ಮಂಗಳವಾರ, ಡಿಸೆಂಬರ್ 10, 2019
19 °C
557ನೇ ಸೈಯದ್ ಶಾ ಯಕೂಬ್‌ ಬುಖಾರಿ ಖಾದ್ರಿ ಉರೂಸ್‌

ಯಾದಗಿರಿ | ಹಿಂದೂ-ಮುಸ್ಲಿಂ ಭಾವೈಕ್ಯದ ಉರೂಸ್

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

ಯಾದಗಿರಿ: ಹಿಂದೂ-ಮುಸ್ಲಿಂ ಭಾವೈಕ್ಯದ 557ನೇ ಉರೂಸ್‌ ಬುಧವಾರದಿಂದ ನಗರದಲ್ಲಿ ಆರಂಭವಾಗಲಿದೆ. ಸೈಯದ್ ಶಾ ಯಕೂಬ್‌ ಬುಖಾರಿ ಖಾದ್ರಿ ಹೆಸರಿನಲ್ಲಿ ನಡೆಯುವ ಉರೂಸ್‌ಗೆ ಒಂದೂವರೆ ಶತಮಾನದ ಇತಿಹಾಸವಿದೆ‌. ನೂರಾರು ವರ್ಷಗಳಿಂದ ಹಿಂದೂ–ಮುಸ್ಲಿಮರು ಕೂಡಿಕೊಂಡು ಆಚರಿಸುವ ಭಾವೈಕ್ಯತೆ ಉರೂಸ್‌ ಇದಾಗಿದೆ.

ನಗರಸಭೆ ಪಕ್ಕದಲ್ಲಿರುವ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಗಳು ಈಗಾಗಲೇ ಆರಂಭಗೊಂಡಿವೆ. ಉರೂಸ್‌ನ ವಿಶೇಷವೆಂದರೆ ಹಿಂದೂಗಳೇ ಉರೂಸ್‌ ನಡೆಸಲು ಮುಂದಡಿ ಇಡುವ ಮೂಲಕ ಧಾರ್ಮಿಕ ವಿಧಿ ವಿಧಾನಗಳ ಆರಂಭಕ್ಕೆ ಮುನ್ನುಡಿ ಇಡುತ್ತಾರೆ. ಬೇಧ ಭಾವಗಳು ಇಲ್ಲಿ ನುಸುಳಲು ಅವಕಾಶಗಳೇ ಇಲ್ಲ. ಸಾಮರಸ್ಯದ ಸಂದೇಶ ಸಾರಲು ಇದಕ್ಕಿಂತ ಮಿಗಿಲಾದ ನಿದರ್ಶನಗಳು ಬೇಕಿಲ್ಲ.

ಜೆಲಾ ಎನ್ನುವ ಕಾರ್ಯಕ್ರಮ (ಅಂಕುರಾರ್ಪಣೆ) ಹಿಂದೂಗಳೆ ನೂರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. 15 ದಿನದ ಹಿಂದೆ ಜೆಲಾ ಕಾರ್ಯಕ್ರಮವನ್ನು ನಡೆಸಲಾಗಿದೆ. ಜೆಲಾ ಕಾರ್ಯಕ್ರಮದ ನಂತರವೇ ದರ್ಗಾಕ್ಕೆ ಸುಣ್ಣ ಬಣ್ಣ ಬಳಿಯುವ ಕೆಲಸ ಆರಂಭವಾಗಿದೆ. ಇದು ಹಿಂದೂಗಳ ಮುಂದೆ ನಿಂತು ಆಚರಿಸುವ ಉರೂಸ್‌ ಆಗಿದೆ.

ಒಂದೂವರೆ ಶತಮಾನದ ಇತಿಹಾಸ: ಸೈಯದ್ ಶಾ ಯಕೂಬ್‌ ಬುಖಾರಿ ಖಾದ್ರಿ ಉರೂಸ್‌ 557 ವರ್ಷಗಳ ಇತಿಹಾಸ ಹೊಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಅತಿ ದೊಡ್ಡ ಉರೂಸ್‌ ಎನ್ನುವ ಖ್ಯಾತಿಯೂ ಗಳಿಸಿದೆ.

ತಜಕಿಸ್ತಾನದ ಬುಕಾರ ಪಟ್ಟಣದಿಂದ ಸೈಯದ್ ಶಾ ಯಕೂಬ್‌ ಬುಖಾರಿ ಖಾದ್ರಿ ಇಲ್ಲಿಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿಂದ ಶಾಂತಿ ಸಂದೇಶ ಸಾರುತ್ತಾ ಯಾದಗಿರಿಯಲ್ಲಿ ಬಂದು ನೆಲೆಸಿ ಮರಣ ಹೊಂದಿದ್ದರು. ಅವರು ಶಾಂತಿ ಮಾರ್ಗದಲ್ಲಿ ನಡೆಯುವಂತೆ ಜನರಿಗೆ ಸಲಹೆ ನೀಡುತ್ತಿದ್ದರು. 

ನವೆಂಬರ್ 13ರ ಗಂಧದ ದಿನ ಚಕ್ರಕಟ್ಟಾ ಬಳಿಯಿಂದ ದರ್ಗಾದವರೆಗೆ ಮೆರವಣಿಗೆ ನಡೆಯಲಿದೆ. ಹಿಂದೂಗಳು ದೀವಟಿಗೆ ತೆಗೆದುಕೊಂಡು ದರ್ಗಾಕ್ಕೆ ಬರುತ್ತಾರೆ. ಅಲ್ಲಿಗೆ ಬಂದು ಹರಕೆ ತೀರಿಸುತ್ತಾರೆ ಮತ್ತು ವಿಜ್ಞಾಪನೆ ಮಾಡಿಕೊಳ್ಳುತ್ತಾರೆ. ವಾಲ್ಮಿಕಿ ಸಮಾಜದವರು ಹರಕೆ ತೀರಿಸಲು ತಮ್ಮ ಮನೆಯಿಂದ ದರ್ಗಾದವರೆಗೆ ಉರುಳು ಸೇವೆ ಮಾಡುತ್ತಾರೆ. ಇದು ಎಲ್ಲ ಸಮುದಾಯವರು ಸೇರಿ ಮಾಡುವ ವಿಶಿಷ್ಟ ಆಚರಣೆಯಾಗಿದೆ. 

ಹರಕೆ ತೀರಿಸುವ ಭಕ್ತ ಸಮುದಾಯ: ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹೊತ್ತುಕೊಳ್ಳುವ ಹರಕೆಗಳನ್ನು ಉರೂಸ್‍ನ ದಿನದಂದು ತಂದೊಪ್ಪಿಸುತ್ತಾರೆ. 

ಸಂತಾನಕ್ಕಾಗಿ ಪ್ರಾರ್ಥನೆ: ಮಕ್ಕಳು ಆಗದ ದಂಪತಿ ಇಲ್ಲಿಗೆ ಬಂದು ಬೇಡಿಕೊಂಡರೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಸಂತಾನ ಕರುಣಿಸಲು ಪ್ರಾರ್ಥನೆ ಸಲ್ಲಿಸುತ್ತಾರೆ. ಅಲ್ಲದೆ ತಮ್ಮ ಮಕ್ಕಳಿಗೆ ಹಿಂದೂಗಳು ಕೂಡ ಯಕೂಬ್‌ ಎಂದು ಹೆಸರು ಇಟ್ಟಿದ್ದಾರೆ. ನಗರದಲ್ಲಿ ಬುಖಾರಿ ಮೊಹಲ್ಲಾ, ಚೌಕ್, ಮಸೀದಿಗಳಿವೆ. ಅಷ್ಟರ ಮಟ್ಟಿಗೆ ಇಲ್ಲಿ ಯಕೂಬ್‌ ಬುಖಾರಿಯವರ ಸ್ಮರಣೆ ನಡೆಯುತ್ತಿದೆ. 

‘ಇಲ್ಲಿ ಯಾವುದೇ ಭೇದವಿಲ್ಲದೆ ಆಚರಣೆ ಮಾಡಲಾಗುತ್ತಿದೆ. ಎಲ್ಲರೂ ಒಟ್ಟಾಗಿ ಸೇರುವ ಮೂಲಕ ಉರೂಸ್ ಆಚರಣೆ ಮಾಡಲಾಗುತ್ತಿದೆ’ ಎಂದು ಜೆಲಾ ಸಮಿತಿ ಸದಸ್ಯ ಕಾಶಿನಾಥ ಹೇಳುತ್ತಾರೆ’

ಇಷ್ಟಾರ್ಥ ಸಿದ್ಧಿ

ಸೈಯದ್ ಶಾ ಯಕೂಬ್‌ ಬುಕಾರಿ ಖಾದ್ರಿ ಹೆಸರಿನಲ್ಲಿ ಬೇಡಿಕೊಂಡರೆ ಭಕ್ತರ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಹಿಂದೂ ಮುಸ್ಲಿಮರು ಸೇರಿ ಉರೂಸ್‌ ಆಚರಿಸುತ್ತೇವೆ ಎನ್ನುತ್ತಾರೆ ವಕ್ಪ್‌ ಸಮಿತಿ ಉಪಾಧ್ಯಕ್ಷ ಜಿಲಾಮ ಜೀಲಾನಿ ಆಫ್ಘನ್.

ಭಾವೈಕ್ಯದ ಉರುಸ್

ಯಾದಗಿರಿಯಲ್ಲಿ ನಡೆಯವ ದೊಡ್ಡ ಉರೂಸ್ ಇದಾಗಿದೆ. ರಾಜ್ಯದ ವಿವಿಧ ಕಡೆಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇದೊಂದು ಭಾವೈಕ್ಯದ ಉರೂಸ್ ಆಗಿದೆ ಎನ್ನುತ್ತಾರೆ ದರ್ಗಾ ಸಮಿತಿ ಸದಸ್ಯ ಇನಾಯತ್ ಉರ್ ರೆಹಮಾನ್.

ಒಗ್ಗೂಡಿ ಆಚರಣೆ

ಧಾರ್ಮಿಕ ಸಹಿಷ್ಣತೆಗೆ ಹೆಸರುವಾಸಿಯಾದ ಬುಖಾರಿ ದರ್ಗಾ ಇಂದಿಗೂ ಹಿಂದೂ ಮುಸ್ಲಿಂ ಎನ್ನುವ ಬೇಧಭಾವವಿಲ್ಲ. ಎಲ್ಲರೂ ಒಟ್ಟಿಗೆ ಸೇರಿ ಉರೂಸ್ ಆಚರಣೆ ಮಾಡುತ್ತಿದ್ದೇವೆ ಎನ್ನುತ್ತಾರೆ ನಗರಸಭೆ ಸದಸ್ಯ ವೆಂಕಟರೆಡ್ಡಿ ಗೌಡ ವನಕೇರಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು