡಕೆ, ಹಣತೆ, ಹೂಜಿ ಸೇರಿದಂತೆ ಇತರೆ ಮಣ್ಣಿನ ಪಾತ್ರೆಗಳನ್ನು ತಯಾರಿಸಲು 20ರಿಂದ 30 ದಿನ ಬೇಕಾಗುತ್ತದೆ. ಸಾಗಿಸುವ ವೇಳೆ ಕೆಲ ಮಣ್ಣಿನ ಪಾತ್ರೆಗಳು ಒಡೆದು ಹೋಗುತ್ತವೆ. ಆದರೂ ಒಂದು ಸಿಸನ್‌ಗೆ ₹80ರಿಂದ 1 ಲಕ್ಷ ಆದಾಯ ಗಳಿಸಬಹುದು’ ಎನ್ನುತ್ತಾರೆ ಮಡಕೆ ವ್ಯಾಪಾರಿ ಮಲ್ಲಿಕಾರ್ಜುನ ಬೊಮ್ಮಶೆಟ್ಟಹಳ್ಳಿ.

‘ಕೊರೊನಾ ಕಾರಣದಿಂದ ಕಳೆದ ವರ್ಷ ನಷ್ಟ ಆಗಿತ್ತು. ಈ ಬಾರಿ ಉತ್ತಮವಾಗಿ ವ್ಯಾಪಾರ ಆಗುವ ನಿರೀಕ್ಷೆ ಇದೆ. ಬಿರು ಬೇಸಿಗೆ ಇನ್ನೂ ಆರಂಭವಾಗದ ಕಾರಣ ವ್ಯಾಪಾರ ಇಲ್ಲ. ನಾಲ್ಕೈದು ಮಡಕೆ ಮಾರಾಟ ಮಾಡಿದ್ದೇವೆ’ ಎಂದು ಕುಂಬಾರರು ಹೇಳುತ್ತಾರೆ.

‘ಕಳೆದ ವರ್ಷದ ಮಡಿಕೆ ಮಾರಾಟವಾಗಿಲ್ಲ’
‘ಕೋವಿಡ್‌ ಕುಂಬಾರರ ಆದಾಯವನ್ನೇ ಕಸಿದಿದೆ. ಕಳೆದ ವರ್ಷ ಮಾರಾಟ ಮಾಡಲು ತಯಾರಿಸಿದ ಮಡಕೆಗಳು ಇನ್ನೂ ಮಾರಾಟ ಮಾಡಲು ಸಾಧ್ಯವಾಗಿಲ್ಲ. 2 ಲಕ್ಷದ ಸಾಮಗ್ರಿ ಹಾಗೇ ಉಳಿದಿದೆ’ ಎಂದು ವ್ಯಾಪಾರಿ ಮಲ್ಲಿಕಾರ್ಜುನ ಬೊಮ್ಮಶೆಟ್ಟಹಳ್ಳಿ ಹೇಳುತ್ತಾರೆ.

‘ಒಂದೇ ಕುಟುಂಬದ ನಾಲ್ಕು ಜನ ಇದ್ದೇವೆ. ಎಲ್ಲರೂ ಮಣ್ಣನ್ನು ನಂಬಿಕೊಂಡು ಕೆಲಸ ಮಾಡುತ್ತಿದ್ದೇವೆ. ಹೆಚ್ಚಾಗಿ ಸಗಟು ವ್ಯಾಪಾರ ಮಾಡುತ್ತೇವೆ. ರಾಯಚೂರು, ಕಲಬುರ್ಗಿ, ಹೈದರಾಬಾದ್, ಸೊಲ್ಲಾಪುರಗೆ ನಮ್ಮ ಭಾಗದ ಮಡಕೆ ಕಳಿಸಲಾಗುತ್ತದೆ’ ಎನ್ನುತ್ತಾರೆ ಅವರು.

‘ಅಲಂಕಾರಿಕ ಮಡಕೆಗಳನ್ನು ತರಲು ನಾಲ್ಕು ದಿನ ರಾಜಸ್ಥಾನಕ್ಕೆ ತೆರಳಿದ್ದೆ. ಅಲ್ಲಿನ ಕುಂಬಾರರನ್ನು ಪರಿಜಪತ್ತಿ ಎನ್ನುತ್ತಾರೆ. ಅಲ್ಲಿನ ಸರ್ಕಾರ ಅವರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿದ್ದಾರೆ. ಮಣ್ಣು ಸುಡಲು ಭಟ್ಟಿ, ಮಣ್ಣು ಹದ ಮಾಡುವ ಯಂತ್ರ, ಸಾಲ‌ ಸೌಲಭ್ಯ ಕೊಡುತ್ತಾರೆ. ಆದರೆ, ನಮ್ಮ ರಾಜ್ಯ ಸರ್ಕಾರ ಯಾವುದೇ ಪರಿಹಾರ ನೀಡಲಿಲ್ಲ’ ಎಂದು ಕುಂಬಾರರು ಅಳಲು ತೊಡಿಕೊಂಡರು.

***

ಅಲಂಕಾರಿಕ ಮಡಿಕೆ ಬಿಟ್ಟು ಉಳಿದೆಲ್ಲ ಮಡಕೆಗಳನ್ನು ಯಾದಗಿರಿ ತಾಲ್ಲೂಕಿನಲ್ಲಿ ಮುದ್ನಾಳದಲ್ಲಿ ತಯಾರಿಸುತ್ತೇವೆ. ಎರಡು ತಿಂಗಳು ಕಾಲ ಒಂದೇ ಕಡೆ ಮಾರಾಟ ಮಾಡುತ್ತೇವೆ.
-ಮಲ್ಲಿಕಾರ್ಜುನ ಬೊಮ್ಮಶೆಟ್ಟಹಳ್ಳಿ, ಮಡಕೆ ವ್ಯಾಪಾರಿ

***

ತೋಟದಲ್ಲಿ ಜಮೀನಿನ ಕೆಲಸ ನಡೆಯುತ್ತಿದ್ದು, ನೀರು ಕುಡಿಯುವ ಮಡಕೆತೆಗೆದುಕೊಂಡು ಹೋಗುತ್ತೇನೆ. ₹80ಗೆ ಒಂದು ಖರೀದಿ ಮಾಡಿದ್ದೇನೆ.
-ಶಿವಪ್ಪ ಶರಣಪ್ಪ, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT