ಗುರುವಾರ , ಮೇ 6, 2021
24 °C

ಕೆಂಭಾವಿ ವಲಯದಲ್ಲಿ ರೈತರ ನಿದ್ದೆಗೆಡಿಸಿದ ವಿದ್ಯುತ್ ಕಣ್ಣಾಮುಚ್ಚಾಲೆ

ಪವನ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಕೆಂಭಾವಿ: ಬೇಸಿಗೆ ಪ್ರಾರಂಭದಲ್ಲಿಯೇ ನಿತ್ಯ ಕಣ್ಣಾಮುಚ್ಚಾಲೆ ಆಡುತ್ತಿರುವ ವಿದ್ಯುತ್ ರೈತರ ನಿದ್ದೆಗೆಡಿಸುತ್ತಿದೆ.

ಕೆಂಭಾವಿ ಹೋಬಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾವಿರಾರು ರೈತರು ನೀರಾವರಿ ಅವಲಂಬಿಸಿ ಕೃಷಿ ನಡೆಸುತ್ತಿದ್ದಾರೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೇಸತ್ತಿದ್ದಾರೆ.

ನಿತ್ಯ ರೈತರಿಗೆ 7 ಗಂಟೆ ವಿದ್ಯುತ್ ಒದಗಿಸುವಂತೆ ಹಲವು ವರ್ಷಗಳಿಂದ ಈ ಭಾಗದ ರೈತರು ಹೋರಾಟ ಮಾಡುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ.

ಪದೆ ಪದೇ ವಿದ್ಯುತ್‍ ವ್ಯತ್ಯಯ ಉಂಟಾಗುತ್ತಿರುವುದರಿಂದ ಬೆಳೆಗಳು ಒಣಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಳೆದ ಒಂದು ತಿಂಗಳಿನಿಂದ ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಒಂದು ಸಮಯಕ್ಕೆ, ಮತ್ತೊಂದು ದಿನ ಮತ್ತೊಂದು ಸಮಯಕ್ಕೆ ವಿದ್ಯುತ್ ಬರುತ್ತದೆ. ಹೀಗಾಗಿ ಅದನ್ನೇ ಕಾದು ಕೂರುವ ಸ್ಥಿತಿ ಬಂದೊದಗಿದೆ ಎನ್ನುತ್ತಾರೆ ರೈತರು.

ಸಮಯಕ್ಕೆ ಸರಿಯಾಗಿ ವಿದ್ಯುತ್ ಬಾರದೆ ಇರುವುದರಿಂದ ದ್ರಾಕ್ಷಿ ಬೆಳೆ, ತರಕಾರಿ ಬೆಳೆಗಳು ಬಾಡುತ್ತಿವೆ.

ಮೋಟರ್ ಸುಟ್ಟು ಹೋಗುತ್ತಿವೆ: ಮುಂಚೆ ವಾರಕ್ಕೆ ನಿಗದಿತ ಸಮಯದಲ್ಲಿ ಸರಿಯಾಗಿ ವಿದ್ಯುತ್ ನೀಡಲಾಗುತ್ತಿತ್ತು. ಇದರಿಂದ ಮೋಟರ್‌ಗೆ ತೊಂದರೆಯಾಗುತ್ತಿರಲಿಲ್ಲ. ಆದರೆ, ಇತ್ತೀಚೆಗೆ ವಿದ್ಯುತ್‌ ತೆಗೆಯುವುದು, ಕೊಡುವುದು ಮಾಡುತ್ತಿರುವುದರಿಂದ ಹಳೆಯ ಮೋಟರ್‌ಗಳು ಸುಟ್ಟು ಹೋಗುತ್ತಿವೆ. ದುರಸ್ತಿ ಮಾಡಿಸುವುದಕ್ಕೆ ₹5 ರಿಂದ ₹10 ಸಾವಿರ ಖರ್ಚಾಗುತ್ತದೆ ಎನ್ನುವುದು ರೈತರ ಅಳಲು.

ರಾತ್ರಿಯಿಡೀ ಜಾಗರಣೆ: ಕಡಿಮೆ ನೀರು ಬರುವ, ಹೆಚ್ಚು ಬೆಳೆ ಬೆಳೆದಿರುವ ಹಲವು ರೈತರು ರಾತ್ರಿಯಿಡೀ ಜಾಗರಣೆ ಮಾಡುತ್ತಾ ವಿದ್ಯುತ್‌ಗಾಗಿ ಮನೆ ಹೊಲ ಬಳಿ ಸುತ್ತಾಡುವ ಪರಿಸ್ಥಿತಿ ನಿರ್ಮಾಣ ವಾಗುತ್ತಿದೆ ಎಂಬುದು ರೈತರ ದೂರು.

ಈ ಹಿಂದೆ ವಾರದಲ್ಲಿ ಯಾವ ಸಮಯಕ್ಕೆ ಬರುತ್ತಿತ್ತೋ ಅದೇ ಸಮಯಕ್ಕೆ ಇಡೀ ವಾರ ವಿದ್ಯುತ್ ಬರುತ್ತಿತ್ತು. ಆದರೆ, ಇತ್ತೀಚೆಗೆ ಸಮಯವೇ ನಿಗದಿ ಮಾಡುತ್ತಿಲ್ಲ. ಇದ ರಿಂದ ದಿನಪೂರ್ತಿ ಕೆಲಸ ಹಾಳಾಗುತ್ತಿದೆ.

ಇನ್ನು 15 ದಿನಗಳಲ್ಲಿ ಕಾಲುವೆಗೆ ನೀರು ಬಿಡುವುದನ್ನು ನಿಲ್ಲಿಸುತ್ತಾರೆ. ಆದ್ದರಿಂದ ಈಗಿರುವ ಸಮಯದಲ್ಲಿಯೇ ಬೆಳೆಗಳಿಗೆ ನೀರುಣಿಸಬೇಕು. ಇಲ್ಲದಿದ್ದರೆ ನೀರಿಲ್ಲದೆ ಬೆಳೆಗಳು ಒಣಗುತ್ತವೆ ಎಂದು ರೈತರು ಅಳಲು ತೋಡಿಕೊಂಡರು.

***

ಇಲ್ಲಿನ ರೈತರ ಬೇಡಿಕೆಗೆ ತಕ್ಕಂತೆ ವಿದ್ಯುತ್ ಒದಗಿಸಲು ಮೆಗಾವ್ಯಾಟ್ ಸಾಮರ್ಥ್ಯ ಕಡಿಮೆಯಿದೆ. ಈ ಬಗ್ಗೆ ಕೆಪಿಟಿಸಿಎಲ್ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
-ಶ್ರೀಶೈಲ್, ಶಾಖಾಧಿಕಾರಿ ಕೆಂಭಾವಿ

***

ಕೆಂಭಾವಿ ಶಾಖಾಧಿಕಾರಿಗಳ ಕಚೇರಿಗೆ ರೈತರೊಂದಿಗೆ ಮುತ್ತಿಗೆ ಹಾಕಿದಾಗ 7 ಗಂಟೆ ವಿದ್ಯುತ್ ನೀಡುತ್ತೇವೆ ಎಂದಿದ್ದರು. ಆದರೂ ವಿದ್ಯುತ್ ಕಣ್ಣಾಮುಚ್ಚಾಲೆ ನಿಂತಿಲ್ಲ.
-ಶರಣಗೌಡ ಗೂಗಲ್, ಜಿಲ್ಲಾ ಘಟಕ ಅಧ್ಯಕ್ಷ, ಆರ್‌ಕೆಎಸ್ ಯಾದಗಿರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು