ಭಾನುವಾರ, ಅಕ್ಟೋಬರ್ 24, 2021
21 °C

ಗುರುಮಠಕಲ್: ದಬ್ ದಭಿ ಜಲಪಾತದಲ್ಲಿ ಮಹಿಳೆ ನೀರು ಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರುಮಠಕಲ್: ಇಲ್ಲಿನ ದಬ್ ದಭಿ ಜಲಪಾತದ ವೀಕ್ಷಣೆಗೆಂದು ಭಾನುವಾರ ಬಂದಿದ್ದ ಮಹಿಳೆಯೊಬ್ಬರು ನೀರಿನಲ್ಲಿ ಈಜಲೆಂದು ಇಳಿದಾಗ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ನಗರದ ನಿವಾಸಿ ಐಶ್ವರ್ಯಾ ಶರಣು (23) ಜಲಪಾತದ ಸೆಳೆತಕ್ಕೆ ಸಿಲುಕಿ ಮೃತಪಟ್ಟವರು.

ಚಿತ್ತಾಪುರ ನಗರದಿಂದ ಭಾನುವಾರ ಐಶ್ವರ್ಯಾ ಅವರ ಕುಟುಂಬ ಹಾಗೂ ನೆರೆ ಹೊರೆಯ ಏಳು ಜನರು ಭಾನುವಾರ ಜಲಪಾತದ ವೀಕ್ಷಣೆಗೆ ಬಂದಿದ್ದರು. ಜಲಪಾತದಲ್ಲಿ ಈಜಲೆಂದು ಇಳಿದಾಗ ನಾಲ್ವರು ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಇದನ್ನು ಕಂಡ ಸ್ಥಳೀಯರು ಬಂದು ಮೂವರನ್ನು ರಕ್ಷಿಸಿದ್ದು, ಐಶ್ವರ್ಯಾ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಸ್ಥಳದಲ್ಲಿದ್ದವರು ತಿಳಿಸಿದರು.

ಗುರುಮಠಕಲ್ ಪಿಐ ಖಾಜಾ ಹುಸೇನ್ ಅವರು ಸ್ಥಳಕ್ಕಾಗಮಿಸಿ ಮೃತ ದೇಹವನ್ನು ಹೊರತೆಗೆದರು. ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾವಿನ ಮನೆಯಾದ ಜಲಪಾತ: ಪ್ರಕೃತಿಯ ಸೊಬಗನ್ನು ನೋಡಲೆಂದು ಬರುವ ಪ್ರವಾಸಿಗರ ಪಾಲಿಗೆ ದಬ್ ದಭಿ ಜಲಪಾತವು ಸಾವಿನ ಮನೆಯಾಗಿ ಮಾರ್ಪಾಡಾಗುತ್ತಿದೆ. ಕಳೆದ ವರ್ಷದಿಂದ ಉತ್ತಮ ಮಳೆಯಾಗುತ್ತಿದ್ದು, ಜಲಪಾತದ ರಭಸ ಹೆಚ್ಚಳವಾಗಿದೆ. ಜಲಪಾತದ ಹತ್ತಿರಕ್ಕೆ ಬಂದವರಿಗೆ ನೀರಿಗಿಳಿಯುವ ಬಯಕೆ ಮೂಡುತ್ತದೆ. ಆದರೆ, ಧುಮ್ಮಿಕ್ಕುವ ನೀರಿನ ರಭಸದಿಂದಾಗಿ ಜಲಪಾತದ ಅಂಗಳದಲ್ಲಿನ ನೀರಿನ ಸೆಳೆತವೂ ಹೆಚ್ಚಿದ್ದು, ಈಜಲೆಂದು ಇಳಿದವರು ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ.

ಜಿಲ್ಲಾಡಳಿತಕ್ಕೆ ಶಾಪ: ಪ್ರವಾಸಿ ಕೇಂದ್ರವೊಂದು ಸಾವಿನ ಮನೆಯಾಗುತ್ತಿದೆ. ಜಲಪಾತವನ್ನು ಅಭಿವೃದ್ಧಿ ಪಡಿಸುತ್ತೇವೆ ಎನ್ನುವ ಮಾತುಗಳೆಲ್ಲಾ ಹುಸಿ ಭರವಸೆಗಳಾಗಿವೆ. ಕನಿಷ್ಠ ಜನತೆಯ ಪ್ರಾಣವನ್ನು ಉಳಿಸಲೆಂದು ಒಂದಿಷ್ಟು ಸೂಚನ, ಎಚ್ಚರಿಕೆಯ ಫಲಕಗಳನ್ನಾದರೂ ಅಳವಡಿಸುತ್ತಿಲ್ಲ. ಅಧಿಕಾರಿಗಳು ಜನರ ಪ್ರಾಣವೂ ತಮ್ಮ ಪ್ರಾಣದಂತೆ ಎಂದು ಅರಿತುಕೊಳ್ಳುವುದು ಯಾವಾಗ ಎಂದು ತಿಳಿಯುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು