ಸೋಮವಾರ, ಜುಲೈ 4, 2022
21 °C
ಸುರಪುರ ನಗರಸಭೆ ಸಭಾಂಗಣದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ಕಾರ್ಯಕ್ರಮ

ಬ್ಯಾಂಕ್‌ ಸಾಲ ಸೌಲಭ್ಯ ಪಡೆಯಿರಿ: ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಬೀದಿ ಬದಿ ವ್ಯಾಪಾರಿಗಳು ಕಡ್ಡಾಯವಾಗಿ ಬ್ಯಾಂಕ್ ಖಾತೆ ಮಾಡಿಸಬೇಕು. ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ನಗರಸಭೆಯವರು ಬ್ಯಾಂಕ್‍ಗೆ ಕಳುಹಿಸಿದಾಗ ಸಾಲ ಸಿಗುತ್ತದೆ. ತೆಗೆದುಕೊಂಡ ಸಾಲವನ್ನು ಸಕಾಲಕ್ಕೆ ಮರು ಪಾವತಿ ಮಾಡಬೇಕು’ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎನ್. ಸಿದ್ದೇಶ್ವರ ಹೇಳಿದರು.

ಇಲ್ಲಿಯ ನಗರಸಭೆ ಸಭಾಂಗಣದಲ್ಲಿ ದೀನ ದಿಯಾಳ ಅಂತ್ಯೋದಯ ಯೋಜನೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರ ಮದಲ್ಲಿ ಅವರು ಮಾತನಾಡಿದರು.

‘ಸಾಲದ ಬಹಳಷ್ಟು ಅರ್ಜಿಗಳು ಬ್ಯಾಂಕ್‍ಗಳಲ್ಲಿ ಬಾಕಿ ಇವೆ. ಅರ್ಜಿದಾರರೇ ಬರುತ್ತಿಲ್ಲ, ಸೂಕ್ತ ದಾಖಲೆಗಳನ್ನು ಕೊಡುತ್ತಿಲ್ಲ ಎಂದು ಬ್ಯಾಂಕ್‍ನವರು ಹೇಳುತ್ತಾರೆ. ಸೂಕ್ತ ದಾಖಲೆ ಇದ್ದರೆ ಸಾಲ ಸಿಗುತ್ತದೆ. ಸಾಲಕ್ಕೆ ಬಡ್ಡಿ ಫೈನಾನ್ಸ್‌ಗಳಲ್ಲಿ ಹೆಚ್ಚಿಗೆ, ಬ್ಯಾಂಕ್‍ಗಳಲ್ಲಿ ಕಡಿಮೆ ಇರುತ್ತದೆ. ಬ್ಯಾಂಕ್‍ಗಳಲ್ಲಿ ಪಡೆಯವ ಸಾಲದಿಂದ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ ಮಾತನಾಡಿ, ‘ಬೀದಿ ಬದಿಯ ವ್ಯಾಪಾರಿಗಳು ವ್ಯಾಪಾರದ ಜೊತೆಗೆ ತಮ್ಮ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ಆರೋಗ್ಯ ಇದ್ದರೆ ಎಲ್ಲವೂ ಸಾಧ್ಯ’ ಎಂದು ಹೇಳಿದರು.

‘ವ್ಯಾಪಾರಿಗಳು ತಾವು ಕುಳಿತು ವ್ಯಾಪಾರ ಮಾಡುವ ಸ್ಥಳಗಳಲ್ಲಿ ಸ್ವಚ್ಛತೆಗೆ ಒತ್ತು ಕೊಡಬೇಕು. ತಮ್ಮ ವ್ಯಾಪಾರದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಚೆಲ್ಲದೆ ನಗರಸಭೆಯ ವಾಹನಕ್ಕೆ ಹಾಕಬೇಕು. ನಗರಸಭೆಯಿಂದ ಸಿಗುವ ಸೌಲಭ್ಯಗಳನ್ನು ಸದ್ಭಳಿಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವಕೀಲ ವಿ.ಎಚ್. ನಾಯಕ ಕಾನೂನು ಸಲಹೆ ನೀಡಿ, ‘ಬೀದಿ ಬದಿ ವ್ಯಾಪಾರಿಗಳು ನಗರಸಭೆಯಲ್ಲಿ ತಮ್ಮ ಹೆಸರು ನೋಂದಾಯಿಸಿ ಗುರುತಿನ ಚೀಟಿ ಪಡೆದು ಅಲ್ಲಿಯ ಹಕ್ಕು ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ರಾಜ್ಯದಲ್ಲಿ ಸುಮಾರು 1.40 ಲಕ್ಷ ಬೀದಿ ಬದಿ ವ್ಯಾಪಾರಿಗಳು ನೋಂದಣಿ ಮಾಡಿಸಿ ಕೊಂಡಿರುತ್ತಾರೆ. ವ್ಯಾಪಾರಿಗಳು ಕಾರ್ಮಿಕ ಕಾರ್ಡ್ ಮಾಡಿಸಿದರೆ ಆರೋಗ್ಯ ವಿಮೆ, ಮಕ್ಕಳಿಗೆ 30 ವರ್ಷದವರೆಗೂ ಶಿಕ್ಷಣಕ್ಕೆ ಸಬ್ಸಿಡಿ ಸಿಗುತ್ತದೆ. ಸರ್ಕಾರದ ಅನೇಕ ಯೋಜನೆಗಳ ಲಾಭ ದೊರೆಯುತ್ತದೆ’ ಎಂದು ಹೇಳಿದರು.

ವಕೀಲ ಎಂ.ಎಸ್.ಹಿರೇಮಠ ಮತ್ತು ಸಂಪನ್ಮೂಲ ವ್ಯಕ್ತಿ ಶಿವಶಂಕರ ಗುಂಡಕನಳ್ಳಿ ಮಾತನಾಡಿದರು. ನಗರಸಭೆ ಸದಸ್ಯ ಮಾನಪ್ಪ ಚಳ್ಳಿಗಿಡ, ಎಇಇ ಶಾಂತಪ್ಪ ಹೂಸುರು, ವ್ಯವಸ್ಥಾಪಕ ಯಲ್ಲಪ್ಪನಾಯಕ ಡೊಣ್ಣಿಗೇರೆ, ಸಮುದಾಯ ಸಂಘಟಕರಾದ ತಿಪ್ಪಮ್ಮ ಬಿರಾದಾರ್, ಎಸ್‍ಬಿಐನ ಯಂಕಪ್ಪ ದೇವತ್ಕಲ್, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಜೀಂ ಬೆಳ್ಳಿಬತ್ತ ಇದ್ದರು. ದುರ್ಗಪ್ಪ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನೇಕ ವ್ಯಾಪಾರಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು