ಬುಧವಾರ, ಜೂನ್ 29, 2022
26 °C

ಬಿತ್ತನೆಗೆ ಅಧಿಕೃತ ಬೀಜ, ರಸಗೊಬ್ಬರ ಬಳಸಿ: ಕೃಷಿ ಅಧಿಕಾರಿ ಮೇನಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೈದಾಪುರ: ಮುಂಗಾರು ಬಿತ್ತನೆಗೆ ರೈತರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಬಿತ್ತನೆ ಸಮಯದಲ್ಲಿ ಅಧಿಕೃತ ಪರವಾನಗಿ ಹೊಂದಿದ ಮಾರಾಟಗಾರರಿಂದ ಬೀಜ ಪಡೆದು ಬಿತ್ತನೆ ಮಾಡಿ ಎಂದು ಕೃಷಿ ಅಧಿಕಾರಿ ಮೇನಕಾ ಸಲಹೆ ನೀಡಿದ್ದಾರೆ.

ಪಟ್ಟಣದ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ 20 ಸಾವಿರ ಹೆಕ್ಟೇರ್‌ ಭೂ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಈ ಬಾರಿ ಮುಂಗಾರು ಮಳೆಯು ವಾಡಿಕೆಯಷ್ಟು ಸುರಿಯಲಿದೆ ಹಾಗೂ 4 ದಿನಗಳು ಮೊದಲೇ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆಯೂ ಮುನ್ಸೂಚನೆ ನೀಡಿದೆ. ಅದರಂತೆ ಬಿತ್ತನೆ ಬೀಜ ಖರೀದಿಸುವಾಗ ರೈತರು ತಪ್ಪದೇ ಅಧಿಕೃತ ರಸೀದಿ ಪಡೆಯಬೇಕು. ರಸೀದಿಯಲ್ಲಿ ಲಾಟ್ ನಂಬರ್, ಚೀಲದ ಮೇಲೆ ಉತ್ಪಾದಕರು ಹಾಗೂ ಮಾರಾಟಗಾರರ ವಿಳಾಸವನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ದೃಢಿಕರಿಸಲಾಗಿದಿಯೇ? ಬೀಜ ಮೊಳಕೆ ಪ್ರಮಾಣ ಮತ್ತು ಬೀಜವನ್ನು ಕೀಟನಾಶಕಗಳಿಂದ ಉಪಚಾರ ಮಾಡಲಾಗಿದಿಯೇ, ಬೀಜ ಉತ್ಪಾದನಾ ದಿನಾಂಕ ಮತ್ತು ಬಾಳಿಕೆ ಅವಧಿಯನ್ನು ನಮೂದಿಸಲಾಗಿದೆಯೇ ಎಂಬುದನ್ನು ಗಮನಿಸಬೇಕು.

ಇನ್ನು ಒಂದು ವಾರದೊಳಗೆ ಮುಂಗಾರು ಬಿತ್ತನೆಗೆ ಬೇಕಾಗುವ ಹೆಸರು, ತೊಗರಿ ಮತ್ತು ಭತ್ತದ ಬೀಜಗಳನ್ನು ಶೇಖರಿಸಲಾಗುವುದು. ಬಿತ್ತನೆ ಬೀಜಗಳನ್ನು ಪಡೆಯಲು ಇಚ್ಚಿಸುವ ರೈತರು ಕಡ್ಡಾಯವಾಗಿ ಕೆ ಕಿಸಾನ್ ಅಂತರ್ಜಾಲ ತಾಣದಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು.

ಕೆಲ ಅನುಮೋದನೆ ಹೊಂದಿರದ ಸಸ್ಯನಾಶ ಸಹಿಷ್ಣು ಎಚ್-ಟಿ ಹತ್ತಿ ಬೀಜಗಳು ಅನಧಿಕೃತವಾಗಿ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದು ಅಂತಹ ಬೀಜವನ್ನು ರೈತರು ಖರೀದಿಸಬಾರದು. ಅನಧಿಕೃತ ರಸಗೊಬ್ಬರ, ಕೀಟನಾಶಕ ಮಾರಾಟ ಮಾಡುವುದು ಕಂಡು ಬಂದಲ್ಲಿ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು