ಶನಿವಾರ, ಅಕ್ಟೋಬರ್ 1, 2022
20 °C
ರಾಜ್ಯದಲ್ಲಿ ಹೊಸದಾಗಿ 237 ನೂತನ ವಿದ್ಯುತ್ ಉಪ ಕೇಂದ್ರ

29 ಸಾವಿರ ಮನೆಗಳಿಗೆ ‘ಬೆಳಕು’: ಸಚಿವ ಸುನೀಲ್‌ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ/ಶಹಾಪುರ: ‘ಬೆಳಕು ಯೋಜನೆಯಡಿ ವಿದ್ಯುತ್ ರಹಿತ 29 ಸಾವಿರ ಮನೆಗಳಿಗೆ ವಿದ್ಯುತ್ ನೀಡಲಾಗಿದೆ. ಇಂಧನ ಇಲಾಖೆ ಜನಸ್ನೇಹಿ ಕಾರ್ಯಕ್ರಮಗಳನ್ನು ರೂಪಿಸಿ, ಪ್ರಗತಿಯತ್ತ ಹೆಜ್ಜೆ ಹಾಕುತ್ತಿದೆ’ ಎಂದು ಇಂಧನ ಖಾತೆ ಸಚಿವ ವಿ. ಸುನೀಲ್ ಕುಮಾರ ತಿಳಿಸಿದರು.

ಯಾದಗಿರಿ ಮತಕ್ಷೇತ್ರ ವ್ಯಾಪ್ತಿಯ ಕೊಳ್ಳೂರು (ಎಂ) ಗ್ರಾಮದಲ್ಲಿ ನಿರ್ಮಾಣವಾಗಿರುವ 110/11 ಕೆ.ವಿ ವಿದ್ಯುತ್ ಉಪಕೇಂದ್ರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಾದ್ಯಂತ ಗುಣಮಟ್ಟದ ಮತ್ತು ನಿರಂತರ ವಿದ್ಯುತ್ ಒದಗಿಸಲು ಉಪವಿಭಾಗ ತೆರೆಯಲಾಗಿದೆ. ಅನೇಕ ಕಡೆ ಸಬ್ ಸ್ಟೇಷನ್ ನಿರ್ಮಾಣಗೊಂಡಿದ್ದು, ನಿರಂತರ ವಿದ್ಯುತ್ ಒದಗಿಸಲಾಗುತ್ತಿದೆ’ ಎಂದರು.

‘ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ನಾಳ ಮತ್ತು ಸಾರ್ವಜನಿಕ ಬೇಡಿಕೆಯಂತೆ ಈ ಭಾಗದಲ್ಲಿ ಈ ಉಪಕೇಂದ್ರ ಸ್ಥಾಪನೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಸಮರ್ಪಕ ಹಾಗೂ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ರಾಜ್ಯದಲ್ಲಿ ಹೊಸದಾಗಿ 237 ಕಡೆಗಳಲ್ಲಿ ನೂತನ ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಆದ್ಯತೆ ಮೇರೆಗೆ ಉಪಕೇಂದ್ರ ಸ್ಥಾಪನೆ ಕಾರ್ಯ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಮತ್ತು ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಒಂದು ವರ್ಷದ ಅವಧಿಯಲ್ಲಿ ಹಳ್ಳಿಗಳಲ್ಲಿ ಟಿಸಿ (ವಿದ್ಯುತ್ ವರ್ಧಕ) ಸುಟ್ಟ 24 ಗಂಟೆಯೊಳಗೆ ಬದಲಾವಣೆ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಿದೆ. ಇದರ ಫಲವಾಗಿ ನೌಕರರ ಸಹಕಾರದಿಂದ ಇಲ್ಲಿಯವರೆಗೂ 88 ಸಾವಿರ ಟಿಸಿ ಬದಲಾವಣೆ ಮಾಡಲಾಗಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ವಿದ್ಯುತ್ ನಿರ್ವಹಣೆಗೆ ವಿಶೇಷ ಯೋಜನೆ ಹಮ್ಮಿಕೊಂಡಿದ್ದು, ಕಲಬುರಗಿಯಲ್ಲಿ ಹಸಿರು ವಿದ್ಯುತ್ ಯೋಜನೆ ಅಡಿಯಲ್ಲಿ 500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಸೋಲಾರ್ ಪಾರ್ಕ್ ಸ್ಥಾಪನೆ ಮಾಡಲು ಈಗಾಗಲೇ ಸ್ಥಳ ಗುರುತಿಸಲಾಗಿದೆ’ ಎಂದು ವಿವರಿಸಿದರು.

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ವಡಗೇರಾ ತಾಲ್ಲೂಕಿಗೆ ವಿದ್ಯುತ್ ಉಪ ವಿಭಾಗ ಮಂಜೂರು ಮಾಡುವಂತೆ ಬೇಡಿಕೆಯಿಟ್ಟರು.

ಈ ವೇಳೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂದು ಪಾಟೀಲ, ಅಲೆಮಾರಿ, ಅರೆ ಅಲೆಮಾರಿ ನಿಗಮದ ಅಧ್ಯಕ್ಷ ದೇವೇಂದ್ರನಾಥ ನಾದ, ನಿಗಮ ಎಂಡಿ ರಾಹುಲ್,ಯಾದಗಿರಿ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮ್ಮ ಇದ್ದರು.

