ಬುಧವಾರ, ಆಗಸ್ಟ್ 10, 2022
24 °C
ಒಬ್ಬೊಬ್ಬರಿಗೆ ಎರಡ್ಮೂರು ಹುದ್ದೆ ಪ್ರಭಾರ, ಚಟುವಟಿಕೆಗಳಿಗೆ ಹಿನ್ನಡೆ

ಯಾದಗಿರಿ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಭರ್ತಿಗಿಂತ ಖಾಲಿ ಹುದ್ದೆಗಳೇ ಜಾಸ್ತಿ!

ಬಿ.ಜಿ.‍ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೃಷಿ ಇಲಾಖೆಯಲ್ಲಿ 167 ಮಂಜೂರಿ ಹುದ್ದೆಗಳಿದ್ದು, ಭರ್ತಿ ಹುದ್ದೆಗಳಿಗಿಂತ ಖಾಲಿ ಸ್ಥಾನಗಳೇ ಜಾಸ್ತಿ ಇವೆ. ಇದರಿಂದ ಕೆಲವು ಅಧಿಕಾರಿಗಳ ಮೇಲೆ ಅಧಿಕ ಭಾರ ಬಿದ್ದಿದ್ದು, ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.

167 ಹುದ್ದೆಗಳಲ್ಲಿ 80 ಭರ್ತಿಯಾಗಿದ್ದು, 87 ಹುದ್ದೆಗಳು ಖಾಲಿ ಇವೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ ಪಾತ್ರ ಪ್ರಮುಖವಾಗಿದೆ. ಕೃಷಿ ಅಭಿಯಾನ, ಜಾಗೃತಿ ಕಾರ್ಯಕ್ರಮಗಳು, ಬಿತ್ತನೆ ಬೀಜ ವಿತರಣೆ, ರಸಗೊಬ್ಬರ ಪೂರೈಕೆ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಇರುತ್ತವೆ. ಆದರೆ, ಆ ಕಾರ್ಯಕ್ರಮ ರೂಪಿಸಲು ಜಿಲ್ಲೆಯಲ್ಲಿ ಅಧಿಕಾರಿ, ಸಿಬ್ಬಂದಿ ಕೊರತೆ ಇದೆ.

6 ತಾಲ್ಲೂಕು, 16 ಹೋಬಳಿಗಳಿದ್ದು, ಹುದ್ದೆಗಳು ಖಾಲಿ ಇರುವುದರಿಂದ ಕೃಷಿ ಇಲಾಖೆಯಲ್ಲಿ ಕಾರ್ಯಕ್ರಮಗಳು ಆನುಷ್ಠಾನಕ್ಕೆ ತರಲು ಕಷ್ಟಸಾಧ್ಯವಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳೆ ಹೇಳುವ ಮಾತಾಗಿದೆ.

ಜಿಲ್ಲೆಯಲ್ಲಿ ಕಂದಾಯ ವಿಭಾಗದಲ್ಲಿ 6 ತಾಲ್ಲೂಕುಗಳಿದ್ದರೂ ಕೃಷಿ ಇಲಾಖೆಯಲ್ಲಿ ಇನ್ನೂ ವಿಕೇಂದ್ರೀಕರಣ ಆಗಿಲ್ಲ. ಇದರಿಂದ ಯಾದಗಿರಿ–ಗುರುಮಠಕಲ್‌, ಶಹಾಪುರ–ವಡಗೇರಾ, ಸುರಪುರ–ಹುಣಸಗಿ ತಾಲ್ಲೂಕುಗಳನ್ನು ಒಂದೇ ತಾಲ್ಲೂಕಾಗಿ ಪರಿಗಣಿಸಲಾಗಿದೆ. ಇದರಿಂದ ಹಳೆ ತಾಲ್ಲೂಕು ಲೆಕ್ಕದಲ್ಲಿ ಮಾತ್ರ ಪರಿಗಣನೆ ಮಾಡಲಾಗಿದೆ.

ಸಹಾಯಕ ಕೃಷಿ ಅಧಿಕಾರಿಗಳ ವಿವರ: ಯಾದಗಿರಿ ತಾಲ್ಲೂಕಿನಲ್ಲಿ 16 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ ಮಂಜೂರಾಗಿದ್ದು, ಐದು ಮಾತ್ರ ಭರ್ತಿಯಾಗಿವೆ. 11 ಖಾಲಿ ಇವೆ. ಸುರಪುರ ತಾಲ್ಲೂಕಿನ 20 ಹುದ್ದೆಗಳಲ್ಲಿ 4 ಭರ್ತಿಯಾಗಿದ್ದು, 16 ಖಾಲಿ ಇವೆ. ಶಹಾಪುರ ತಾಲ್ಲೂಕಿನಲ್ಲಿ 15 ಹುದ್ದೆಗಳಿದ್ದು, 4 ಭರ್ತಿಯಾಗಿವೆ. 11 ಖಾಲಿ ಇವೆ.

ಹಿರಿಯ ವಾಹನ ಚಾಲಕರು ಹುದ್ದೆಗಳು 7 ಮಂಜೂರಾಗಿದ್ದು, ಅಷ್ಟು ಹುದ್ದೆಗಳು ಖಾಲಿ ಇವೆ. ಶೀಘ್ರಲಿಪಿಗಾರರು ಹುದ್ದೆಯೂ ಖಾಲಿ ಇವೆ. ಜಂಟಿ ಕೃಷಿ ನಿರ್ದೇಶಕ ಕಚೇರಿಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಹುದ್ದೆ 5 ಮಂಜೂರಾಗಿದ್ದರೂ ಐದು ಹುದ್ದೆಗಳು ಖಾಲಿ ಇವೆ.

ಒಬ್ಬೊಬ್ಬರಿಗೆ ಎರಡ್ಮೂರು ಹುದ್ದೆ: ಕೃಷಿ ಇಲಾಖೆಯಲ್ಲಿ ಅಧಿಕಾರಿ, ಸಿಬ್ಬಂದಿ ಕೊರತೆ ಇರುವುದರಿಂದ ಒಬ್ಬೊಬ್ಬರಿಗೆ ಎರಡ್ಮೂರು ಹುದ್ದೆಗಳ ಪ್ರಭಾರವನ್ನು ವಹಿಸಲಾಗಿದೆ. ಇದರಿಂದ ಸಮರ್ಪಕ ಕೆಲಸಗಳು ಆಗುತ್ತಿಲ್ಲ ಎನ್ನುವ ಆರೋಪಗಳಿವೆ.

ಸಹಾಯಕ ಕೃಷಿ ಅಧಿಕಾರಿಗಳ ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಿದ್ದರೂ ಇನ್ನೂ ಭರ್ತಿಯಾಗದಿರುವುದು ತಲೆನೋವಿಗೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಈಗ ಮುಂಗಾರು ಬಿತ್ತನೆ ಆರಂಭವಾಗಿದ್ದು, ಕಳೆಪೆ ಬಿತ್ತನೆ ಬೀಜ, ಕಳಪೆ ರಸಗೊಬ್ಬರ ತಾಂಡವವಾಡುತ್ತಿದೆ. ಅಲ್ಲಲ್ಲಿ ಕಳಪೆ ಬೀಜ ಪ್ರಕರಣಗಳು ಪತ್ತೆಯಾಗುತ್ತಿ. ಈಗಾಗಲೇ ಶಹಾಪುರ ತಾಲ್ಲೂಕಿನಲ್ಲಿ ಕಳಪೆ ಹತ್ತಿ ಬೀಜ ಮಾರಾಟ ಮಾಡುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಕಲಿ ರಸಗೊಬ್ಬರ ಸಂಬಂಧಿಸಿದಂತೆ ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಕೃಷಿ ಇಲಾಖೆ ಅಧಿಕಾರಿಗಳ ಹುದ್ದೆಗಳು ಖಾಲಿ ಇರುವುದರಿಂದ ಅಧಿಕಾರಿಗಳು ಜಿಲ್ಲೆಯಲ್ಲಿ ಇದನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ.

ಜಾಗೃತದಳ ಅಧಿಕಾರಿಗಳಿಲ್ಲ
ಕಳಪೆ ಬಿತ್ತನೆ ಬೀಜ, ಕಳಪೆ ರಸಗೊಬ್ಬರ ಪೂರೈಸುವ ಜಾಲಗಳಿಗೆ ಕಡಿವಾಣ ಹಾಕಿ ನಿಯಂತ್ರಣ ಮಾಡಲು ಕೃಷಿ ಇಲಾಖೆಯಲ್ಲಿ ಜಾಗೃತದಳ ಅಧಿಕಾರಿಗಳಿಲ್ಲ. ಇದರಿಂದ ಜಿಲ್ಲೆಯ ಗಡಿ ಭಾಗಗಳಲ್ಲಿ ನಕಲಿ ಬೀಜ, ರಸಗೊಬ್ಬರ ಹಾವಳಿ ಹೆಚ್ಚಿದೆ.

ಶಹಾಪುರ ತಾಲ್ಲೂಕಿನಲ್ಲಿ ‘ನಕಲಿ’ ಹಾವಳಿ ಜಾಸ್ತಿ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಆದರೆ, ಕಳಪೆಯನ್ನು ತಡೆಗಟ್ಟಲು ಅಧಿಕಾರಿಗಳು ಇಲ್ಲದಿದ್ದರಿಂದ ಅವರ ಕಟ್ಟಿಹಾಕಲು ವಿಫಲವಾಗಿದೆ.

ಅನಧಿಕೃತ, ಪರವಾನಗಿ ಇಲ್ಲದೇ ರಸಗೊಬ್ಬರ, ಬಿತ್ತನೆ ಬೀಜ ಮಾರಾಟ ಜಾಲವೂ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ಇವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದು ತಡವಾಗುವುದರಿಂದ ಇಂಥ ವ್ಯಾಪಾರ ಮಾಡುವವರು ಯಾವುದೇ ಅಂಜಿಕೆ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ಇನ್ನೂದರೂ ಎಚ್ಚೆತ್ತುಕೊಂಡು ಸರ್ಕಾರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಜಿಲ್ಲೆಯ ಸಾರ್ವಜನಿಕರ ಆಗ್ರಹವಾಗಿದೆ.

***

ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇವೆ. ಆದರೂ ಕೃಷಿ ಇಲಾಖೆಯ ಎಲ್ಲ ಕಾರ್ಯಕ್ರಮಗಳನ್ನು ಸರಿದೂಗಿಸಿಕೊಂಡು ಹೋಗಲಾಗುತ್ತಿದೆ
-ಆಬಿದ್‌ ಎಸ್‌.ಎಸ್‌., ಜಂಟಿ ಕೃಷಿ ನಿರ್ದೇಶಕ, ಕೃಷಿ ಇಲಾಖೆ
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು