ಯಾದಗಿರಿ: ಈಡೇರದ ಕೈಗಾರಿಕಾ ವಲಯ ಭರವಸೆ

ಯಾದಗಿರಿ: ಮಹತ್ವಾಕಾಂಕ್ಷಿ ಜಿಲ್ಲೆಯಾದರೂ ಕೈಗಾರಿಕಾ ವಲಯ ಸ್ಥಾಪನೆಯಲ್ಲಿ ಹಿಂದುಳಿದೆ. ಇದರಿಂದ ಬೃಹತ್ ಉದ್ಯಮಗಳು ಇತ್ತ ಗಮನಹರಿಸದೆ ಇರುವುದರಿಂದ ಸ್ಥಳೀಯರು ಗುಳೆ ಹೋಗುವುದು ತಪ್ಪಿಲ್ಲ.
ಯಾದಗಿರಿ ಜಿಲ್ಲೆಯಾಗಿ 10 ವರ್ಷ ಕಳೆದರೂ ಕೈಗಾರಿಕೆಗಳು ಇಲ್ಲ ದಂತಾಗಿದೆ. ಸರ್ಕಾರದ ಆಶ್ವಾಸನೆಗಳಲ್ಲಿಯೇ ಜನರು ಸಮಾಧಾನ ಪಡುವಂತಾಗಿದೆ. ಜಿಲ್ಲೆಯ ಕಡೇಚೂರು– ಬಾಡಿಯಾಳ ಸಮೀಪದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ (ಕೆಐಎಡಿಬಿ) ಕೈಗಾರಿಕಾ ವಲಯಸ್ಥಾಪನೆ ಗಾಗಿ 3,284 ಎಕರೆ ಸ್ವಾಧೀನ ಮಾಡಿಕೊಳ್ಳಲಾಗಿದೆ. ಮೊದಲ ಹಂತ ದಲ್ಲಿ 1,590 ಎಕರೆ ಅಭಿವೃದ್ಧಿ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಇನ್ನುಳಿದ ಕಡೆ ಯಾವುದೇ ಅಭಿವೃದ್ಧಿ ಇಲ್ಲವಾಗಿದೆ.
ಹಂಚಿಕೆ ಮಾಡಿದ ವಿವರ: 38 ಫಾರ್ಮಾ, 3 ಟೈರ್ ಪ್ಯಾರೊಲಿಸಿಸ್ ಪ್ಲಾಂಟ್, 2 ಪ್ಲಾಸ್ಟಿಕ್ ಮತ್ತು ಯುಪಿವಿಸಿ ವಿಂಡೋ, ಫ್ಯಾಬ್ರಿಕೇಶನ್‌ಗಾಗಿ 1, ಫುಡ್ ಯುನಿಟ್‌ಗಾಗಿ 2, ಸಿಇಟಿಪಿಗಾಗಿ 6, ಬುರಿಯಲ್ ಗ್ರೌಂಡ್ 1 ಪ್ಲಾಂಟ್ ಹಂಚಿಕೆ ಮಾಡಲಾಗಿದೆ.
ಇದರಲ್ಲಿ ರೈಲ್ವೆ ಕೋಚ್ ಕಾರ್ಖಾನೆ ಕಾರ್ಯನಿರ್ವಹಣೆ ಮಾಡುತ್ತಿದೆ. ಇನ್ನುಳಿದ ಹಿಂದೂಸ್ತಾನ್ ಕೊಲಾ ಬೆವೆರ್‌ಗೆಸ್, ಎಂಫಿನೈಟ್ ಪ್ರೈ.ಲಿಮಿಟೆಡ್ ಕಾಮಗಾರಿ ನಿರ್ಹವಣೆ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ಶೇ 50ರಷ್ಟು ಮೂಲಸೌಕರ್ಯ ಕಲ್ಪಿಸಲಾಗಿದೆ. ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಕ್ಕಾಗಿ ಕಾಮಗಾರಿ ನಿರ್ವಹಿಸಲಾಗಿದೆ. ಹಲವಾರು ಉದ್ಯಮಗಳು ಬರಲಿವೆ’ ಎನ್ನುತ್ತಾರೆ ಜಿಲ್ಲಾ ಕೈಗಾರಿಕೆ ಸಂಸ್ಥೆ ಜಂಟಿ ನಿರ್ದೇಶಕ ಮಾಣಿಕ್ ವಿ.ರಘೋಜಿ.
‘ಹಿಂದುಳಿದ ಪ್ರದೇಶದಲ್ಲಿ ಸ್ವಯಂ ಉದ್ಯೋಗ ಮಾಡಲು ಯುವಕರು ಸಿದ್ಧರಿದ್ದರೂ ಬ್ಯಾಂಕುಗಳು ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಉದ್ದಿಮೆ ಇಲ್ಲದ ಕಾರಣಕ್ಕೆ ಉದ್ಯೋಗವಿಲ್ಲ. ಉದ್ಯೋಗವಿಲ್ಲದೇ ಜನ ಗುಳೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಕೈಗಾರಿಕೆಗಳ ಸ್ಥಾಪನೆಯೊಂದೆ ಪರಿಹಾರವಾಗಿದೆ’ ಎನ್ನುವುದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ ಅಭಿಪ್ರಾಯ.
***
ಕೈಗಾರಿಕಾ ವಲಯದಲ್ಲಿ ಈಗಾಗಲೇ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಕೆಲವು ಕಾರ್ಖಾನೆಗಳು ಬಂದಿವೆ. ಮತ್ತಷ್ಟು ಆಹ್ವಾನಿಸಲು ಪ್ರಯತ್ನ ಸಾಗಿದೆ
- ಮಾಣಿಕ್ ವಿ.ರಘೋಜಿ, ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕೆ ಸಂಸ್ಥೆ
***
ಕೈಗಾರಿಕಾ ವಲಯದಲ್ಲಿ ಈಗಾಗಲೇ 2 ಫಾರ್ಮಾ ಕಂಪನಿಗಳು ಬಂದಿವೆ. ಬೃಹತ್ ಕೈಗಾರಿಕೆಗಳಲ್ಲಿ ಮಾತ್ರ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬಹುದು
-ರೇಖಾ, ಸಹಾಯಕ ನಿರ್ದೇಶಕಿ, ಜಿಲ್ಲಾ ಕೈಗಾರಿಕೆ ಸಂಸ್ಥೆ
***
ಜಿಲ್ಲೆಯಾಗಿ 10 ವರ್ಷ ಕಳೆದರೂ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಕೈಗಾರಿಕೆ ಸ್ಥಾಪಿಸದೆ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ
- ಟಿ.ಎನ್. ಭೀಮುನಾಯಕ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ
***
ಕೈಗಾರಿಕಾ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗಕ್ಕೆ ಅವಕಾಶ ನೀಡಬೇಕು. ರಾಸಾಯನಿಕ ಕಾರ್ಖಾನೆಗಳು ಹೆಚ್ಚು ಬಂದಿದ್ದರಿಂದ ಮುಂದಾಗುವ ತೊಂದರೆ ತಪ್ಪಿಸಬೇಕು
-ನರಸಿಂಹ ಮಂಚನಗೌಡ, ಕಡೇಚೂರು ಗ್ರಾಮಸ್ಥ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.