***

ಜೆಸ್ಕಾಂ ವಿಭಾಗೀಯ ಕಚೇರಿ ಕಟ್ಟಡ ಉದ್ಘಾಟನೆ

ಯಾದಗಿರಿ: ‘ಜಿಲ್ಲೆಯಲ್ಲಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ನಿರಂತರವಾದ ಮತ್ತು ಗುಣಮಟ್ಟದ ವಿದ್ಯುತ್‌ ಕೊಡಬೇಕು ಎನ್ನುವ ಕಾರಣಕ್ಕೆ 110 ಕೆವಿಯ 20 ಹೊಸ ಉಪಕೇಂದ್ರಗಳನ್ನು ಕೇವಲ ಯಾದಗಿರಿ ಜಿಲ್ಲೆಗೆ ಮಾಡುವುದರ ಮುಖಾಂತರ ಈ ಭಾಗದ ರೈತರ ಸಮಸ್ಯೆಗಳಿಗೆ ಕೊನೆಯಾಡುವ ಪ್ರಯತ್ನ ಮಾಡಿದ್ದೇವೆ’ ಎಂದು ಸಚಿವ ವಿ.ಸುನಿಲ್ ಕುಮಾರ ಹೇಳಿದರು.

ನಗರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಜೆಸ್ಕಾಂ ವಿಭಾಗೀಯ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಗರದಲ್ಲಿ ಸುಸಜ್ಜಿತ ವಿಭಾಗೀಯ ಕಟ್ಟಡವು ಅಧಿಕೃತವಾಗಿ ಉದ್ಘಾಟನೆಯಾಗಿದೆ. ಯುದ್ದೋಪಾದಿಯಲ್ಲಿ ಇಂಧನ ಇಲಾಖೆ ಪ್ರಗತಿ ಸಾಧಿಸುತ್ತಿದ್ದು, ಬೇಡಿಕೆಗೆ ತಕ್ಕಂತೆ ಇಲಾಖೆಯ ಕಾರ್ಯವನ್ನು ಇನ್ನಷ್ಟು ವೇಗಗೊಳಿಸುವ ಪ್ರಯತ್ನ ಮಾಡುತ್ತಿದೆ’ ಎಂದರು.

ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ‘ಹಳ್ಳಿಗಳಲ್ಲಿ ಟಿಸಿ (ವಿದ್ಯುತ್ ವರ್ಧಕ) ಸುಟ್ಟರೆ ಹೊಸದಾಗಿ ವಿತರಿಸಲು ಹಿಂದೆ ಬಹಳ ವಿಳಂಬವಾಗುತ್ತಿತ್ತು. ಆದರೆ, ಸಚಿವರು ಬಂದ ಮೇಲೆ 24 ಗಂಟೆಯೊಳಗೆ ಟಿಸಿ ಬದಲಾವಣೆ ಮಾಡುವ ಮೂಲಕ ರೈತರ ನೆರವಿಗೆ ಸಚಿವರು ಧಾವಿಸುತ್ತಿದ್ದಾರೆ. ಇದರಿಂದ ರೈತರಿಗೆ ಬಹಳಷ್ಟು ಲಾಭವಾಗಿದೆ’ ಎಂದರು.

ಕಾರ್ಯಕ್ರಮ ನಡೆಯುವ ವೇಳೆ ಮಳೆ ಸುರಿಯಿತು. ಸಚಿವರಿಗೆ ಕೊಡೆ ಹಿಡಿದುಕೊಂಡಿದ್ದು ಕಂಡು ಬಂತು.

ವಿಧಾನ ಪರಿಷತ್ತು ಸದಸ್ಯ ಬಾಬುರಾವ್ ಚಿಂಚನಸೂರು, ಅಲೆಮಾರಿ, ಅರೆ ಅಲೆಮಾರಿ ನಿಗಮದ ಅಧ್ಯಕ್ಷ ದೇವೇಂದ್ರನಾಥ ನಾದ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂದು ಪಾಟೀಲ, ಜೆಸ್ಕಾಂ ಎಂಡಿ ರಾಹುಲ್, ಯಾದಗಿರಿ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಯಾದಗಿರಿ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಇದ್ದರು.

***

ಸಚಿವರಿಗೆ ಇರಿಸು ಮುರುಸು

ನನ್ನನ್ನು ಅಭಿನಂದಿಸಲು ಬರುವವರು ಹಾರ– ತುರಾಯಿಗಳನ್ನು ತರುವುದು ಬೇಡ, ಏನಾದರೂ ಕೊಡಲೇಬೇಕು ಎಂದಿದ್ದರೆ, ಒಂದು ಕನ್ನಡ ಪುಸ್ತಕ ಖರೀದಿಸಿ ತಂದು ಕೊಡಿ’ ಎಂದು ಸಚಿವ ವಿ. ಸುನಿಲ್‌ ಕುಮಾರ ಹೇಳಿದ್ದರು. ಆದರೆ, ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಹಾರ, ತುರಾಯಿಗಳನ್ನು ಸ್ವೀಕರಿಸಿದ್ದು ಕಂಡು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಯಿತು. ಇದರ ಜೊತೆಗೆ ಸಚಿವರು ಇದರಿಂದ ಇರುಸುಮುರುಸುಕೊಂಡರು.

ವಿಧಾನ ಪರಿಷತ್ತು ಸದಸ್ಯ ಬಾಬುರಾವ್ ಚಿಂಚನಸೂರು ಅವರು ಸಚಿವರಿಗೆ ವಿಶೇಷ ವಸ್ತ್ರ, ಸಿಹಿ ನೀಡಿದ್ದು ವಿಶೇಷವೆನಿಸಿತು.

***

ಕಲಬುರಗಿಯಲ್ಲಿ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಸೋಲಾರ ಪಾರ್ಕ್ ಸ್ಥಾಪನೆ ಹಸಿರು ವಿದ್ಯುತ್ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗುವುದು

ವಿ.ಸುನೀಲ್ ಕುಮಾರ, ಇಂಧನ ಸಚಿವ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು